ರಾಜ್ಯದ ಮೂರು ಕ್ಷೇತ್ರಗಳ ಮತದಾನ ಇಂದು ನಡೆಯುತ್ತಿದೆ. ಇಷ್ಟು ದಿನಗಳ ಕಾಲ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯಲ್ಲಿ ಮತಯಾಚನೆ ಮಾಡಿದ್ದ ಕಾಂಗ್ರೆಸ್ ನಾಯಕರ ದಂಡು, ಇದೀಗ ದೇಶದ ಇತರೆ ರಾಜ್ಯಗಳಲ್ಲಿ ಸಮುದಾಯವಾರು ಮತಯಾಚನೆ ಮಾಡುತ್ತಿದ್ದು, ರಾಜ್ಯ ಇಂಧನ ಸಚಿವ ಕೆ.ಜೆ ಜಾರ್ಜ್ ಮಹಾರಾಷ್ಟ್ರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮಹಾರಾಷ್ಟ್ರ ಚುನಾವಣೆ ಮೇಲೆ ದೃಷ್ಟಿ ನೆಟ್ಟಿದ್ದು, ಈ ಬಾರಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಗೆ ಶಕ್ತಿ ಮೀರಿ ಪ್ರಯತ್ನಿಸಲಾಗ್ತಿದೆ.
ಕಳೆದ ನಾಲ್ಕು ದಿನಗಳಿಂದ ಕೇರಳ ಹಾಗು ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿರುವ ಸಚಿವ ಕೆ.ಜೆ ಜಾರ್ಜ್, ಮೊದಲಿಗೆ ವಯನಾಡಿನಲ್ಲಿ ಕ್ರೈಸ್ತ ಸಮುದಾಯದ ಮುಖ್ಯಸ್ಥರ ಜೊತೆಗೆ ಚರ್ಚೆ ನಡೆಸಿದರು. ಪ್ರಿಯಾಂಕಾ ವಾದ್ರಾ ಗೆಲುವಿಗೆ ನೆರವಾಗುವಂತೆ ಮನವಿ ಮಾಡಿದ್ದರು. ಆ ಬಳಿಕ ಮಹಾರಾಷ್ಟ್ರದ ಪುಣೆಗೆ ತೆರಳಿದ್ದು, ಅಲ್ಫೊನ್ಸೋ ಚರ್ಚ್ನಲ್ಲಿ ಸಮುದಾಯದ ನಾಯಕರು ಹಾಗು ಜನರ ಜೊತೆಗೆ ಸಂವಾದ ನಡೆಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯಕ್ಕೆ ಯಾಕೆ ಬೇಕು ಅನ್ನೋ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪುಣೆಯಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಸಮುದಾಯದ ಮುಖಂಡರು ಹಾಗು ಕೈಗಾರಿಕೋದ್ಯಮಿಗಳ ಜೊತೆಗೆ ಸಭೆ ನಡೆಸಿದ ಸಚಿವ ಕೆ.ಜೆ ಜಾರ್ಜ್, ಆರ್ಥಿಕ ಸದೃಢತೆ, ಸಮಗ್ರ ಅಭಿವೃದ್ಧಿ, ಸಮುದಾಯ ಕಲ್ಯಾಣಕ್ಕೆ ಸಹಕಾರಿ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಸಿದರು. ಆ ಬಳಿ ರಸ್ತಾಪೇಠದಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ರು. ಕೆಲಕಾಲ ಭಕ್ತರೊಂದಿಗೆ ಅಲ್ಲಿನ ಸ್ಥಳೀಯ ವಿಚಾರಗಳನ್ನು ಚರ್ಚಿಸಿದರು. ಪುಣೆಯಲ್ಲಿರುವ ಕಾಂಗ್ರೆಸ್ ಭವನಕ್ಕೂ ಭೇಟಿ ನೀಡಿದ್ದ ಸಚಿವರು, ಪಿಸಿಸಿ ಹಾಗು ಡಿಸಿಸಿ ಪದಾಧಿಕಾರಿಗಳನ್ನು ಭೇಟಿ ಮಾಡಿ, ಮುಂಬರುವ ಚುನಾವಣೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು.
ಪಿ.ಸಿ ಚಾಕೋ ಜೊತೆಗೂಡಿ ಪುಣೆ ಭಾಗದಲ್ಲಿ ಕ್ರೈಸ್ತ ಸಮುದಾಯದ ಮತಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದು, ನವೆಂಬರ್ 20ರಂದು ನಡೆಯುವ ಮತದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದಕ್ಕೆ ಬೇಕಾದ ಕಾರ್ಯತಂತ್ರ ಮಾಡುತ್ತಿದ್ದಾರೆ. ರಾಜ್ಯದಿಂದ ಬಹುತೇಕ ಸಚಿವರು ಹಾಗು ನಾಯಕರನ್ನು ವಿಭಾಗವಾರು ಹಂಚಿಕೆ ಮಾಡಿರುವ ಎಐಸಿಸಿ ನಾಯಕರು, ಸ್ಥಳೀಯ ಭಾಷೆ, ಧರ್ಮ, ಜಾತಿ ಆಧಾರಿತವಾಗಿ ಮತಗಳನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ವರ್ಸಸ್ ಮಹಾ ವಿಕಾಸ್ ಅಘಾಡಿ ಒಕ್ಕೂಟದಲ್ಲಿ ಈ ಬಾರಿ ಯಾರು ಮರಾಠಿಗರ ಮನ ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೋಡ್ಬೇಕಿದೆ.