ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಇಂದು ಮಾಡಿದ ಭಾಷಣ ಸುಳ್ಳಿನ ಕಂತೆ. ರಾಜ್ಯದ ಇತಿಹಾಸದಲ್ಲಿಯೇ ಇಂತಹ ಕಳಪೆ ಭಾಷಣವನ್ನು ಕೇಳಿರಲಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಹೀಗಾಗಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಹೇಳಿಯೇ ಇಲ್ಲ. ಕೇವಲ ಸುಳ್ಳುಗಳ ಸರಮಾಲೆಯನ್ನು ಸರ್ಕಾರ ರಾಜ್ಯಪಾಲರ ಮೂಲಕ ಹೇಳಿಸಿದೆ ಎಂದಿದ್ದಾರೆ.
ಸರ್ಕಾರದ ನಿಲುವು, ಯೋಜನೆಗಳು, ಮುನ್ನೋಟದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟತೆ ಇರಬೇಕು. ಆದರೆ, ರಾಜ್ಯಪಾಲರು ಇಂದಿನ ಭಾಷಣದಲ್ಲಿ ಆ ರೀತಿ ಯಾವುದೂ ಇರಲಿಲ್ಲ, ಇದೊಂದು ಸುಳ್ಳಿನ ಕಂತೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದೆ. ರಾಜ್ಯಪಾಲರು ಹೇಳಿದ ಸರ್ಕಾರದ ಸಾಧನೆಗಳೆಲ್ಲವೂ ನಮ್ಮ ಅವಧಿಯಲ್ಲಿ ಆಗಿರುವಂಥದ್ದು. ಈ ಸರ್ಕಾರದ ನಿರ್ಧಿಷ್ಟ ಸಾಧನೆಗಳು ಏನೂ ಇಲ್ಲ. ರಾಜ್ಯಪಾಲರ ಭಾಷಣದಲ್ಲಿ ಗೊತ್ತು, ಗುರಿ ಎಂಬುದೇ ಇಲ್ಲ ಎಂದು ಟೀಕಿಸಿದ್ದಾರೆ.
ಯಾವುದೇ ಸರ್ಕಾರಕ್ಕೆ ಒಂದು ದೂರದೃಷ್ಟಿ ಇರಬೇಕು. ಈ ಸರ್ಕಾರದ ಅವಧಿ ಇನ್ನೂ ಎರಡೂವರೆ ವರ್ಷ ಇದೆ. ಈ ಅವಧಿಯಲ್ಲಿ ನಾವು ಏನು ಮಾಡಲಿದ್ದೇವೆ ಎಂಬುದನ್ನು ಹೇಳಬೇಕಿತ್ತು. ರಾಜ್ಯದ ಹಣಕಾಸು ಪರಿಸ್ಥಿತಿ, ನೀರಾವರಿ ಯೋಜನೆಗಳ ಕುರಿತು ಭಾಷಣದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ಎಲ್ಲದಕ್ಕೂ ಸರ್ಕಾರ ಕೊರೊನಾ ನೆಪ ಹೇಳುತ್ತಿದೆ. ಹಣಕಾಸು ಪರಿಸ್ಥಿತಿ ಹದಗೆಡಲು, ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಲು, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡದಿರಲು ಕೊರೊನಾ ಕಾರಣ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ.
ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಈ ಅವಧಿಯಲ್ಲಿನ ಯೋಜನೆ, ಕಾರ್ಯಕ್ರಮಗಳು, ಮುನ್ನೋಟ, ದೂರದೃಷ್ಟಿ ಏನು ಎಂಬುದರ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಏನೂ ಹೇಳಿಲ್ಲ. ಕಾರಣ ಸರ್ಕಾರದ ಸಾಧನೆ ಶೂನ್ಯ. ಇದು ಸತ್ಯಕ್ಕೆ ದೂರವಾದ ಭಾಷಣವಾಗಿದೆ.
ಉತ್ತರ ಕರ್ನಾಟಕ ಜನರಿಗೆ ದ್ರೋಹ :
ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿಯವರು ಬಹಳ ಮಾತನಾಡುತ್ತಾರೆ. ಉತ್ತರ ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ ಎಂದು ಸಚಿವರಾದ ಉಮೇಶ್ ಕತ್ತಿಯವರೇ ಆಗಾಗ ಹೇಳುತ್ತಿದ್ದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದು ಏಕೆ ? ಈ ಸರ್ಕಾರ ಇದುವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಜಂಟಿ ಅಧಿವೇಶನವನ್ನೇ ಬೆಳಗಾವಿಯಲ್ಲಿ ಕರೆಯಬೇಕಿತ್ತು. ಹೀಗಿರುವಾಗ ಉತ್ತರ ಕರ್ನಾಟಕದ ಜನತೆಗೆ ಯಾವ ರೀತಿ ಇವರು ಮುಖ ತೋರಿಸುತ್ತಾರೆಂದು ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ನಮ್ಮ ಅವಧಿಯಲ್ಲಿ ಪ್ರತಿ ವರ್ಷವೂ ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಸಿದ್ದೇವೆ. ಅಲ್ಲಿ ಸುವರ್ಣ ಸೌಧ ಕಟ್ಟಿಸಿದ ಉದ್ದೇಶವಾದರೂ ಏನು ? ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ. ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದವರು ಈಗ ಅಧಿವೇಶನ ನಡೆಸಲು ತಯಾರಿಲ್ಲ. ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿರುವ ದ್ರೋಹ. ಹೀಗಾಗಿ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ, ವರ್ಷಕ್ಕೆ ಒಮ್ಮೆಯಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಯಲೇಬೇಕೆಂದು ಆಗ್ರಹಿಸಿದ್ದಾರೆ.