ನಮ್ಮ ದೇಶ ಹಲವು ಜಾತಿ, ಧರ್ಮದ ಜನರಿಂದ ಕೂಡಿದ್ದು, ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಭಿನ್ನವಾಗಿದೆ. ಹೀಗಾಗಿ ಅಂಬೇಡ್ಕರ್ ಅವರು ಜಗತ್ತಿನ ವಿವಿಧ ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ನಡೆಸಿ, ಅರಿತು ಈ ದೇಶಕ್ಕೆ ಅಗತ್ಯವಾದ ಸಂವಿಧಾನ ರಚನೆ ಮಾಡಿದ್ದಾರೆ. ಒಂದು ವೇಳೆ ಬಾಬಾ ಸಾಹೇಬರು ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗದಿದ್ದರೆ ಇಂಥಾ ಶ್ರೇಷ್ಠ ಸಂವಿಧಾನ ನಮಗೆ ಸಿಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದ ಭೋವಿ ಸಮುದಾಯದ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ಕಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಎಂಬುವವರು ಅಂಬೇಡ್ಕರ್ ಬಗೆಗಿನ ಪಠ್ಯದಲ್ಲಿದ್ದ “ಸಂವಿಧಾನ ಶಿಲ್ಪಿ” ಎಂಬ ಪದವನ್ನೇ ತೆಗೆದುಹಾಕಿದ್ದಾರೆ. ಎಂಥಾ ಅನ್ಯಾಯ ಅಲ್ವಾ ಇದು? ಕುವೆಂಪು ಅವರು ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಅವರ ಪಠ್ಯವನ್ನು ತಿರುಚಿದ್ದಾರೆ. ನಾರಾಯಣ ಗುರು, ಭಗತ್ ಸಿಂಗ್ ಅವರ ವಿಷಯವನ್ನು ಕೈಬಿಡಲಾಗಿದೆ. ಮಕ್ಕಳಿಗೆ ಹಿಂದಿನ ಚರಿತ್ರೆ ತಿಳಿಸೋದು ಬೇಡವೇ? ಚರಿತ್ರೆ ಓದಿ, ಹಿಂದಿನ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕು. ಇದಕ್ಕಾಗಿ ಇತಿಹಾಸದ ಜ್ಞಾನ ಮುಖ್ಯ. ಹೀಗಾಗಿಯೇ ಅಂಬೇಡ್ಕರ್ ಅವರು ಯಾರಿಗೆ ಚರಿತ್ರೆ ಗೊತ್ತಿಲ್ಲ ಅವರು ಭವಿಷ್ಯ ರೂಪಿಸಲಾರರು ಎಂದು ಹೇಳಿದ್ದರು.
ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು ಎಂಬುದನ್ನು ನಾವು ನೀವೆಲ್ಲಾ ಓದಿದ್ದೇವೆ, ಇದೇ ಸತ್ಯವನ್ನು ನಾನು ಹೇಳಿದ್ದಕ್ಕೆ ನನ್ನನ್ನು ಹಿಂದೂ ವಿರೋಧಿ, ಆರ್, ಎಸ್, ಎಸ್ ವಿರೋಧಿ ಎಂದರು. ಸತ್ಯವನ್ನು ಯಾವಾಗಲೂ ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಮಿಲ್ಲರ್ ಆಯೋಗ ರಚನೆ ಮಾಡಿ, ದೇಶದಲ್ಲೇ ಮೊದಲು 1917 ರಲ್ಲಿ ಬ್ರಾಹ್ಮಣೇತತರಿಗೆ ಮೀಸಲಾತಿ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಆಗ ದಿವಾನರಿಂದಲೂ ವಿರೋಧ ವ್ಯಕ್ತವಾಗಿತ್ತು. 25% ಬ್ರಾಹ್ಮಣರಿಗೆ, 75% ಬ್ರಾಹ್ಮಣೇತರರಿಗೆ ಮೀಸಲಾತಿ ನೀಡಿದ್ದರು.
