ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವು ಪ್ರಕಟವಾಗಿದೆ. ಚುನಾವಣಾ ಪೂರ್ವ, ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ನಾಲ್ಕು ರಾಜ್ಯಗಳ ಮಟ್ಟಿಗೆ ಸರಿಯಾಗಿದ್ದರೂ, ಮಾಧ್ಯಮಗಳ ಹೈಪ್ ಮೀರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಪರ ಅಭೂತಪೂರ್ವ ಬೆಂಬಲ ನೀಡಿರುವುದು ಅನಿರೀಕ್ಷಿತ ಅಚ್ಚರಿ.
ಪಂಚರಾಜ್ಯಗಳ ಪೈಕಿ ದೇಶದ ನಾಗರಿಕರ ಗಮನವಿದ್ದುದು, ದೀದಿ ವರ್ಸಸ್ ಮೋದಿ ಎಂದೇ ಬಿಂಬಿಸಲಾಗಿದ್ದ ಪಶ್ಚಿಮ ಬಂಗಾಳದ ಚುನಾವಣೆ ಫಲಿತಾಂಶದ ಮೇಲೆ. ಬೆಟ್ಟಿಂಗ್‍ಗಳು ಕೂಡ ನಡೆಯುತ್ತಿದ್ದುದು ಅದೇ ರಾಜ್ಯದ ಫಲಿತಾಂಶದ ಬಗ್ಗೆ. ಅದಕ್ಕೆ ಹಲವು ಸಮೀಕ್ಷೆಗಳು ಮಮತಾಗೆ ಬಹಳ ಸಣ್ಣ ಅಂತರದ ಗೆಲುವು ಸಿಗಬಹುದೆಂದು ಹೇಳಿದ್ದವು. ಇನ್ನು ಕೆಲವು ಬಿಜೆಪಿಯೇ ಗೆಲ್ಲುತ್ತದೆ ಸಣ್ಣ ಅಂತರದಲ್ಲಿ ಎಂದಿದ್ದವು. ಬೆರಳೆಣಿಕೆಯಷ್ಟು ಸಮೀಕ್ಷೆಗಳು ಬಿಜೆಪಿಗೆ ಭರ್ಜರಿ ಜಯ ಎಂದೇ ಭವಿಷ್ಯ ನುಡಿದಿದ್ದವು. ಆದರೆ ಹಾಗಾಗಲಿಲ್ಲ. ಫಲಿತಾಂಶ ತದ್ವಿರುದ್ಧವಾಗಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ‘’ಅಬ್ ಕೀ ಬಾರ್ ದೋ ಸೌ ಪಾರ್” ಎಂದು ಬಿಜೆಪಿ 200 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೋದಲ್ಲಿ ಬಂದಲ್ಲಿ ಹೇಳಿಕೊಂಡರೂ ಬಂಗಾಳಿ ಮತದಾರರು ಸದ್ದಿಲ್ಲದೆ, 200ಕ್ಕೂ ಹೆಚ್ಚು ಸೀಟುಗಳನ್ನು ದೀದಿಯ ಟಿಎಂಸಿಗೆ ಕೊಟ್ಟು ಗೆಲ್ಲಿಸಿದ್ದಾರೆ. ಆ ಮೂಲಕ ಪ.ಬಂಗಾಳದ ಚುನಾವಣಾ ಅಖಾಡದಲ್ಲಿ ಬಿಜೆಪಿಯ ರಾಜಕೀಯ ಚಾಣಾಕ್ಷ ಅಮಿತ್ ಶಾ ಅವರನ್ನು ಈ ಬಾರಿ ಮಮತಾ ಬ್ಯಾನರ್ಜಿಯ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ “ಚಿತ್” ಮಾಡಿದ್ದಾರೆ.
ಪ್ರಾದೇಶಿಕ ಪಕ್ಷಗಳಿಗೆ ಭವ್ಯ ಭವಿಷ್ಯ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಟಿಎಂಸಿ, ತಮಿಳುನಾಡಿನಲ್ಲಿ ಕಾಂಗ್ರೆಸ್ ಜತೆಗೂಡಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ, ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಬಿಜೆಪಿಯ ಅಶ್ವಮೇಧ ಕುದುರೆಯ ವಿಜಯಯಾತ್ರೆಗೆ ಕಡಿವಾಣ ಹಾಕಿವೆ.
