ಕೋವಿಡ್ ಸುನಾಮಿ ದೇಶದಾದ್ಯಂತ ಸಾವಿನ ಮೆರವಣಿಗೆ ನಡೆಸುತ್ತಿದೆ. ಕರೋನಾ ವೈರಾಣು ಸೋಂಕಿನಿಂದ ರೋಗ ಉಲ್ಬಣಗೊಂಡು ಸಾವು ಕಾಣುತ್ತಿರುವ ಜನರಿಗಿಂತ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ, ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ, ಆಮ್ಲಜನಕ ಸಿಗದೆ, ಔಷಧಿ ಸಿಗದೆ ಸಾವು ಕಾಣುತ್ತಿರುವರರ ಸಂಖ್ಯೆಯೇ ದೊಡ್ಡದಿದೆ ಎಂಬುದು ಆಳುವ ಸರ್ಕಾರಗಳ ಹೊಣೆಗೇಡಿತನಕ್ಕೆ, ಅಮಾನುಷ ಕ್ರೌರ್ಯಕ್ಕೆ ಸಾಕ್ಷಿ. ಅಗತ್ಯ ಸೌಲಭ್ಯ, ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸಿ ಜನರ ಜೀವ ಮತ್ತು ಜೀವನ ಕಾಯಬೇಕಾದ ಸರ್ಕಾರಗಳು ಲಾಕ್ ಡೌನ್, ಕರ್ಫ್ಯೂ ಘೋಷಿಸಿ ಜನರನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಟ್ಟಿಹಾಕಿ ಕೈಕಟ್ಟಿಕೂತಿವೆ.
ದೇಶ ರಕ್ಷಣೆಯ ವಾಗ್ದಾನದ ಮೇಲೆ ಅಧಿಕಾರಕ್ಕೆ ಬಂದ, ಸ್ವಯಂ ದೇಶದ ಚೌಕಿದಾರ ಎಂದು ಸ್ವಪ್ರಶಂಸೆಯ ಘೋಷಣೆಯ ಮೇಲೆ ಚುನಾವಣೆ ಗೆದ್ದ ಪ್ರಧಾನಿ ಮೋದಿ, ಇಂತಹ ಹೊತ್ತಲ್ಲಿ ನಿಮ್ಮ ಜೀವ ನಿಮ್ಮ ಕೈಯಲ್ಲಿದೆ. ನೀವೇ ನಿಮ್ಮ ಜೀವ ಕಾಪಾಡಿಕೊಳ್ಳಬೇಕು ಎಂದು ಹೇಳಿ ಪರೋಕ್ಷವಾಗಿ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಕೂಡ ಲಾಕ್ ಡೌನ್, ಕರ್ಫ್ಯೂ ಹೇರಿಕೆಗೆ ತೋರಿದ ಆಸಕ್ತಿಯನ್ನು ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆಗಳ ಕಡೆ ತೋರುತ್ತಿಲ್ಲ ಎಂಬುದಕ್ಕೆ ಈಗಲೂ ನಿತ್ಯ ಆಮ್ಲಜನಕ ಸಿಗದೇ ಸಂಭವಿಸುತ್ತಿರುವ ಸಾವಿರಾರು ಸಾವುಗಳೇ ನಿದರ್ಶನ.
ಇಂತಹ ಹತಾಶೆಯ, ನಿರಾಶೆಯ ಹೊತ್ತಲ್ಲಿ ಜನಸಾಮಾನ್ಯರ ಯಾವ ನಾಯಕರೂ, ಯಾವ ಸರ್ಕಾರವೂ ತಮ್ಮ ಜೀವ ಉಳಿಸುವ ಬಗ್ಗೆ ಕಾಳಜಿ ಹೊಂದಿಲ್ಲ ಎಂಬ ಅಸಹಾಯಕತೆಗೆ ಜಾರುತ್ತಿರುವಾಗ, ದೇಶದ ನ್ಯಾಯಾಂಗ ಜನಸಾಮಾನ್ಯರ ಪರ ದನಿ ಎತ್ತಿದೆ ಎಂಬುದು ಭಾರತದ ಪ್ರಜಾಪ್ರಭುತ್ವದಲ್ಲಿ ಈಗಲೂ ನಂಬಿಕೆ ಇಡಬಹುದು ಎಂಬ ಭರವಸೆ ಹುಟ್ಟಿಸಿದೆ.
