ಲೋಕಸಭಾ ಮತ್ತು ರಾಜ್ಯಸಭೆಯ ಮುಂಗಾರು ಅಧಿವೇಶನವನ್ನು ಹಠಾತ್ತಾಗಿ ಕೊನೆಗೊಳಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಇತರೆ ವಿರೋಧ ಪಕ್ಷದ ನಾಯಕರು ಇಂದು ಬೆಳಿಗ್ಗೆ ಸಂಸತ್ ಭವನದ ಹೊರಗೆ ಪರೇಡ್ ನಡೆಸಿದ್ದು, ಮೇಲ್ಮನೆಯಲ್ಲಿ ಮಹಿಳಾ ಸಂಸದರ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ “ಸಂಸತ್ತಿನ ಒಳಗಡೆ ಮಾತನಾಡಲು ಬಿಡದ್ದರಿಂದ ನಾವು ನಿಮ್ಮೊಂದಿಗೆ (ಮಾಧ್ಯಮ) ಮಾತನಾಡಲು ಇಲ್ಲಿಗೆ ಬರಬೇಕಾಯಿತು. ಇದು ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಭದ್ರತಾ ಸಿಬ್ಬಂದಿಯಲ್ಲದವರ ಮೂಲಕ ಪ್ರತಿಪಕ್ಷಗಳ ಸಂಸದರ ಮೇಲೆ ದಾಳಿ ಮಾಡಿಸಲಾಗಿದೆ. ಮಹಿಳಾ ಎಂಪಿಗಳ ಮೇಲೂ ದಾಳಿಯಾಗಿವೆ. ಅವರು ವಿಪಕ್ಷ ಸಂಸದರನ್ನು ಎಳೆದಾಡಿದ್ದಾರೆ. ಅಧ್ಯಕ್ಷರು ಮತ್ತು ಸ್ಪೀಕರ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳುತ್ತಾರೆ. ಆದರೆ, ಸದನದ ಕಾರ್ಯಗಳನ್ನು ಖಚಿತಪಡಿಸುವುದು ಅವರ ಜವಾಬ್ದಾರಿಯಾಗಿದೆ ಅವರು ತಮ್ಮ ಕೆಲಸವನ್ನು ಏಕೆ ಮಾಡಲು ಸಾಧ್ಯವಾಗಲಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸತ್ ಅಧಿವೇಶನ ಮುಗಿದಿದೆ, ದೇಶದ ಶೇಕಡಾ 60 ರಷ್ಟು ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ, ಅವಮಾನ ಮಾಡಲಾಗಿದೆ ಮತ್ತು ರಾಜ್ಯಸಭೆಯಲ್ಲಿ ಸಂಸದರಿಗೆ ದೈಹಿಕವಾಗಿ ಥಳಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರಾದ ಸಂಜಯ್ ರಾವುತ್ ಅವರು ಮಹಿಳೆಯರು ಸೇರಿದಂತೆ ಸಂಸದರನ್ನು ದೈಹಿಕವಾಗಿ ಥಳಿಸಲಾಗಿದೆ, ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಗಲಿಲ್ಲ ಮಹಿಳಾ ಸಂಸದರ ವಿರುದ್ಧ ನಿನ್ನೆ ನಡೆದ ಘಟನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಒಂದು ಕ್ಷಣ ನಾವು ಪಾಕಿಸ್ತಾನದ ಗಡಿಯಲ್ಲಿ ನಿಂತಂತೆ ಭಾಸವಾಯಿತು ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. .
ಬುಧವಾರ ರಾಜ್ಯಸಭೆಯಲ್ಲಿ ಗೊಂದಲದ ವಾತಾವರಣದ ನಡುವೆ ಸರ್ಕಾರವು ವಿಮಾ ( insurance) ಮಸೂದೆಗೆ ಸಂಬಂಧಿಸಿದ ತಿದ್ದುಪಡಿಯನ್ನು ಅಂಗೀಕರಿಸಲು ಮುಂದಾದಾಗ ಹಲವಾರು ಮಹಿಳಾ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪುರುಷ ಮಾರ್ಷಲ್‌ಗಳಿಂದ ದೈಹಿಕವಾಗಿ ಮಹಿಳಾ ಸಂಸದರಿಗೆ ಕಿರುಕುಳ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಹಿರಿಯ ಸಂಸದ ಶರದ್ ಪವಾರ್ ಕೂಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ತಮ್ಮ 55 ವರ್ಷಗಳ ರಾಜಕೀಯ ಜೀವನದಲ್ಲಿ ಎಂದು ತಮ್ಮ ಮಹಿಳಾ ಸಹೋದ್ಯೋಗಿಗಳ ಮೇಲೆ ದಾಳಿ ಮಾಡಿರುವುದನ್ನು ನೋಡಿರಲಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ.
ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಇದು “ಸಂಪೂರ್ಣ ಸುಳ್ಳು” ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಗತ್ಯವಿದ್ದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ತಿಳಿದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.