ತುಮಕೂರು : ನಿಮ್ಮ ನಿಮ್ಮ ಹೆಸರುಗಳಿಗೆ ಜೈಕಾರ ಹಾಕಿಸಿಕೊಳ್ಳುವುದನ್ನು ಬಿಟ್ಟು ಬಿಜೆಪಿಗೆ ಜೈಕಾರ ಹಾಕಿಸಿ. ಆಗ ಬಿಜೆಪಿ ಮುಂದಿನ ಚುನಾವಣೆಯಲ್ಲಿ ತಾನಾಗಿಯೇ ಅಧಿಕಾರಕ್ಕೆ ಬರುತ್ತೆ ಅಂತಾ ಸ್ವಪಕ್ಷೀಯರಿಗೆ ಬಿ.ವೈ ವಿಜಯೇಂದ್ರ ಕಿವಿಮಾತು ಹೇಳಿದ್ದಾರೆ. ತುಮಕೂರಿನ ಗುಬ್ಬಿಯಲ್ಲಿ ನಡೆದ ಒಬಿಸಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಕೇಸರಿ ಬಾವುಟ ಹಾರಿಸಲು ಮತದಾರರು ಸಜ್ಜಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಹಿಂದೆ ಯಾವತ್ತೂ ಬಿಜೆಪಿ ಗೆದ್ದಿರದ ಹಾಗೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಿಜೆಪಿ ಗೆಲ್ಲುವ ಕ್ಷೇತ್ರಗಳ ಹೆಸರನ್ನು ಪಟ್ಟಿ ಮಾಡಿದ್ದೇವೆ. ಈ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದ ಹೆಸರನ್ನು ಮೊದಲು ಬರೆದಿದ್ದೇವೆ. ಗುಬ್ಬಿ ಮತದಾರರು ಈ ಬಾರಿ ಬಿಜೆಪಿ ಪರ ನಿಲ್ಲಲಿದ್ದಾರೆ. ಮತದಾರರೇನೋ ಸಜ್ಜಾಗಿದ್ದಾರೆ, ಆದರೆ ವೇದಿಕೆ ಮೇಲಿರುವ ನಮ್ಮ ಮುಖಂಡರು ಮೊದಲು ಒಂದಾಗಬೇಕು. ನಮ್ಮ ನಮ್ಮ ಹೆಸರಿಗೆ ಜೈಕಾರ ಹಾಕಿಸಿಕೊಳ್ಳುವ ಮೊದಲು ಭಾರತೀಯ ಜನತಾ ಪಾರ್ಟಿಗೆ ಜಯವಾಗಲಿ ಅಂತಾ ಜೈಕಾರ ಹಾಕಬೇಕು. ಆಗ ಖಂಡಿತ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಿದರು.

ಕೇವಲ ನಗರ ಭಾಗಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಗ್ರಾಮೀಣ ಭಾಗಕ್ಕೂ ಮುಟ್ಟಿಸಿದ್ದ ಕೀರ್ತಿ ಯಡಿಯೂರಪ್ಪರಿಗೆ ಸಲ್ಲುತ್ತದೆ. ಇಂದು ಯಡಿಯೂರಪ್ಪ ರಾಜ್ಯದ ಸಿಎಂ ಅಲ್ಲ, ಪಕ್ಷದ ಅಧ್ಯಕ್ಷರೂ ಅಲ್ಲ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನ ಒಂದು ಮಾತನ್ನು ಹೇಳಿದ್ದರು. ವಿರೋಧ ಪಕ್ಷಗಳು ಯಡಿಯೂರಪ್ಪ ಮನೆಗೆ ಹೋಗಿ ಮಲಗಿಬಿಡ್ತಾರೆ ಅಂತಾನೇ ಭಾವಿಸಿದ್ರು. ಆದರೆ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ತಮ್ಮ ತಂದೆಯನ್ನು ವಿಜಯೇಂದ್ರ ಹಾಡಿ ಹೊಗಳಿದ್ರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಆದರೆ ನಾವ್ಯಾರೂ ಮೈ ಮರೀಬಾರ್ದು. ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಮ್ಮ ಹೋರಾಟ ನಿಲ್ಲಬಾರದು. ಕಾಂಗ್ರೆಸ್ ಬಿಜೆಪಿಯನ್ನು ಹಿಟ್ಲರ್ ಪಕ್ಷ ಅಂತಾ ಕರೆಯುತ್ತೆ. ಹಾಗೆ ಕರೆಸಿಕೊಳ್ಳೋಕೆ ನಮಗೆ ಹೆಮ್ಮೆ ಇದೆ. ಕಾಂಗ್ರೆಸ್ ಎಷ್ಟೆಲ್ಲ ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ರೂ ಸಹ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರ ತಡೆಯಲು ಇವರಿಂದ ಆಗಲಿಲ್ಲ. ಆದರೆ ಆರ್ಟಿಕಲ್ 370 ರದ್ದು ಮಾಡುವ ಮುನ್ನ ಪ್ರಧಾನಿ ಮೋದಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.