ಇಂದು-ನಾಳೆ ಎಲ್ಲ ಕಡೆ ಬಜೆಟ್ ಕುರಿತು ಜೋರು ಗಂಟಲಿನ ವರದಿ-ವಿಶ್ಲೇಷಣೆ, ತಜ್ಞರ ಚರ್ಚೆ, ಅಂಕಿಸಂಖ್ಯೆಗಳ ಸರ್ಕಸ್ ಎಲ್ಲ ನಡೆಯುತ್ತವೆ. ಹೆಡ್‌ಲೈನ್‌ಗಳು ಚೀರುತ್ತವೆ. ಗ್ರಾಫಿಕ್ ಕಲಾವಿದರು ಕೈಚಳಕ ತೋರುತ್ತಾರೆ. ವಿರೋಧ ಪಕ್ಷದವರು ತೆಗಳುತ್ತಾರೆ, ಆಳುವ ಪಕ್ಷದವರು ಹೊಗಳುತ್ತಾರೆ. ವರದಿಗಾರರು ಬೀದಿಗಿಳಿದು ಜನಸಾಮಾನ್ಯರ ಎದುರು ಮೈಕ್ ಹಿಡಿದು ತಬ್ಬಿಬ್ಬುಗೊಳಿಸುತ್ತಾರೆ.
ಬಜೆಟ್‌ನಲ್ಲಿ ಘೋಷಿಸುವ ಅಮೋಘ ಹೆಡ್‌ಲೈನ್‌ಗಳೆಲ್ಲ ಹಳಸಿದ ಮೇಲೆ ಏನಾಗುತ್ತವೆ?
ಪ್ರಧಾನಿ ಮೋದಿಯವರ ಘಂಟಾಘೋಷದ ಪ್ರಕಾರ ಸ್ವಾತಂತ್ರ್ಯದ 75ನೇ ವರ್ಷ ಪೂರ್ತಿಗೊಳ್ಳುವ ಮೊದಲು ಪ್ರತಿ ಗ್ರಾಮವಾಸಿಗೂ ಪಕ್ಕಾ ಮನೆಯನ್ನು ಕಟ್ಟಿ ಕೊಟ್ಟೇ ಕೊಡಬೇಕಿತ್ತು. ಪ್ರತಿ ರೈತ ಕುಟುಂಬಕ್ಕೆ ಪಕ್ಕಾ ನೀರಾವರಿ, ಫಸಲು ರಕ್ಷಣೆಗೆ ತಂಪು ಉಗ್ರಾಣ, ನೀರೆತ್ತಲು ಸೋಲಾರ್ ಪಂಪ್, ಆದಾಯ ಇಮ್ಮಡಿ, ʼನಮಾಮಿ ಗಂಗೆʼ ಶುದ್ಧ ಫಳಫಳ….
ಅಸಲೀ ಕತೆ ಏನು ಎಂಬುದು ಹಿಂದಿನ ವರ್ಷಗಳ ಬಜೆಟ್ ನೋಡಿದರೆ ಗೊತ್ತಾಗುತ್ತದೆ. ಇಲ್ಲಿದೆ ಅಂಥದ್ದೊಂದು ಚಿಕ್ಕ ಪಟ್ಟಿ:
“ನೀರಾವರಿಗೆಂದು ಮುಂದಿನ ಐದು ವರ್ಷಗಳಲ್ಲಿ 86,500 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು” ಎಂದು 2016ರಲ್ಲಿ ಅಂದಿನ ಅರ್ಥ ಸಚಿವ ಜೇಟ್ಲಿಯವರು ಘೋಷಿಸಿದ್ದರು. ಆದರೆ ಇದುವರೆಗೆ ವ್ಯಯಿಸಿದ್ದು ಕೇವಲ ರೂ. 13,500 ಕೋಟಿ ಮಾತ್ರ.
ವಿದ್ಯುತ್ ಚಾಲಿತ ವಾಹನಗಳಿಗೆಂದು ಮುಂದಿನ ಮೂರು ವರ್ಷಗಳಲ್ಲಿ ಹತ್ತು ಸಾವಿರ ಕೋಟಿ ವಿನಿಯೋಗ ಮಾಡುತ್ತೇವೆಂದು 2019ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಎರಡು ವರ್ಷಗಳ ನಂತರ ಕೇವಲ ರೂ. 1575 ಕೋಟಿಗಳಷ್ಟೇ ವಿನಿಯೋಗವಾಗಿದೆ.
ನಾಲ್ಕು ಕೋಟಿ ಮನೆ ಕಟ್ಟುತ್ತೇವೆಂದು ಅರುಣ್ ಜೇಟ್ಲಿಯವರು ಹೇಳಿದ್ದರು. ಆದರೆ 1.70 ಕೋಟಿ ಮನೆಗಳಷ್ಟೇ ತಲೆ ಎತ್ತಿದವು. ನಗರಗಳಲ್ಲಿ ಎರಡು ಕೋಟಿ ಮನೆ ಕಟ್ಟಬೇಕಿತ್ತು. ಕೇವಲ 53 ಲಕ್ಷ ಮನೆಗಳಷ್ಟೇ ಸಿದ್ಧವಾಗಿವೆ.