ಕಳೆದ ಒಂದು ವಾರದಿಂದೀಚೆಗೆ, ಕರ್ನಾಟಕ ಹೈಕೋರ್ಟ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸುಮಾರು ಒಂದು ಡಜನ್ ಹೈಕೋರ್ಟುಗಳು ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿ ಜನರ ಜೀವಹಾನಿಗೆ ಕಾರಣವಾದ ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿವೆ. ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಅಂತೂ, ಕೋವಿಡ್ ಎರಡನೇ ಅಲೆಯ ನಡುವೆಯೇ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸಲು ಅನುಮತಿ ನೀಡಿದ ಚುನಾವಣಾ ಆಯೋಗದ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಆಯೋಗಕ್ಕೆ ಚಾಟಿ ಬೀಸಿದೆ.
ದೆಹಲಿ ಹೈಕೋರ್ಟ್ ಆಮ್ಲಜನಕ ಮತ್ತು ಆಸ್ಪತ್ರೆಗಳ ಹಾಸಿಗೆ ಲಭ್ಯವಿಲ್ಲದೆ ನಿತ್ಯ ನೂರಾರು ಮಂದಿ ರಾಷ್ಟ್ರ ರಾಜಧಾನಿಯಲ್ಲಿ ಸಾವು ಕಾಣುತ್ತಿರುವ ಬಗ್ಗೆ ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡರ ವಿರುದ್ಧ ಕಿಡಿಕಾರಿದೆ. ನಿಮ್ಮಿಂದ ಪರಿಸ್ಥಿತಿ ನಿಭಾಯಸುವುದು ಸಾಧ್ಯವಿಲ್ಲ ಎಂದಾದರೆ ಅದನ್ನು ಹೇಳಿ, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಸೂಚಿಸುತ್ತೇವೆ ಎಂದು ದೆಹಲಿ ರಾಜ್ಯ ಸರ್ಕಾರಕ್ಕೆ ಕೋರ್ಟ್ ಎಚ್ಚರಿಸಿತ್ತು. ಆ ಬಳಿಕ ಆಮ್ಲಜನಕ ಹಂಚಿಕೆಯ ವಿಷಯದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯ ಬಗ್ಗೆ ಕಿಡಿಕಾರಿದ ಕೋರ್ಟ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಅವುಗಳ ಅಗತ್ಯಕ್ಕಿಂತ ಹೆಚ್ಚು ಹಂಚಿ, ದೆಹಲಿಗೆ ಬೇಡಿಕೆಗಿಂತ ಹಲವು ಪಟ್ಟು ಕಡಿಮೆ ಹಂಚಿಕೆ ಮಾಡಿದ ಕ್ರಮದ ಬಗ್ಗೆ ವಿವರಣೆ ಕೊಡಿ ಎಂದು ತಾಕೀತು ಮಾಡಿದೆ. ಅಲ್ಲದೆ, ಕೋವಿಡ್ ಪರಿಸ್ಥಿತಿಯ ದಿನನಿತ್ಯದ ಬೆಳವಣಿಗೆಗಳ ಮೇಲೆ ದೆಹಲಿ ಹೈಕೋರ್ಟ್ ಕಣ್ಗಾವಲಿಟ್ಟಿದೆ.
ದೆಹಲಿ ಹೈಕೋರ್ಟಿನ ಮೂವರು ನ್ಯಾಯಮೂರ್ತಿಗಳ ಪೀಠದ ಈ ತಪರಾಕಿಯ ಬಳಿಕ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಒಂದಿಷ್ಟು ಎಚ್ಚೆತ್ತುಕೊಂಡಿವೆ. ಹಾಗೇ ಮದ್ರಾಸ್, ಕರ್ನಾಟಕ, ಗುಜರಾತ್, ಅಲಹಾಬಾದ್, ಉತ್ತರಾಖಂಡ, ರಾಜಸ್ತಾನ, ತೆಲಂಗಾಣ, ಪಟನಾ ಮತ್ತು ಬಾಂಬೆ ಹೈಕೋರ್ಟುಗಳು ಕೂಡ ಕಳೆದ ಒಂದು ವಾರದಲ್ಲಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಸ್ವಯಂಪ್ರೇರಿತ ದೂರುಗಳು(ಸುಮೋಟೊ) ಪ್ರಕರಣಗಳ ವಿಚಾರಣೆಯ ವೇಳೆ ದೇಶದ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಆಯಾ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರಗಳ ಹೊಣೆಗೇಡಿತನದ ವಿರುದ್ಧದ ಜನಸಾಮಾನ್ಯರ ಆಕ್ರೋಶಕ್ಕೆ ದನಿಯಾಗಿವೆ. ಕಳೆದ ಹತ್ತು ಹನ್ನೆರಡು ದಿನಗಳಲ್ಲಿ ದೇಶದ ವಿವಿಧ ಹೈಕೋರ್ಟುಗಳಲ್ಲಿ ಬಹುತೇಕ ನಿತ್ಯ ಈ ಕುರಿತ ಪ್ರಕರಣಗಳ ವಿಚಾರಣೆಗಳು ನಡೆಯುತ್ತಿವೆ.
