ಹಾವೇರಿ (Haveri): ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ದಿಢೀರ್ ಇಳಿಕೆಯಾಗಿದ್ದರಿಂದ ಆಕ್ರೋಶಗೊಂಡ ರೈತರು, ಎಪಿಎಂಸಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ಅಲ್ಲದೆ, ಆವರಣದಲ್ಲಿ ನಿಂತಿದ್ದ ಎಪಿಎಂಸಿ ಅಧ್ಯಕ್ಷರ ಕಾರಿನ ಮೇಲೂ ಕಲ್ಲು ತೂರಿದ್ದಾರೆ. ಅಲ್ಲದೆ ಹಲವು ವಾಹನಗಳಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಮೆಣಸಿನಕಾಯಿಗೂ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಮಾರ್ಕೆಟ್ನಲ್ಲಿ ದಟ್ಟಹೊಗೆಯಿಂದ ಸಾರ್ವಜನಿಕರ ಉಸಿರಾಟಕ್ಕೆ ಸಮಸ್ಯೆ ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.
ಇದುವರೆಗೆ 12 ವಾಹನಗಳನ್ನು ರೈತರು ಸುಟ್ಟು ಹಾಕಿದ್ದಾರೆ. 1 ಅಗ್ನಿಶಾಮಕ ವಾಹನ ಸಹ ಬೆಂಕಿಗೆ ಆಹುತಿ ಆಗಿದೆ. ಒಟ್ಟು 3 ಅಗ್ನಿಶಾಮಕ ವಾಹನ ಸ್ಥಳದಲ್ಲಿ ಇವೆ.
ಕಳೆದ ವಾರ ಪ್ರತಿ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 20 ಸಾವಿರ ರೂ. ಇತ್ತು. ಈಗ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 12 ಸಾವಿರ ರೂಪಾಯಿಗೆ ಕುಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಎಪಿಎಂಸಿ ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿ ರೈತರು ಆಕ್ರೋಶ ಹೊರಹಾಕಿದ್ದಾರೆ.
#karnataka #haveri #byadgi #chillipricesfall #farmersprotest