ಬೆಂಗಳೂರು: ಹಿಂದುಳಿದವರು, ದಲಿತರು ತಮ್ಮ ವಿರೋಧಿಗಳಾದ BJP, RSS, ABVP ಸೇರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, BJP-RSS ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರ್ತಾರಲ್ಲ. ಇದಕ್ಕೆ ಏನು ಮಾಡೋದು ಎಂದು ಬೇಸರ ವ್ಯಕ್ತಪಡಿಸಿದರು.

ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ BJP-RSS ಸೇರಿ ಇವರೇ ಮೂಲ RSS ನವರಿಗಿಂತ, ಇವರೇ ಹೆಡ್ಗೇವಾರ್ ರೀತಿ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಹಾವನೂರು ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದಾರೆ. ಸುಪ್ರೀಂಕೋರ್ಟ್ ಕೂಡ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ. ಸಾಮಾನ್ಯ ಹಳ್ಳಿಯ ಪರಿಶಿಷ್ಟ ಕುಟುಂಬದಲ್ಲಿ ಹುಟ್ಟಿದ ಹಾವನೂರು ಅವರು ವಿದ್ಯಾರ್ಥಿ ದೆಸೆಯಲ್ಲೇ ಪ್ರತಿಭಟನೆ ಮಾಡುವ ಗುಣ ಹೊಂದಿದ್ದರು. ಹಾವನೂರು ಅವತು ಈ ಜಾತಿಯ ಮೊದಲ ವಕೀಲರಾಗಿದ್ದರು ಎಂದು ಸ್ಮರಿಸಿದ್ದಾರೆ. ಹಾಗೆ ಬೇಡರ ಜಾತಿಯಲ್ಲಿ ಜನಿಸಿದ ಹಾವನೂರು ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕಾಗ ಹೊರಗೆ ಬರುತ್ತದೆ. ಹಾಗಾಗಿ ದಮನಿತ ಜಾತಿಗಳಿಗೆ ಅವಕಾಶ ಮುಖ್ಯ ಎಂದರು.

ನಾನು 1991 ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದೆ. ಆಗ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದೆ. ನನ್ನ ಅರ್ಜಿ ಪರವಾಗಿ ಹಾವನೂರು ಅವರು ವಾದಿಸಿದ್ದರು. ಆ ಸಂದರ್ಭದಲ್ಲಿ ನಾನು ಹಾವನೂರು ಅವರ ಜೊತೆ ಆತ್ಮೀಯತೆ ಬೆಳೆದಿತ್ತು ಎಂದು ಸ್ಮರಿಸಿದರು.

ಇದೇ ವೇಳೆ ಮನುಸ್ಮೃತಿಯ ಶೂದ್ರ ವಿರೋಧಿ ಅಧ್ಯಾಯಗಳನ್ನು ಸಿಎಂ ಭಾಷಣದ ಮಧ್ಯೆ ಓದಿದರು. ಶೂದ್ರ ಸಮುದಾಯವನ್ನು ನಾಯಿಗೆ ಹೋಲಿಸಿ ತಾರತಮ್ಯ ಆಚರಿಸುವ ಶ್ಲೋಕಗಳನ್ನು ಓದಿ, ನೀವೆಲ್ಲಾ ಮನುಸ್ಮೃತಿ ಓದಿ ಜಾತಿ ತಾರತಮ್ಯದ ಪ್ರಮಾಣವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.