ʼನಮಾಮಿ ಗಂಗೆʼಯ ಅದ್ಧೂರಿ ಪ್ರಚಾರವೂ ಇದೇ ದುಃಸ್ಥಿತಿಗೆ ತಲುಪಿದೆ. ʼಗಂಗಾ ಮಾತೆ ನನ್ನನ್ನು ಕರೆಸಿದ್ದಾಳೆʼ ಎಂದು ಹೇಳಿ ಮಾನ್ಯ ಮೋದಿಯವರು 2014ರಲ್ಲೇ ವೈಭವದ ʼಕ್ಲೀನ್ ಗಂಗಾʼ ಯೋಜನೆಗಳನ್ನು ಮುಂದಿಟ್ಟಿದ್ದರು. ದೇಶವಿದೇಶಗಳ ಭಕ್ತ ಜನರು ದಾನ ದಕ್ಷಿಣೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಬೇಕೆಂದು ವಿನಂತಿ ಮಾಡಿದ್ದರು. ಅದಕ್ಕೆಂದು ಜೇಟ್ಲಿಯವರ ಅಧ್ಯಕ್ಷತೆಯಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದು ಘೋಷಣೆ ಹೊರಡಿಸಲಾಗಿತ್ತು.
ಆದರೆ ಐದು ವರ್ಷಗಳಲ್ಲಿ ಒಟ್ಟೂ ಸೇರಿ ಮೂರು ಸಭೆಗಳಷ್ಟೇ ನಡೆದವು. ಜನರೇನೊ ತುಸು ಮಟ್ಟಿಗೆ ರೂ. 240 ಕೋಟಿ ಚಂದಾ ನೀಡಿದರು. ಅದರಲ್ಲಿ ಕೇವಲ 90 ಕೋಟಿ ವಿನಿಯೋಗವಾಗಿದೆ. ಬಜೆಟ್‌ನಲ್ಲಿ ರೂ. 17,700 ಕೋಟಿ ಮೀಸಲಿಟ್ಟು 227 ಯೋಜನೆಗಳನ್ನು ಜಾರಿಗೆ ತರುತ್ತೇವೆಂದು 2018ರ ಬಜೆಟ್ ಭಾಷಣದಲ್ಲಿ ಹೇಳಲಾಗಿತ್ತು. ಐದು ವರ್ಷಗಳ ನಂತರ ನೋಡಿದರೆ 9781 ಕೋಟಿ ಮಾತ್ರ ಬಳಕೆಯಾಗಿದೆ.
ರೈತರ ವರಮಾನವನ್ನು ಇಮ್ಮಡಿ ಮಾಡುವುದಾದರೆ ಅದರ ಕುರಿತ ಸಂಶೋಧನೆಗೆಂದು ಬಜೆಟ್‌ನಲ್ಲಿ ಮೂರು ಪಟ್ಟು ಹಣವನ್ನು ಮೀಸಲಿಡಬೇಕು ಎಂದು ಅಶೋಕ್ ಗುಲಾಟಿ ಈಗ ಹೇಳಿದ್ದಾರೆ. ಅಂದರೆ ಈಗಿನ್ನೂ ರೈತರ ಆದಾಯ ಇಮ್ಮಡಿ ಕುರಿತ ವಿಧಿವಿಧಾನಗಳ ರೂಪುರೇಷೆ ಕೂಡ ತಯಾರಾಗಲಿಲ್ಲ.
ಅಟಲ್ ಭೂಜಲ್ (ಅಂತರ್ಜಲ) ಯೋಜನೆಯ ಪ್ರಕಾರ, 6000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಲಾಗಿತ್ತು. ಇದರ ಪ್ರಕಾರ ಪ್ರತಿ ವರ್ಷ 1500 ಕೋಟಿ ವಿನಿಯೋಗ ಮಾಡಬೇಕಿತ್ತು. ಕಳೆದ ವರ್ಷ ಅದಕ್ಕೆಂದು ಕೇವಲ 200 ಕೋಟಿಯನ್ನು ತೆಗೆದಿಡಲಾಗಿತ್ತು. ಅದನ್ನೂ ಆಮೇಲೆ ಕಡಿತ ಮಾಡಿ 125 ಕೋಟಿಗೆ ಇಳಿಸಲಾಯಿತು. ವಿನಿಯೋಗವಾಗಿದ್ದು ಕೇವಲ 37 ಕೋಟಿ.