ಭೋವಿ ಸಮಾಜದ ಜನ ಬಹಳ ನಿಯತ್ತಿನ, ನಂಬಿಕಸ್ಥ ಜನ. ನಾನು ಸುಮಾರು 13 ಚುನಾವಣೆ ನೋಡಿದ್ದೇನೆ, ಈ ಎಲ್ಲಾ ಚುನಾವಣೆಗಳಲ್ಲಿ ನನಗೆ ಸಹಾಯ ಮಾಡಿದವರು ಭೋವಿ ಸಮಾಜದ ಜನರು. ನಾನು, ಶಿವರಾಜ್ ತಂಗಡಗಿ ಅವರು ಸೇರಿ ಬೆಂಗಳೂರಿನಲ್ಲಿ ಭೋವಿ ಸಮಾಜದ ಬೃಹತ್ ಸಮಾವೇಶ ಮಾಡಿದ್ದೆವು, ಅಂದಿನ ಸಮಾವೇಶದಲ್ಲಿ ಶ್ರೀಗಳು ಭೋವಿ ನಿಗಮ ಸ್ಥಾಪನೆ ಮಾಡಿಕೊಡಿ ಎಂದು ಹೇಳಿದರು. ಅವರ ಮನವಿಯನ್ನು ಪುರಸ್ಕರಿಸಿ ನಿಗಮ ಸ್ಥಾಪನೆ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ. ಭೋವಿ ಸಮಾಜಕ್ಕೆ ನೀಡಿದ್ದ ಜಮೀನು ವ್ಯಾಜ್ಯ 4 ವರ್ಷದಿಂದ ನ್ಯಾಯಾಲಯದಲ್ಲಿದೆ, ಸರ್ಕಾರ ಒಳ್ಳೆ ನ್ಯಾಯವಾದಿಗಳನ್ನು ನೇಮಿಸಿ ಕೇಸ್ ಗೆಲ್ಲುವಂತೆ ನೋಡಿಕೊಳ್ಳಬೇಕಿತ್ತು. ಅದನ್ನು ಮಾಡುತ್ತಿಲ್ಲ.
ಅವಕಾಶ ವಂಚಿತ ಜನರಿಗೆ ಕೇವಲ ಮತ ಚಲಾಯಿಸುವ ಹಕ್ಕಿದ್ದರೆ ಸಾಲದು, ಈ ಜನರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. 2013 ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಬಳಕೆಯಾಗುವ ಅನುದಾನ ಹಂಚಿಕೆಯಾಗಬೇಕು ಎಂದು ಎಸ್, ಸಿ, ಪಿ / ಟಿ, ಎಸ್, ಪಿ ಕಾಯ್ದೆ ರೂಪಿಸಿ ಜಾರಿಗೆ ತಂದಿದ್ದು ನಮ್ಮ ಸರ್ಕಾರ. 2018ರಲ್ಲಿ ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ 29,900 ಕೋಟಿ, ಆಗ ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ. ಈಗಿನ ಬಜೆಟ್ ಗಾತ್ರ 2.65 ಲಕ್ಷ ಕೋಟಿ, ಈ ಯೋಜನೆಗೆ ನೀಡಿರುವ ಅನುದಾನ ಕೇವಲ 28,700 ಕೋಟಿ. ನನ್ನ ಪ್ರಕಾರ 42,000 ಕೋಟಿ ಅನುದಾನ ನೀಡಬೇಕಿತ್ತು.
ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಾಂಟ್ರಾಕ್ಟ್ ನಲ್ಲಿ ಮೀಸಲಾತಿಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದೆ. ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ಣಯದಿಂದ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಲು ಕಾನೂನು ರೂಪಿಸಿದ ಮೊದಲ ರಾಜ್ಯ ನಮ್ಮದು, ಈ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ.