ಅಸ್ಸಾಂನಲ್ಲಿ ಸ್ಥಳೀಯ ಪ್ರಾದೇಶಿಕ ಪಕ್ಷಗಳ ಜತೆಗೂಡಿ ಬಿಜೆಪಿ ಗೆದ್ದಿದೆ. ಪುದುಚೆರಿಯಲ್ಲೂ ಅದೇ ಮಾದರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇವೆರಡೂ ವಿಜಯಯಾತ್ರೆಗಳ ಹಿಂದೆ ಪ್ರಾದೇಶಿಕ ಪಕ್ಷಗಳ ಕೊಡುಗೆಯನ್ನು ಗಮನಿಸಿದರೆ, ರಾಷ್ಟ್ರೀಯ ಪಕ್ಷಗಳ ಅಬ್ಬರದಲ್ಲಿ ಪ್ರಾದೇಶಿಕ ಪಕ್ಷಗಳು ಹೇಳಹೆಸರಿಲ್ಲದಂತಾಗಿಲ್ಲ. ಬದಲಿಗೆ ಐದೂ ರಾಜ್ಯಗಳಲ್ಲಿ ಮತ್ತಷ್ಟು ಪ್ರಬಲವಾಗಿ ತಮ್ಮ ತಮ್ಮ ಸಾಮರ್ಥ್ಯ, ಸದೃಢತೆಯಿಂದ ಅವುಗಳಿಗಿರುವ ಉಜ್ವಲ ಭವಿಷ್ಯವನ್ನು ಪ್ರಕಟಪಡಿಸಿವೆ.
ಮೋದಿಯ ಸಂಪೂರ್ಣ ಸೇನೆ ವರ್ಸಸ್ ದೀದಿಯ ಏಕಾಂಗಿ ನಾಯಕತ್ವ
ಐದೂ ರಾಜ್ಯಗಳ ಚುನಾವಣೆಯ ಪ್ರಕ್ರಿಯೆಯನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರದ ಆಡಳಿತರೂಢ ಬಿಜೆಪಿಯ ಸಮಸ್ತ ಸೇನಾನಿಗಳು ಪಶ್ಚಿಮ ಬಂಗಾಳದ ಚುನಾವಣಾ ಕದನದಲ್ಲಿ ಒಂದಿಲ್ಲೊಂದು ರೀತಿ ಪಾಲ್ಗೊಂಡಿದ್ದರು. ಇತ್ತ ಟಿಎಂಸಿ ಸಂಪೂರ್ಣವಾಗಿ ಮಮತಾ ಬ್ಯಾನರ್ಜಿ ಮೇಲೆ ಅವಲಂಬಿತವಾಗಿತ್ತು. ಆದರೂ ಮೋದಿಯ ಅಶ್ವಮೇಧದ ಕುದುರೆಗೆ ಎದುರು ನಿಂತು ಹೋರಾಡಿ ಗೆದ್ದಿದ್ದು ಏಕಾಂಗಿ ದೀದಿಯೇ ಎನ್ನುವುದು ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ಬಂಗಾಳಿಗಳು ಇತರೆ ಭಾರತೀಯ ಮತದಾರರಿಗೆ ನೀಡಿದ ದೊಡ್ಡ ಸಂದೇಶವೆಂದರೂ ತಪ್ಪಲ್ಲ.
ಉಳಿದ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳ ಅಬ್ಬರ
ದೇಶದಲ್ಲೊಮ್ಮೆ ಪ್ರಾದೇಶಿಕ ಪಕ್ಷಗಳ ಸರಕಾರಗಳನ್ನು ಗಮನಿಸಿ. ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್), ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನಾಯಕತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಒಡಿಶಾದಲ್ಲಿ ನವೀನ್ ಪಟ್ನಾಯಕ್ ರ ಬಿಜು ಜನತಾ ದಳ (ಬಿಜೆಡಿ), ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯ ಶಿವಸೇನೆ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ, ಆಂಧ್ರಪ್ರದೇಶದಲ್ಲಿ ವೈ.ಎಸ್. ಜಗನ್ಮೋಹನ್ ರೆಡ್ಡಿಯ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ , ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ರ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಆಡಳಿತರೂಢ ಪಕ್ಷವಾಗುವ ಹಾದಿಯಲ್ಲಿ ದೈತ್ಯ ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಮಣಿಸಿವೆ.
ಇನ್ನು ಬಿಜೆಪಿ ಜತೆಗೂಡಿದರೂ ಅಧಿಕಾರದ ಗುದ್ದುಗೆ ಏರಿರುವ ಬಿಹಾರದ ಜೆಡಿಯು ನೇತಾರ ನಿತೀಶ್ ಕುಮಾರ್, ಹರ್ಯಾಣದ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ದುಷ್ಯಂತ್ ಚೌತಾಲ ತಮ್ಮ ರಾಜ್ಯ, ಜನರ ಪರವಾಗಿ ಅಧಿಕಾರವನ್ನು ಚಲಾಯಿಸುವ ಪ್ರಶ್ನೆ ಬಂದಾಗ ತನ್ನ ಸಹಪಕ್ಷದ ಮೇಲೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಕರ್ನಾಟಕದಲ್ಲೂ ಬರಬಾರದೇ ಪ್ರಾದೇಶಿಕ ಪಕ್ಷ
ಪಂಚರಾಜ್ಯಗಳ ಈ ಫಲಿತಾಂಶದ ಬಳಿಕ ಮತ್ತೆ ಕಾಡುವ ಪ್ರಶ್ನೆ, ನಮ್ಮ ಕರ್ನಾಟಕದಲ್ಲೂ ದಿಲ್ಲಿಯ ಮಹಾರಾಜರಿಗೆ ಸೆಡ್ಡು ಹೊಡೆದು, ರಾಜ್ಯದ ಬೇಡಿಕೆಗಳನ್ನು ಈಡೇರಿಸಬಲ್ಲ ಪ್ರಾದೇಶಿಕ ಪಕ್ಷ ಬರಬಾರದೇ?
ಕರ್ನಾಟಕ ರಾಜ್ಯದ ಉದಯವಾದಾಗಿನಿಂದಲೂ ಕೇಂದ್ರದಲ್ಲಿರುವ ಪಕ್ಷದ ಆಡಳಿತ ರಾಜ್ಯದಲ್ಲಿ ಇರಲಿ, ಇಲ್ಲದಿರಲಿ ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದ ರೀತಿ, ಜುಟ್ಟು ಹಿಡಿದಾದರೂ ಸರಿ ಕೇಂದ್ರ ಸರಕಾರದಿಂದ ಅನುದಾನ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಪರಿಹಾರವನ್ನು ತರಬಲ್ಲ ಸಮರ್ಥ ಪ್ರಾದೇಶಿಕ ಪಕ್ಷದ ಕೊರತೆ ನಮ್ಮ ರಾಜ್ಯವನ್ನು ಕಾಡಿದೆ. ಅಲ್ಲೆಲ್ಲಾ ರಾಷ್ಟ್ರೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಪ್ರಾದೇಶಿಕ ಪಕ್ಷಗಳು ಗದ್ದುಗೆಗೆ ಏರಿದರೂ ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್ ಥರ ರಾಜ್ಯದ ಕೆಲಸವನ್ನು ಮಾಡಿಸಿಕೊಂಡಿವೆ. ನಮ್ಮಲ್ಲಿ ಜನತಾ ಸರಕಾರ, ಅ ನಂತರ ಜನತಾ ದಳದಂಥ ಪಕ್ಷಗಳು ರಾಷ್ಟ್ರೀಯ ಪಕ್ಷವೋ ಅಥವಾ ಪ್ರಾದೇಶಿಕ ಪಕ್ಷವೋ ಎಂಬ ಗೊಂದಲದಲ್ಲೇ ಪರಿಪೂರ್ಣ ಪ್ರಾದೇಶಿಕ ಪಕ್ಷಗಳಾಗದೆ ಉಳಿದವು. ಅವುಗಳ ತೆಕ್ಕೆಯಲ್ಲಿ ರಾಜ್ಯದ ಚುಕ್ಕಾಣಿ ಇದ್ದಾಗಲೂ ಕೇಂದ್ರ ಸರಕಾರದ ಜತೆಗೆ ಗುದ್ದಾಡಿ ರಾಜ್ಯದ ಹಕ್ಕಿನ ಪಾಲನ್ನು ತಂದಿರುವ ಉದಾಹರಣೆಗಳು ಬಹಳ ಕಡಿಮೆ. ಇದ್ದರೂ ಬೆರಳೆಣಿಕೆಯಷ್ಟು ಮಾತ್ರ.
