ರಭಸದಿಂದ ಹರಿಯುತ್ತಿದ್ದ ಮಹಾ ನದಿ ಇದ್ದಕ್ಕಿದ್ದಂತೆ ಸಣ್ಣ ನಾಲೆಯಂತೆ ನಿಧಾನವಾಗಿ ಚಲಿಸಲು ಪ್ರಾರಂಭಿಸಿತು, ಆದರೆ ಬಹರೈನ್ ನಲ್ಲಿ ಜನಜೀವನದ ಹರಿವು ನಿಲ್ಲಲಿಲ್ಲ.
ಕೋವಿಡ್ ಎರಗಿದ ಸಂದರ್ಭದಲ್ಲಿ ಪ್ರಮುಖ ರಾಷ್ಟ್ರಗಳ ಶಕ್ತಿಶಾಲಿ ನಾಯಕರುಗಳು ಜನರ ಹಿತಕ್ಕಿಂತ ಬಂಡವಾಳಶಾಹಿ ವ್ಯವಸ್ಥೆಗೆ ಹೆಚ್ಚು ಬಧ್ದತೆ ತೋರಿಸಿದ ಸಂದರ್ಭದಲ್ಲಿ ಕೋವಿಡನ್ನು ಪಳಗಿಸಲು, ಕೋವಿಡ್ ಜೊತೆ ಬದುಕಲು ಮತ್ತು ಅದರಿಂದ ಮುಕ್ತಿ ಪಡೆಯಲು ಒಂದು ದಿನವೂ ಲಾಕ್’ಡೌನ್ ಘೋಷಿಸದೆ ಜನರ ಜೀವನ ಬೆಳಗಿಸಲು ಗಲ್ಫ್ ನ ಅತೀ ಸಣ್ಣ ದೇಶವಾದ ಬಹರೈನ್ ದೇಶ ನಡೆಸಿದ ಎಚ್ಚರಿಕೆಯ ಪ್ರಯೋಗದ ಯಶೋಗಾಥೆ ವರ್ಣನಾತೀತ.
ಕೊರೋನ ಬಂದಾಗಿನಿಂದ ಬಹರೈನ್ ನಲ್ಲಿ ಒಂದು ದಿನವೂ ಸಂಪೂರ್ಣ ಲಾಕ್ ಡೌನ್ ಘೋಷಿಸಿಲ್ಲ. ಬಲವಂತವಾಗಿ ಮುಚ್ಚಲು ಯಾವುದೇ ಸೂಚನೆಗಳನ್ನು ನೀಡಿಲ್ಲ. ಯಾವುದೇ ಸರ್ಕಾರಿ ಕಚೇರಿ ಮುಚ್ಚಿಲ್ಲ. ವಿದೇಶಿ ಕಾರ್ಮಿಕರು ಹೆಚ್ಚಾಗಿ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೊಗದಲ್ಲಿದ್ದಾರೆ, ಅಂತಹ ಸ್ಥಳದಲ್ಲಿ ಒಂದೇ ಒಂದು ದಿನ ಕೆಲಸವನ್ನು ನಿಲ್ಲಿಸಿಲ್ಲ. ಸಾರ್ವಜನಿಕ ಬಸ್ ಸೇವೆ ಎಂದಿಗೂ ನಿಲ್ಲಲಿಲ್ಲ. ಯಾರೂ ಯಾರನ್ನೂ ಯಾವುದೇ ರೀತಿಯಲ್ಲಿ ತಡೆಯಲಿಲ್ಲ. ಯಾವುದೇ ರಸ್ತೆ, ಗಡಿಗಳು ಮುಚ್ಚಲ್ಪಟ್ಟಿಲ್ಲ. ನೆರೆಹೊರೆಯವರು ಪರಸ್ಪರ ಬಹಿಷ್ಕರಿಸಿಲ್ಲ.