‘ಇವನಾರವ, ಇವನಾರವ ಎಂದೆನಿಸದಿರಯ್ಯ,
ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ,
ನಿನ್ನ ಮನೆ ಮಗನೆಂದಿನಿಸಯ್ಯ’ ಎಂದು 900 ವರ್ಷಗಳ ಹಿಂದೆ ಬಸವಣ್ಣನವರು ಹೇಳಿದ್ದರು. ಜಾತಿ ವ್ಯವಸ್ಥೆ ಸುಮ್ಮನೆ ನಾಶವಾಗುತ್ತದ? ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಎಂದು ಲೋಹಿಯಾ ಅವರು ಹೇಳಿದ್ದರು. ಎಲ್ಲಿ ಜಾತಿ ವ್ಯವಸ್ಥೆಗೆ ಜಡತ್ವ ಇರುತ್ತದೆ ಅಲ್ಲಿ ಬದಲಾವಣೆ ಸಾಧ್ಯವಿಲ್ಲ, ಹಾಗಾಗಿ ಎಲ್ಲ ಜನರಿಗೆ ಶಿಕ್ಷಣ, ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಜನರಲ್ಲಿ ಜಾಗೃತಿ ಮೂಡಬೇಕು, ನಾವು ಯಾಕೆ ಹಿಂದುಳಿದಿದ್ದೀವಿ ಎಂದು ಯೋಚನೆ ಮಾಡಬೇಕು.
ನಾನು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಿದ್ದೆ. ಇದಕ್ಕಾಗಿ 162 ಕೋಟಿ ಹಣವನ್ನು ಬಳಕೆ ಮಾಡಲಾಗಿತ್ತು. ಕಡೇ ಬಾರಿ ಜಾತಿ ಸಮೀಕ್ಷೆ ನಡೆದಿದ್ದು 1931 ರಲ್ಲಿ. ಈಗ ಸಮಿತಿಯ ವರದಿ ಸಿದ್ಧವಾಗಿದ್ದರೂ ಸರ್ಕಾರ ಸ್ವೀಕರಿಸಿಲ್ಲ. ಯಾವ ಸಮುದಾಯದ ಸ್ಥಿತಿಗತಿ ಏನಾಗಿದೆ ಎಂದು ತಿಳಿಯಬೇಕು, ಅದರ ಆಧಾರದ ಮೇಲೆ ಯೋಜನೆ ರೂಪಿಸಬಹುದು. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ಸ್ವೀಕಾರ ಮಾಡುತ್ತೇವೆ. ಹಿಂದುಳಿದ ಜಾತಿಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳಿದೆ. ಹೀಗಾಗಿ ನಾವು ಸಮೀಕ್ಷೆ ನಡೆಸಿದ್ದು. ಈ ವರದಿ ಸ್ವೀಕಾರ ಆಗಬೇಕೋ ಬೇಡವೋ?
ಸಂವಿಧಾನದ ಬಗ್ಗೆ ಚರ್ಚೆ ನಡೆದು, ಸಂವಿಧಾನದ ಆಶಯಗಳು ಎಷ್ಟು ಈಡೇರಿವೆ ಎಂಬುದರ ಸಮಾಲೋಚನೆ ನಡೆಯಬೇಕು. ಈ ಕಾರಣಕ್ಕಾಗಿಯೇ ಇಂತಹಾ ಸಮಾವೇಶಗಳನ್ನು ಮಾಡುವುದು. ಸಾಮಾಜಿಕ ನ್ಯಾಯದ ಈಡೇರಿಕೆ ಆಗಿದೆಯಾ ಎಂಬ ಬಗ್ಗೆ ಮೇಲಿಂದ ಮೇಲೆ ಸಮಾವೇಶಗಳು ನಡೆದು ಚರ್ಚೆ ಆಗಬೇಕು. ಇದೊಂದೇ ಸಮಾವೇಶಕ್ಕೆ ಕೊನೆಯಾಗಬಾರದು ಎಂಬುದು ನನ್ನ ಆಶಯ.