ಕೇಂದ್ರದಲ್ಲಿ ಆಯಾ ಕಾಲದಲ್ಲಿ ಆಡಳಿತೂಢವಾಗಿದ್ದ, ಇರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ನಿರಾಶೆಗೊಳಗಾದಾಗಲೆಲ್ಲ, ಚುನಾವಣೆ ಸಂದರ್ಭದಲ್ಲಿ ದಿಢೀರ್ ಆಗಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ಚುನಾವಣೆ ಮುಗಿದೊಡನೆ ಮಾಯವಾಗುವ ಪರಿಪಾಠ ಕನ್ನಡಿಗರ ಪಾಲಿಗೆ ಸಾಮಾನ್ಯ. ಹಿಂದಿನ ಕತೆ ಬಿಡಿ. ಈಗಿನ ಪರಿಸ್ಥಿತಿ ನೋಡಿ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜತೆ ಗುದ್ದಾಡಿ ಕನ್ನಡ ನಾಡು, ನುಡಿ, ಜಲ, ನೆಲಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನ್ಯಾಯ ದೊರಕಿಸಿಕೊಡುವುದನ್ನು ನಿರೀಕ್ಷೆ ಮಾಡಲು ಸಾಧ್ಯವೇ? ಅಂಥದ್ದೊಂದು ಪವಾಡವನ್ನು ಕನಸಿನಲ್ಲಾದರೂ ಊಹಿಸಲು ಸಾಧ್ಯವೇ?
ರಾಜ್ಯ ಉದಯವಾದಾಗಿನಿಂದ ವಿವಿಧ ಸಂದರ್ಭಗಳಲ್ಲಿ ಹುಟ್ಟಿಕೊಂಡ ಪ್ರಾದಶಿಕ ಪಕ್ಷಗಳನ್ನು ಗಮನಿಸಿ ಮತ್ತು ಅವುಗಳ ಹಿನ್ನೆಲೆಯನ್ನು ನೆನಪಿಸಿ. ಮೈಸೂರಿನ ಸಾಹುಕಾರ್ ಚೆನ್ನಯ್ಯ ಅವರ ಪ್ರಜಾ ಪಕ್ಷ, ಶಿವಮೊಗ್ಗದ ಶಾಂತವೇರಿ ಗೋಪಾಲಗೌಡರ ಸಂಯುಕ್ತ ಮತ್ತು ಪ್ರಜಾ ಸೋಷಿಯಲಿಸ್ಟ್ ಪಕ್ಷಗಳು, ಬೆಂಗಳೂರಿನ ಕೆಂಗಲ್ ಹನುಮಂತಯ್ಯ ಅವರ ಸುರಾಜ್ಯ ಪಕ್ಷ, ಉತ್ತರ ಕರ್ನಾಟಕದ ಕೆ.ಎಚ್.ಪಾಟೀಲರ ರೆಡ್ಡಿ ಕಾಂಗ್ರೆಸ್ ಪಕ್ಷ, ದೇವರಾಜ ಅರಸರ ಅರಸು ಕಾಂಗ್ರೆಸ್ ಪಕ್ಷ, ಗುಂಡೂರಾಯರ ಇಂದಿರಾ ಕಾಂಗ್ರೆಸ್, ಎ.ಕೆ..ಸುಬ್ಬಯ್ಯ ಅವರ ಕನ್ನಡನಾಡು ಪಕ್ಷ, ವಾಟಾಳ್ ನಾಗರಾಜರ ಕನ್ನಡ ಚಳವಳಿ ವಾಟಾಳ್ ಪಕ್ಷ,, ಲಂಕೇಶರ ಪ್ರಗತಿ ರಂಗ, ರಾಮಕೃಷ್ಣ ಹೆಗೆಡೆಯವರ ಲೋಕಶಕ್ತಿ, ಶಿವಮೊಗ್ಗದ ಬಂಗಾರಪ್ಪನವರ ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಕ್ಷಗಳು, ಗದಗದ ಸಾರಿಗೆ ಉದ್ಯಮಿ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರರ ಕನ್ನಡನಾಡು ಪಕ್ಷ, ಶ್ರೀರಾಮುಲು ಅವರ ಬಿ.