ಕೋವಿಡ್ ನಡುವೆ ಯಾವ ಮುಂಜಾಗ್ರತೆಯನ್ನೂ ವಹಿಸದೆ ಬೃಹತ್ ಚುನಾವಣಾ ರ್ಯಾಲಿಗಳಿಗೆ ಅವಕಾಶ ನೀಡಿದ ‘ಚುನಾವಣಾ ಆಯೋಗವೇ ದೇಶದಲ್ಲಿ ಕೋವಿಡ್ ಎರಡನೇ ಅಲೆಗೆ ಏಕೈಕ ಹೊಣೆಗಾರ’ ಎಂದು ಕಳೆದ ಸೋಮವಾರ ಹೇಳಿದ್ದ ಮದ್ರಾಸ್ ಹೈಕೋರ್ಟ್, ಆ ಕಾರಣಕ್ಕಾಗಿ ‘ಆಯೋಗದ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬಹುದು’ ಎಂದಿತ್ತು. ಅದಾದ ಮಾರನೇ ದಿನ ಮಂಗಳವಾರ, ಕರ್ನಾಟಕ ಹೈಕೋರ್ಟ್ ರಾಜ್ಯ ರಾಜಧಾನಿ ಬೆಂಗಳೂರಿನ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಹಾದಿಬೀದಿ ಹೆಣವಾಗುತ್ತಿರುವ ಬಗ್ಗೆ, ‘ಪರಿಸ್ಥಿತಿ ಕೈಮೀರಿದೆ’ ರಾಜ್ಯ ಸರ್ಕಾರದ ಕಿವಿ ಹಿಂಡಿತು. ಅದರ ಬೆನ್ನಲ್ಲೇ ಗುಜರಾತ್ ಹೈಕೋರ್ಟ್ ಗುಜರಾತಿನ ಕೋವಿಡ್ ರೋಗಿಗಳ ದಾರುಣ ಪರಿಸ್ಥಿತಿಯ ಬಗ್ಗೆ ಅಲ್ಲಿನ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರಶ್ನಿಸಿ ಸು ಮೋಟೋ ಪ್ರಕರಣ ದಾಖಲಿಸಿಕೊಂಡು, ವಾಸ್ತವ ಪರಿಸ್ಥಿತಿ ಮರೆಮಾಚಿ ಸಬ್ ಚೆಂಗಾಸಿ ಎಂಬ ಚಿತ್ರಣ ನೋಡುತ್ತಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿತು. ಅದೇ ವೇಳೆ ಅಲಹಾಬಾದ್ ಹೈಕೋರ್ಟ್, ಪಂಚಾಯ್ತಿ ಚುನಾವಣೆ ಕಾರ್ಯನಿರತ 135 ಮಂದಿ ಶಿಕ್ಷಕರು ಕೋವಿಡ್ ಗೆ ಬಲಿಯಾದ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮತ್ತು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿತು.