ಮನುಷ್ಯರು ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು, ಸ್ಯಾನಿಟೈಜರ್ ಮತ್ತು ಕೈಗವಸುಗಳನ್ನು ಬಳಸಿ ಸೂಪರ್ ಮಾರ್ಕೆಟ್ ಗಳು ಕಾರ್ಯನಿರ್ವಹಿಸಿದವು, ಮೀನು ಮಾರುಕಟ್ಟೆಗಳು, ತರಕಾರಿ ಮಳಿಗೆಗಳಂತಹ ಅಗತ್ಯ ಸಾಮಗ್ರಿಗಳ ಮಳಿಗೆಗಳು ತೆರೆದಿದ್ದರೂ ಜನ ಸೇರುವ ಸ್ಥಳಗಳಾದ ಶಾಲೆಗಳು, ಪ್ರಾರ್ಥನಾ ಸ್ಥಳಗಳು, ಚಿತ್ರಮಂದಿರಗಳು, ಇತ್ಯಾದಿ ತೀವ್ರವಾದ ಸಾಮಾಜಿಕ ಅಂತರ ಪಾಲಿಸಲಾಗದ ಸ್ಥಳಗಳಲ್ಲಿ ಮಾತ್ರ ನಿಷೇಧ ಹೇರಲ್ಪಟ್ಟಿತ್ತು. ಹೋಟೆಲ್/ರೆಸ್ಟೊರೆಂಟ್ ಗಳ ವಿಷಯಕ್ಕೆ ಬರುವುದಾದರೆ ಆಹಾರವನ್ನು ಪಾರ್ಸೆಲ್ ಹಾಗೂ ಡೆಲಿವರಿ ಮುಖಾಂತರ ಪೂರೈಸಲ್ಪಟ್ಟವು…
ಇನ್ನು ಮೆಡಿಕಲ್ ಗೆ ಸಂಬಂದಪಟ್ಟಂತೆ ಅತ್ಯುತ್ತಮ ಮತ್ತು ಅತ್ಯಂತ ಯಶಸ್ವಿ ಚಿಕಿತ್ಸಾ ಸೌಲಭ್ಯಗಳನ್ನು ಬಹರೈನ್ ರಾಷ್ಟ್ರ ತನ್ನ ಪ್ರಜೆಗಳಿಗೆ ನೀಡಿದೆ .ಅದಲ್ಲದೆ ವಿವಿಧ ರೀತಿಯ ಕೋವಿಡ್ ಮೆಡಿಕಲ್ ಸೌಲಭ್ಯಗಳು, ಚಿಕಿತ್ಸಾ ವಿಧಾನ, ಯಶಸ್ಸಿನ ಪ್ರಮಾಣ, ಕ್ಲಿನಿಕಲ್ (ವೈದ್ಯ : ರೋಗಿ) ಸಿಬ್ಬಂದಿಯ ಅನುಪಾತ, ರೋಗಿಗೆ ನಂತರದ ಆರೈಕೆ ಮತ್ತು ದೀರ್ಘಕಾಲೀನ ಚೇತರಿಕೆ ಹೀಗೆ ಒಟ್ಟಾರೆ ಇಲ್ಲಿನ ಸರ್ಕಾರ ಅತ್ಯುತ್ತಮವಾದುದನ್ನೇ ತನ್ನ ಪ್ರಜೆಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.
ಬಹರೈನ್ ರಾಷ್ಟ್ರ ವಾಕ್ಸಿನ್’ನ ಸಮರ್ಪಕ ಪೂರೈಕೆಯಲ್ಲೂ ಯಶಸ್ವಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ,ಮಕ್ಕಳನ್ನು ಹೊರತುಪಡಿಸಿ ದೇಶದ ಪ್ರತಿಯೊಬ್ಬ ಪ್ರಜೆಯು ಎರಡನೇ ಸುತ್ತಿನ ವಾಕ್ಸಿನ್ ಪಡೆದುಕೊಂಡಿದ್ದಾರೆ. ಇದರಲ್ಲಿ ಗಮನಿಸಬಹುದಾದ ಒಂದು ಪ್ರಮುಖ ಅಂಶವೆಂದೆರೆ ಇಲ್ಲಿ ವ್ಯಾಕ್ಸಿನ್ ಗೆ (ಪ್ಫೈಝರ್, ಸ್ಪುಟ್ನಿಕ್, ಸಿನೋಫಾರ್ಮ್, ಕೋವಿಶೀಲ್ಡ್…. ಇತ್ಯಾದಿಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು) ಅದಕ್ಕೆ ನಾವು ಯಾವುದೇ ರೀತಿಯ ಹಣವನ್ನ ಕೊಡಬೇಕಿಲ್ಲ, ನಿಗದಿತ ಸಮಯದಲ್ಲಿ ಸರ್ಕಾರದಿಂದಲೇ ನಮಗೆ ಎಲ್ಲಾ ಅಗತ್ಯ ಮಾಹಿತಿಗಳು ನಮ್ಮ ಫೋನ್ ಆ್ಯಾಪ್ ಮುಖಾಂತರ ಬಂದು ತಲುಪಲಿವೆ. ಹಾಗೂ ವಾಕ್ಸೀನ್ ಪಡೆದುಕೊಂಡ ವ್ಯಕ್ತಿ ಉದ್ಯೊಗದಲ್ಲಿದ್ದರೆ ಆತನ ಕಂಪನಿ ಅವನಿಗೆ ಒಂದು ದಿನದ ರಜೆ ನೀಡ ಬೇಕು ಎಂದೂ ಸಹ ಸೂಚಿನೆಯಲ್ಲಿದೆ.
