ಬೆಂಗಳೂರು ಮಹಾನಗರ ಪಾಲಿಕೆ (BBMP) ದೀರ್ಘಕಾಲದಿಂದ ತೆರಿಗೆ ಪಾವತಿಸದೇ ಉಳಿಸಿರುವ 608 ಆಸ್ತಿಗಳನ್ನು ಫೆಬ್ರವರಿ 10ರಿಂದ ಹರಾಜು ಮಾಡುವ ಪ್ರಕ್ರಿಯೆ ಆರಂಭ ಮಾಡಲಿದೆ.
ತೆರಿಗೆ ವಸೂಲಿಗಾಗಿ ಬಿಬಿಎಂಪಿ ಹಲವು ಹಂತಗಳಲ್ಲಿ ಕ್ರಮ ಕೈಗೊಂಡಿದ್ದು, ಮೊದಲಿಗೆ ಕಾರಣ ಕೇಳಿ ನೋಟಿಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟುಗೋಲು ಹಾಗೂ ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಹಾಕುವಂತಹ ಕ್ರಮಗಳನ್ನು ಅನುಸರಿಸಲಾಗಿದೆ. ಆದರೆ, ಇದರಿಂದಲೂ ಹಲವಾರು ಆಸ್ತಿ ಮಾಲೀಕರು ತೆರಿಗೆ ಪಾವತಿಸದೆ ಉಳಿದಿರುವುದರಿಂದ, ಬಾಕಿ ವಸೂಲಿಗಾಗಿ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರ ಪ್ರಕಾರ, ಬೆಂಗಳೂರು ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ಆಸ್ತಿಗಳ ತೆರಿಗೆ ಬಾಕಿ ಉಳಿದಿದ್ದು, ಇದರ ಒಟ್ಟು ಮೊತ್ತ ₹390 ಕೋಟಿ. ಈ ನಷ್ಟವನ್ನು ಕಡಿಮೆ ಮಾಡಲು ಹಾಗೂ ನಗರಾಭಿವೃದ್ಧಿಗೆ ಬೇಕಾದ ಅನುದಾನ ಒದಗಿಸಲು BBMP ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹರಾಜು ಪ್ರಕ್ರಿಯೆಯಿಂದ BBMP ಬಾಕಿ ತೆರಿಗೆ ವಸೂಲಿ ಮಾಡಲಿದ್ದು, ಹರಾಜು ಮೂಲಕ ಸಿಗುವ ಮೊತ್ತದಲ್ಲಿ ಬಾಕಿ ತೆರಿಗೆ ಪಾವತಿ ಮಾಡಿದ ನಂತರ ಉಳಿದ ಹಣವನ್ನು ಮಾಲೀಕರ ಖಾತೆಗೆ ಜಮೆ ಮಾಡಲಾಗುವುದು. ಹರಾಜು ಪ್ರಕ್ರಿಯೆಯ ನಂತರ ಆಸ್ತಿಗಳನ್ನು ಮರಳಿಸಲು ಅವಕಾಶವಿಲ್ಲ, ತೆರಿಗೆ ಪಾವತಿಸದಿದ್ದರೆ ಹರಾಜು ಅಂತಿಮವಾಗಲಿದೆ.
ಈ ಹರಾಜು ಪ್ರಕ್ರಿಯೆ ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ನಡೆಯಲಿದ್ದು, ಪೂರ್ವ ವಲಯದಲ್ಲಿ-118(East Zone), ಪಶ್ಚಿಮ ವಲಯದಲ್ಲಿ-120(West Zone), ದಕ್ಷಿಣ ವಲಯದಲ್ಲಿ-109(South Zone), ಮಹದೇವಪುರ ವಲಯದಲ್ಲಿ-60(Mahadevapura Zone), ಬೊಮ್ಮನಹಳ್ಳಿ ವಲಯದಲ್ಲಿ-70(Bommanahalli Zone), ಯಲಹಂಕ ವಲಯದಲ್ಲಿ-40(Yalahanka Zone), ಆರ್.ಆರ್. ನಗರ ವಲಯದಲ್ಲಿ-50(RR Nagar Zone) ಹಾಗೂ ದಾಸರಹಳ್ಳಿ ವಲಯದಲ್ಲಿ-41(Dasarahalli Zone) ಆಸ್ತಿಗಳು ಹರಾಜಿಗೆ ಒಳಗಾಗಲಿವೆ. ವಿವಿಧ ಉಪವಿಭಾಗಗಳಲ್ಲಿ ತೆರಿಗೆ ಪಾವತಿಸದೇ ಉಳಿದಿರುವ ಆಸ್ತಿಗಳನ್ನು ಗುರುತಿಸಿ BBMP ಈ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ತೆರಿಗೆ ಬಾಕಿ ಹೊಂದಿರುವ ಎಲ್ಲಾ ಆಸ್ತಿ ಮಾಲೀಕರು ತಕ್ಷಣವೇ ತೆರಿಗೆ ಪಾವತಿಸಬೇಕು, ಇಲ್ಲವಾದಲ್ಲಿ ಅವರ ಆಸ್ತಿಗಳು ಹರಾಜಾಗಿ BBMP ವಶವಾಗಲಿವೆ. ನಗರಾಭಿವೃದ್ಧಿಗೆ ಅಗತ್ಯವಿರುವ ಆದಾಯವನ್ನು ಒದಗಿಸಲು ಬಿಬಿಎಂಪಿಯ ಈ ಕ್ರಮ ಕಠಿಣ ಮತ್ತು ಅನುಷ್ಠಾನದಲ್ಲಿ ಪ್ರಾಮಾಣಿಕವಾಗಿದೆ.