ಮಾರನೇ ದಿನ ಬುಧವಾರ, ಉತ್ತರಾಖಂಡದ ಹೈಕೋರ್ಟ್ ಅಲ್ಲಿನ ರಾಜ್ಯ ಸರ್ಕಾರದ ಕೋವಿಡ್ ವೈಫಲ್ಯವನ್ನು ಖಂಡಿಸಿ, ಹನ್ನೆರಡು ನಿರ್ದೇಶನಗಳನ್ನು ನೀಡಿತ್ತು. ರಾಜಸ್ತಾನ ಹೈಕೋರ್ಟ್ ರಾಜ್ಯದ ಕೋವಿಡ್ ಪೀಡಿತರ ನೆರವಿಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ, ಸ್ವಯಂಪ್ರೇರಿತವಾಗಿ ಜನರ ಸಂಕಷ್ಟ ದೂರಮಾಡುವ ಯತ್ನ ನಡೆಸಿತು. ಗುರುವಾರದ ಹೊತ್ತಿಗೆ ತೆಲಂಗಾಣ ಹೈಕೋರ್ಟ್ ಕೂಡ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಷಯದಲ್ಲಿ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿತು. ಬಿಹಾರ ಹೈಕೋರ್ಟ್ ಕೂಡ ಜನರ ಪರ ದನಿ ಎತ್ತಿ, ಅಲ್ಲಿನ ರಾಜ್ಯ ಸರ್ಕಾರದ ಕೋವಿಡ್ ಕಾರ್ಯನೀತಿ, ಸರಿಯಲ್ಲ ಎಂದು, ಆಮ್ಲಜನಕ ಕೊರತೆಯ ಬಗ್ಗೆ ಜನತೆ ನೇರವಾಗಿ ತನಗೆ ದೂರು ನೀಡಬಹುದು ಎಂದು ಇಮೇಲ್ ವಿಳಾಸ ನೀಡಿತು. ಅದೇ ದಿನ ಮದ್ರಾಸ್ ಹೈಕೋರ್ಟ್, ದೇಶದ ಇವತ್ತಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಪರೋಕ್ಷವಾಗಿ ಬೆಟ್ಟುಮಾಡಿ, “ಕಳೆದ 10-15 ತಿಂಗಳುಗಳಿಂದ ನೀವು ಏನು ಮಾಡುತ್ತಿದ್ದಿರಿ?” ಎಂದು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿತು.
ಹಾಗೇ, ಬಾಂಬೆ ಹೈಕೋರ್ಟಿನ ಬಾಂಬೆ, ನಾಗ್ಪುರ ಮತ್ತು ಔರಂಗಾಬಾದ್ ಪೀಠಗಳು ಕೂಡ ಕೋವಿಡ್ ಸಂಬಂಧಿಸಿದ ವಿವಿಧ ಸು ಮೋಟೋ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗಳನ್ನು ನಡೆಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಚಾಟಿ ಬೀಸುತ್ತಿವೆ.
ಈ ನಡುವೆ ಸುಪ್ರೀಂಕೋರ್ಟ್ ಕೂಡ ಜನರ ಪರ ಆಡಳಿತ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕೋವಿಡ್ ಪರಿಸ್ಥಿತಿ ನಿರ್ವಹಣೆಯ ತನ್ನ ನೀತಿಯನ್ನು ಸರ್ಕಾರ ಪುನರ್ ಪರಿಶೀಲಿಸಬೇಕಿದೆ ಎಂದು ತಾಕೀತು ಮಾಡಿದೆ. ಜೊತೆಗೆ ಕೋವಿಡ್ ಸಂಬಂಧಿಸಿದ ಜನರ ಅಹವಾಲುಗಳನ್ನು ಅವರು ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕ ಹಂಚಿಕೊಳ್ಳುವುದು ಅವರ ಹಕ್ಕು. ಜನರ ಅಂತಹ ಅಹವಾಲುಗಳ ಬಗ್ಗೆಯಾಗಲೀ, ಕೋವಿಡ್ ವಿಷಯದಲ್ಲಿ ಸರ್ಕಾರದ ವೈಫಲ್ಯಗಳನ್ನು ಟೀಕಿಸುವ, ಆ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಜನದನಿಯನ್ನಾಗಲೀ ಹತ್ತಿಕ್ಕುವ ಯತ್ನಗಳು ಸಲ್ಲದು. ಹಾಗೆ ಜನರ ದನಿ ಹತ್ತಿಕ್ಕುವ ಯತ್ನಗಳನ್ನ ಯಾರೇ ಮಾಡಿದರೂ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಅಲ್ಲದೆ, ಲಸಿಕೆಯ ದರದಲ್ಲಿನ ತಾರತಮ್ಯ ಮತ್ತು 18ರಿಂದ 44 ವಯೋಮಾನದವರು ಹಣ ತೆತ್ತು ಲಸಿಕೆ ಪಡೆಯಬೇಕು ಎಂಬ ಕೇಂದ್ರ ಬಿಜೆಪಿ ಸರ್ಕಾರದ ನೀತಿಯನ್ನು ಪ್ರಶ್ನಿಸಿರುವ ಸರ್ವೋಚ್ಛ ನ್ಯಾಯಾಲಯ, ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಸರ್ಕಾರಕ್ಕೆ ಇರುವ ಸಮಸ್ಯೆ ಏನು? ರಾಷ್ಟ್ರೀಯ ಲಸಿಕಾ ಯೋಜನೆಯಾಗಿ ಕೋವಿಡ್ ಲಸಿಕೆಯನ್ನು ಪರಿಗಣಿಸಿ, ಬಡವರು, ದುರ್ಬಲರು ಸೇರಿದಂತೆ ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಸೂಚಿಸಿದೆ. ಅದೇ ವೇಳೆ ಲಸಿಕೆ ನೀಡಿಕೆ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ದಾಟಿಸಿ ನುಣುಚಿಕೊಂಡಿರುವ ಕೇಂದ್ರ ಸರ್ಕಾರದ ಹೊಣೆಗೇಡಿತನವನ್ನೂ ಕೋರ್ಟ್ ಪ್ರಶ್ನಿಸಿದೆ.