ವಿಶ್ವದ ಬೃಹತ್ ರಾಷ್ಟ್ರಗಳು ಕೋವಿಡ್ ಮಹಾಮಾರಿಗೆ ಬೆಚ್ಚಿ ಬಿದ್ದು ನೆಲಕ್ಚಚಿದ ಸಂದರ್ಭದಲ್ಲಿ ಒಂದು ಪುಟ್ಟದಾದ ಧ್ವೀಪ ರಾಷ್ಟ್ರ ಕೋವಿಡ್ ನಿಯಂತ್ರಿಸುವಲ್ಲಿ ಇಟ್ಟ ದಿಟ್ಟ ಹೆಜ್ಜೆಯನ್ನು ಮೆಚ್ಚಲೇಬೇಕು.
ಇನ್ನು ಭಾರತದ ಜನಸಂಖ್ಯೆಗೂ ಬಹರೈನ್ ಜನಸಂಖ್ಯೆಗೂ ತಾಳೆ ಮಾಡಿ ಮಾತಾಡುವುದು ಸಮಂಜಸವಲ್ಲವಾದರೂ, ಬಹರೈನ್ ಸರ್ಕಾರ ತೆಗೆದುಕೊಂಡ ನಿರ್ಧಾರ, ನಿಬಂಧನೆಗಳಿಂದಾಗಿ ಕರೋನ ವಿರುದ್ಧ ಹೋರಾಡಲು ಸಾಧ್ಯವಾಗಿದೆ ಎನ್ನಬಹುದು.
ಭಾರತದಲ್ಲಿ ಸುಮಾರು 130+ ಕೋಟಿ ಜನರಲ್ಲಿ ಬಹುತೇಕರು 18+ ಜನಸಂಖ್ಯೆ ಇರುವವರು. ಇವರೆಲ್ಲರಿಗೂ ಸರಿಯಾದ ಕರೋನ ಕುರಿತು ಜಾಗೃತಿ ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದ್ದಂತೂ ಸುಳ್ಳಲ್ಲ. ಸ್ವತಂತ್ರ ಬಂದು 75 ವರ್ಷ ಕಳೆದರೂ ಇನ್ನೂ ನಮ್ಮ ದೇಶ ಅಭಿವೃದ್ಧಿಯಾಗುತ್ತಿರುವ ದೇಶವೆಂದೇ ಕರೆಸಿಕೊಳ್ಳುತ್ತಿದೆ. ಅರ್ಥಿಕ ಬಿಕ್ಕಟ್ಟಿನಿಂದ ಸಾವಿರಾರು ಉದ್ಯೋಗಸ್ಥರು ದಿನನಿತ್ಯ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶವನ್ನೇ ಲಾಕ್ ಮಾಡಿದರೆ ದಿನ ಕೂಲಿ ಕಾರ್ಮಿಕರು, ವರ್ತಕರು, ಬೀದಿಬದಿ ವ್ಯಾಪಾರಿಗಳು ಅಲೆಮಾರಿಗಳ ಕತೆ ಏನು ಅನ್ನುವುದನ್ನಾದರು ಅರಿಯದೆ ಸರ್ಕಾರ ದೇಶವನ್ನು ಸಂಪೂರ್ಣವಾಗಿ ಲಾಕ್ ಮಾಡಿತ್ತು.