ಭಾರೀ ಘೋಷಣೆ, ಭಾರೀ ಪ್ರಚಾರದೊಂದಿಗೆ 2019ರಲ್ಲಿ ಪ್ರಧಾನ ಮಂತ್ರಿಯವರು ರೈತರ ಸೋಲಾರ್ ಪಂಪ್‌ಗೆಂದು ʼಕುಸುಮ್ʼ ಯೋಜನೆ ಆರಂಭಿಸಲು ರೂ. 34000 ಕೋಟಿ ಘೋಷಣೆಯಾಗಿತ್ತು. ಈ ವರ್ಷ ಯೋಜನೆ ಪೂರ್ಣಗೊಳ್ಳಬೇಕಿತ್ತು. ವಿದ್ಯುತ್ ಗ್ರಿಡ್‌ನ ಅವಲಂಬನೆ ಇಲ್ಲದ 17.5 ಲಕ್ಷ ಸ್ವತಂತ್ರ ಸೋಲಾರ್ ಪಂಪ್ ಕೆಲಸ ಆರಂಭಿಸಬೇಕಿತ್ತು. ಆದರೆ ಒಂದು ಲಕ್ಷ ಪಂಪ್‌ಗಳ ಸ್ಥಾಪನೆಯೂ ಆಗಲಿಲ್ಲ. 75,018 ಪಂಪ್‌ಗಳ ಸ್ಥಾಪನೆ ಆಗಿದೆ.
2018ರ ಬಜೆಟ್‌ನಲ್ಲಿ ರೈತರಿಗಾಗಿ ಆಪರೇಶನ್ ಗ್ರೀನ್ʼ ಯೋಜನೆಯನ್ನು ಘೋಷಿಸಿತ್ತು. ಶೀಘ್ರ ಕೊಳೆಯುವ ಟೊಮಾಟೊ, ಆಲೂಗಡೆ, ಈರುಳ್ಳಿಯಂತ ಫಸಲುಗಳ ಸಂರಕ್ಷಣೆಗೆಂದು ತಂಪುಗೋದಾಮುಗಳನ್ನು ಸ್ಥಾಪಿಸಬೇಕಿತ್ತು. ಮರುವರ್ಷ ಬಜೆಟ್‌ನಲ್ಲೂ ಇದನ್ನು ಮತ್ತೆ ಶ್ಲಾಘಿಸಿ 22 ಫಸಲುಗಳನ್ನು ಇದಕ್ಕೆ ಜೋಡಿಸಲಾಯಿತು. ಕಳೆದ ವರ್ಷ ಕೇವಲ 10 ಯೋಜನೆಗಳಿಗೆ ಮಂಜೂರಿ ನೀಡಲಾಯಿತು. ಅದರಲ್ಲೂ ಐದು ರದ್ದಾದವು. ಬರೀ ಐದು ಯೋಜನೆಗಳು ಜಾರಿಗೆ ಬಂದಿವೆ. ಇದಕ್ಕೆಂದು 200 ಕೋಟಿ ವೆಚ್ಚ ಮಾಡಬೇಕಿತ್ತು. ಆದರೆ ಸಿಕ್ಕಿದ್ದು ಕೇವಲ ಎರಡು ಕೋಟಿ. ಶೇ.99ರಷ್ಟು ಹಣ ಖರ್ಚಾಗಲೇ ಇಲ್ಲ.
ʼಇದು ಹೆಡ್‌ಲೈನ್ ಮೂಲಕ ದೇಶದ ಪ್ರಗತಿಯನ್ನು ಬಿಂಬಿಸುವ ಕಥನʼ ಎನ್ನುತ್ತಾರೆ, ಎನ್‌ಡಿಟಿವಿಯ ರವೀಶ್ ಕುಮಾರ್. ಇವರು ಕೊಟ್ಟ ಅಂಕಿಸಂಖ್ಯೆಗಳೆಲ್ಲಕ್ಕೂ ಖಚಿತ ಆಧಾರಗಳನ್ನು ಒದಗಿಸಿದ್ದಾರೆ. ಅಲ್ಲಲ್ಲಿ ಪ್ರಧಾನಿ ಮೋದಿಯವರು ನೀಡಿದ ಅಮೋಘ ಭಾಷಣಗಳ ತುಣುಕುಗಳೂ ಇವೆ. ಅವನ್ನಿಲ್ಲಿ ಕೈಬಿಡಲಾಗಿದೆ. ಆಸಕ್ತರು ಈ ಕೆಳಗಿನ ಲಿಂಕ್ ಒತ್ತಿ ಚೆಕ್ ಮಾಡಬಹುದು: ಇವರ ನಿನ್ನೆ ರಾತ್ರಿಯ 9ಗಂಟೆಯ ಸುದ್ದಿ ವಿಶ್ಲೇಷಣೆಯ ಪೂರ್ವಾರ್ಧವೆಲ್ಲ ಪೆಗಾಸಸ್ ಹಗರಣ ಕುರಿತಾಗಿದ್ದು ಉತ್ತರಾರ್ಧದಲ್ಲಿ ಬಜೆಟ್ ಎಂಬ ವೀರಗಾಸೆಯ ಕುರಿತಾಗಿದೆ.
ಇಂದಿನ ಬಜೆಟ್ ಬಗ್ಗೆ ಚರ್ಚೆ ಮಾಡುವುದಕ್ಕಿಂತ ನಮ್ಮ ಮಾಧ್ಯಮಗಳು ಹಿಂದಿನ ಬಜೆಟ್‌ಗಳ ವಿಶ್ಲೇಷಣೆ ಮಾಡುವುದಿಲ್ಲ ಏಕೆ?