ರಾಯಚೂರಿನ ಸೇತುವೆ ಕಾಮಗಾರಿ ವೇಳೆ ಕೃಷ್ಣ ನದಿಯಲ್ಲಿ ದೇವರ ವಿಗ್ರಹಗಳು ಪತ್ತೆ ಆಗಿವೆ. ರಾಯಚೂರು ತಾಲೂಕಿನ ದೇವಸೂಗೂರು ಬಳಿಯ ಕೃಷ್ಣ ನದಿಯಲ್ಲಿ ವಿಷ್ಣುವಿನ ದಶಾವತಾರದ ವಿಗ್ರಹ ಹಾಗೂ ಶಿವನ ಲಿಂಗ ಪತ್ತೆ ಆಗಿವೆ. ವಿಗ್ರಹಗಳನ್ನ ಸುರಕ್ಷಿತವಾಗಿ ನದಿಯಿಂದ ಹೊರತೆಗೆದಿದ್ದಾರೆ.. ಸ್ಥಳೀಯ ಆಡಳಿತಕ್ಕೂ ಮಾಹಿತಿ ನೀಡಿ ಮೂರ್ತಿಗಳನ್ನು ಹಸ್ತಾಂತ ಮಾಡಲಾಗಿದೆ. ರಾಯಚೂರು ತೆಲಂಗಾಣ ಗಡಿಭಾಗದ ಕೃಷ್ಣಾನದಿಯಲ್ಲಿ ದೊರೆತ ವಿಷ್ಣುವಿನ ವಿಗ್ರಹದ ಬಗ್ಗೆ ಸಂಶೋಧನೆ ನಡೆಸುವ ಬಗ್ಗೆ ಚರ್ಚೆ ಆಗ್ತಿದೆ.

ವಿಷ್ಣುವಿನ ವಿಗ್ರಹವನ್ನು ಕಂಡು ರಾಯಚೂರಿನ ಸಂಶೋಧನಾಕಾರರು ಹಾಗು ಇತಿಹಾಸಕಾರರ ಸಂತಸ ವ್ಯಕ್ತಪಡಿಸಿದ್ದು, ಕೃಷ್ಣಾ ನದಿಯಲ್ಲಿ ದೊರೆತ ವಿಷ್ಣು ಮತ್ತು ಈಶ್ವರ ಲಿಂಗ 12 ರಿಂದ 15 ನೇ ಶತಮಾನದ ವಿಗ್ರಹಗಳು ಇರಬಹುದು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ರಾಣಿ ರುದ್ರಮ್ಮ ದೇವಿ ಹಾಗೂ ಶ್ರೀಕೃಷ್ಣದೇವರಾಯನ ಆಳ್ವಿಕೆ ಕಾಲದ ವಿಗ್ರಹಗಳು ಎನ್ನಲಾಗ್ತಿದೆ. ರಾಣಿ ರುದ್ರಮ್ಮ ದೇವಿ ಶಿವನ ಆರಾಧಕಿಯಾಗಿದ್ದರು. ಅದೇ ರೀತಿ ಶ್ರೀಕೃಷ್ಣ ದೇವರಾಯನು ವಿಷ್ಣುವಿನ ಆರಾಧಕನಾಗಿದ್ದ.

ವಿಜಯಪುರದ ಆದಿಲ್ ಶಾಹಿಗಳನ್ನ ಹಿಮ್ಮೆಟ್ಟಿಸಿ ವಿಜಯನಗರ ಸಾಮ್ರಾಜ್ಯ ಮರುವಿಸ್ತರಣೆ ಮಾಡಿದ್ದ ಶ್ರೀಕೃಷ್ಣ ದೇವರಾಯ ಆ ವೇಳೆ ಕೃಷ್ಣದೇವರಾಯ ಸ್ಥಾಪಿಸಿದ ವಿಗ್ರಹಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಶ್ರೀಕೃಷ್ಣ ದೇವರಾಯನ ತಂದೆಯಿಂದ ಸಾಮ್ರಾಜ್ಯ ಕಸಿದಿದ್ದ ಆದಿಲ್‌ಶಾಹಿಗಳನ್ನು ಸೋಲಿಸಿ ರಾಯಚೂರನ್ನು ಮರಳಿ ಪಡೆಯುವಂತೆ ಶ್ರೀಕೃಷ್ಣ ದೇವರಾಯನಿಗೆ ಅವರ ತಂದೆ ಹೇಳಿದ್ದರು. ತಂದೆಯ ಮಾತಿನಂತೆ ರಾಯಚೂರನ್ನು 1,275 ರಲ್ಲಿ ಆದಿಲ್ ಶಾಹಿಗಳನ್ನು ಹಿಮ್ಮೆಟ್ಟಿಸಿದ್ದನು ಎಂದಿದ್ದಾರೆ.
ವಿಷ್ಣುವಿನ ಆರಾಧಕನಾಗಿದ್ದ ಶ್ರೀ ಕೃಷ್ಣ ದೇವರಾಯ ವಿಷ್ಣುವಿನ ವಿಗ್ರಹ ಮಾಡಿಸಿದ್ದಾರೆ ಎಂದು ಹಿರಿಯ ಸಾಹಿತಿ ಹಾಗು ಇತಿಹಾಸ ಸಂಶೋದನಾಕಾರ ವೀರಹನುಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೃಷ್ಣ ನದಿಯಲ್ಲಿ ದೊರೆತ ವಿಷ್ಣುವಿನ ವಿಗ್ರಹ ನಮ್ಮ ಭಾರತದ ಸಂಸ್ಕೃತಿಯ ಪ್ರತೀಕ. ಅಯೋಧ್ಯೆಯಲ್ಲಿ ಸ್ಥಾಪನೆಯಾದ ಶ್ರೀರಾಮ ಹಾಗು ರಾಯಚೂರಿನ ಕೃಷ್ಣಾ ನದಿಯಲ್ಲಿ ದೊರೆತ ವಿಷ್ಣು ವಿಗ್ರಹ ಕಾಕತಾಳೀಯ ಎಂಬಂತೆ ಒಂದೇ ರೀತಿಯಲ್ಲಿ ಇವೆ. ಶ್ರೀ ಬಾಲರಾಮನ ವಿಗ್ರಹ ಹಾಗೂ ವಿಷ್ಣುವಿನ ವಿಗ್ರಹ ಎರಡೂ ಕೂಡ ದಶಾವತಾರವನ್ನು ಒಳಗೊಂಡಿವೆ. 12 ರಿಂದ 15 ನೇ ಶತಮಾನದ ಈ ವಿಗ್ರಹ ಪ್ರವಾಹದ ಹೊಡೆತಕ್ಕೆ ಸಿಲುಕಿರಬಹುದು. ದಾಳಿಗೆ ಒಳಗಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೂ ಸಂಶೋಧನೆಯಿಂದ ಮಾತ್ರ ಇದು ಹೊರ ಬರಬೇಕಿದೆ ಎಂದಿದ್ದಾರೆ.