ಆದರೆ ಇದರ ತದ್ವಿರುದ್ಧವಾಗಿ ಬಹರೈನ್ ದೇಶ ಉತ್ತಮವಾದ, ಜನಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಇತರೆ ದೇಶಗಳಿಗೆ ಮಾದರಿಯಾಗಿದೆ. ಹೆಚ್ಚು ಜನಸೇರುವ ಆಯ್ದ ಕ್ಷೇತ್ರಗಳಲ್ಲಿ ಮಾತ್ರ ನಿರ್ಬಂಧಿಸಿ ಇತರೆ ವಹಿವಾಟಿಗೆ ಅವಕಾಶ ಮಾಡಿಕೊಟ್ಟು, ಕರೋನ ಕುರಿತು ಸ್ಪಷ್ಟವಾದ ಜಾಗೃತಿ ಮೂಡಿಸಿ ಕರೋನ ವಿರುದ್ಧ ಹೋರಾಡಲು ಸಾಧ್ಯವನ್ನಾಗಿಸಿದೆ.
ಇನ್ನು ಲಸಿಕೆ ವಿಷಯಕ್ಕೆ ಬಂದರೆ, ಲಸಿಕೆ ವಿಷಯವಾಗಿಯೇ ನಮ್ಮ ದೇಶದಲ್ಲಿ ಇನ್ನೂ ಊಹಾಪೋಹಗಳು ಹರಿದಾಡುತ್ತಲೇ ಇದೆ. ಲಸಿಕಾ ಹಿಂಜರಿತ ಕುರಿತು ಸ್ಪಷ್ಟವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಸರಿಯಾದ ಕ್ರಮ ಕೈಕೊಂಡಿಲ್ಲ ಹಾಗೂ ಲಸಿಕಾ ಅಭಿಯಾನಕ್ಕೆ ಒಂದು ಪರಿಪೂರ್ಣ ಡ್ರಾಪ್ಟ್ ಹಾಕಿಕೊಂಡತ್ತಿಲ್ಲ. ಅನೇಕ ಕರೋನ ಲಸಿಕೆಗಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಸರ್ಕಾರಿ ಸೌಮ್ಯದಲ್ಲಿ ಕೇವಲ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎರಡು ಲಸಿಕೆ ಮಾತ್ರ ಇದ್ದು ಕೇಂದ್ರ ಲಸಿಕೆ ಕೊಂಡು ರಾಜ್ಯಕ್ಕೆ ನೀಡುತ್ತಿದೆ.
ಆದರೆ ಬಹರೈನ್ ದೇಶ ನಾಲ್ಕಕ್ಕೂ ಅಧಿಕ ಕರೋನ ಲಸಿಕೆಗಳಿಗೆ ಅನುಮೋದನೆ ನೀಡಿ ಅದರಲ್ಲಿ ಯಾವುದಾದರೊಂದು ನೀವು ಆಯ್ದು ತೆಗೆದುಕೊಳ್ಳಿ ಅನ್ನುವ ಆಯ್ಕೆ ನೀಡಿರುವುದು ಮತ್ತು ಲಸಿಕೆ ಕುರಿತು ತನ್ನ ಪ್ರಜೆಗಳಿಗೆ ಜಾಗೃತಿ ನೀಡಿರುವುದು ಇಲ್ಲಿನ ಸಂಪೂರ್ಣ ಲಸಿಕೆ ಅಭಿಯಾನಕ್ಕೆ ಸಂದ ಜಯ ಅನ್ನಬಹುದು.
ಬಹರೈನ್ ನ ಅಸಾಧಾರಣ ಕೆಲಸ, ಸಮರ್ಪಣೆ ಮತ್ತು ಪ್ರತ್ಯೇಕತೆಯನ್ನು ಹೇಳಲು ಇಲ್ಲಿ ನೆಲೆಸಿರುವ ಭಾರತೀಯನಾದ ನಾನು ಹೆಮ್ಮೆಪಡುವ ಸಮಯದಲ್ಲಿ ನನ್ನ ದೇಶದ ಅಸಮರ್ಪಕ ಆಡಳಿತ, ಹಾಗೂ ಕೋವಿಡ್ ಹೆಸರಿನಲ್ಲಿ ರಾಜಕೀಯ ವ್ಯಕ್ತಿಗಳೂ ಸೇರಿ ನಡೆಸುವ ಅವ್ಯವಹಾರವನ್ನು ನೆನೆದು ದುಃಖಭರಿತನಾಗುತ್ತೇನೆ.
–ನವಾಝ್ ಮದ್ಪಾಡಿ