ಒಟ್ಟಾರೆ, ಕಳೆದ ಒಂದು ವಾರದಲ್ಲಿ ದೇಶದಲ್ಲಿ ಒಂದು ಕಡೆ ವೈದ್ಯರು, ದಾದಿಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಸಾವುನೋವಿನ ನಡುವೆ ಬೇಯುತ್ತಿರುವ ದೇಶದ ಜನರ ಜೀವ ರಕ್ಷಣೆಗೆ ಹೆಣಗಾಡುತ್ತಿದ್ದರೆ, ದೇಶದ ಆಡಳಿತ ಚುಕ್ಕಾಣಿ ಹಿಡಿದವರ ದಿವ್ಯ ನಿರ್ಲಕ್ಷ್ಯ, ಉಡಾಫೆ, ಅಸೂಕ್ಷ್ಮತೆಗಳಿಂದ ಸಾವಿನ ದವಡೆಗೆ ಸಿಕ್ಕು ಹೈರಾಣಾಗಿರುವ ಜನಸಾಮಾನ್ಯರ ಪರ ದನಿಯಾಗಿ ನ್ಯಾಯಾಂಗ, ಸಂಕಷ್ಟದ ಹೊತ್ತಲ್ಲಿ ಪ್ರಜಾಸತ್ತೆಯ ಮೇಲಿನ ನಂಬಿಕೆಯನ್ನು ಎತ್ತಿ ಹಿಡಿದಿದೆ.
ಗಮನಾರ್ಹವೆಂದರೆ, ಆಡಳಿತರೂಢ ಬಿಜೆಪಿ ಮತ್ತು ಅದರ ನಾಯಕರ ಪರ ಅಪಾರ ಒಲವು ಹೊಂದಿದ್ದ, ಅಂತಹ ತಮ್ಮ ಪಕ್ಷಪಾತಿ ಧೋರಣೆಯನ್ನು ಬಹಿರಂಗವಾಗಿ ಪ್ರದರ್ಶಿಸಿದ ಕಾರಣಕ್ಕೆ ಸಾಕಷ್ಟು ಟೀಕೆಗೂ ಗುರಿಯಾಗಿದ್ದ ಸುಪ್ರೀಂಕೋರ್ಟ್ನ ಹಿಂದಿನ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆಯವರು ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿರುವವರೆಗೆ ಇಂತಹ ಕ್ರಿಯಾಶೀಲತೆ ವಿರಳವಾಗಿತ್ತು. ಏಪ್ರಿಲ್ 23ರಂದು ಅವರು ನಿವೃತ್ತರಾದ ಬಳಿಕ ಕಳೆದ ಒಂದು ವಾರದಲ್ಲಿ ಕೋವಿಡ್ ನಿರ್ವಹಣೆಯ ವಿಷಯದಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಕಾರ್ಯವೈಖರಿ, ನೀತಿಗಳನ್ನು ಪ್ರಶ್ನಿಸುವ ಮೂಲಕ ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟುಗಳು ಸ್ವತಃ ಕೋವಿಡ್ ವಾರಿಯರ್ಸ್ ರೀತಿಯಲ್ಲಿ ಕಾರ್ಯನಿರ್ವಹಿಸತೊಡಗಿವೆ. ಇದು ಕೇವಲ ಕಾಕತಾಳೀಯವಿರಲಿಕ್ಕಿಲ್ಲ..! ಅಲ್ಲವೆ?