ಎಸ್.ಆರ್. ಪಕ್ಷ, ಉದ್ಯಮಿ ಅಶೋಕ್ ಖೇಣಿ ಅವರ ಕರ್ನಾಟಕ ಮಕ್ಕಳ ಪಕ್ಷ, ಯಡಿಯೂರಪ್ಪ ಅವರ ಕರ್ನಾಟಕ ಜನತಾಪಕ್ಷ, ಕನ್ನಡ ನಾಡಿನ ಬುದ್ಧಿಜೀವಿಗಳು ಚಿಂತಕರು ಕೂಡಿ ಕಟ್ಟಿದ ಸರ್ವೋದಯ ಪಕ್ಷ, ಸಿನಿಮಾ ನಟ ಉಪೇಂದ್ರರ ಪ್ರಜಾಕೀಯ ಪಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್, ವರ್ತೂರು ಪ್ರಕಾಶ್ ಅವರ ನಮ್ಮ ಕಾಂಗ್ರೆಸ್ ಪಕ್ಷ, ಮಹಾದಾಯಿ-ಕಳಸಾ ಬಂಡೂರಿ ಚಳವಳಿ ವೇಳೆ ಹುಟ್ಟಿದ ಜನಸಾಮಾನ್ಯ ಕಾಂಗ್ರೆಸ್… ಪಟ್ಟಿ ಹೀಗೆ ಮುಂದುವರಿಯಲಿದೆ. ಆದರೆ ಅವುಗಳಲ್ಲಿ ಯಾವೊಂದು ಪಕ್ಷವೂ ರಾಜ್ಯದ ಆಶೋತ್ತರವನ್ನು ಪೂರೈಸುವಷ್ಟರ ಮಟ್ಟಿಗೆ ದಕ್ಷಿಣ ಭಾರತದ ಉಳಿದ ಪ್ರಾದೇಶಿಕ ಪಕ್ಷಗಳಂತೆ ಸಶಕ್ತವಾಗಿ ಬೆಳೆಯಲಿಲ್ಲ!
ನಮ್ಮಲ್ಲಿ ಉದಯಿಸಿದ ಬಹುತೇಕ ರಾಜಕೀಯ ಪಕ್ಷಗಳು ಬಹುತೇಕ ರಾಜಕೀಯ ಸೇಡು, ಪ್ರತೀಕಾರದ ಉದ್ದೇಶಕ್ಕೇ ಜನಿಸಿದ್ದು ಸುಳ್ಳಲ್ಲ. ರಾಜ್ಯದ ಆಶೋತ್ತರಗಳಿಗೆ ಸ್ಪಂದಿಸಬಲ್ಲ ಪ್ರಣಾಳಿಕೆ ಸಿದ್ಧಪಡಿಸಿ, ಕನ್ನಡಿಗರ ಮನಗೆದ್ದು ಕನ್ನಡ ನಾಡು, ನುಡಿ, ಮಣ್ಣಿಗಾಗಿ ದುಡಿಯಬಲ್ಲ ಭರವಸೆಯನ್ನು ಯಾವುದೇ ಪಕ್ಷ ಮೂಡಿಸದಿರುವುದೇ ಅವುಗಳ ಬೆಳವಣಿಗೆ ಮೊಟಕುಗೊಳ್ಳಲು ಕಾರಣವಾಯಿತು. ಕನ್ನಡ ನಾಡು ಕಂಡ ಮಹಾನ್ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಅವರಾಗಲಿ, ಬಂಗಾರಪ್ಪ, ಗುಂಡೂರಾಯರಂಥವರಾಗಲಿ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಿದರೂ ನಾನಾ ಕಾರಣಗಳಿಗಾಗಿ ರಾಜ್ಯಕ್ಕೊಂದು ಪರ್ಯಾಯ ಪ್ರಾದೇಶಿಕ ಪಕ್ಷದ ಕೊಡುಗೆ ಕೊಡುವಲ್ಲಿ ವಿಫಲರಾದರು ಎಂದರೆ ತಪ್ಪಿಲ್ಲ.
ಕಾರಣ, ಮೇಲಿನ ಪ್ರಾದೇಶಿಕ ಪಕ್ಷಗಳೆಲ್ಲವೂ ನಮ್ಮ ಪ್ರದೇಶಕ್ಕೆ ಪೂರಕವಾದ ವಸ್ತು, ವಿಷಯಗಳನ್ನು ಹೊಂದಿರುವ ಸೈದ್ಧಾಂತಿಕ ವಿಚಾರಧಾರೆಯನ್ನು ಪ್ರಕಟಪಡಿಸಲಿಲ್ಲ. ಪಕ್ಷ ಗೆಲ್ಲಲು ಬೇಕಾದ ಪೂರ್ವ ತಯಾರಿ, ಪರಿಶ್ರಮ, ಸೋತರೂ ಪಕ್ಷವನ್ನು ಮತ್ತೆ ಗೆಲುವಿನ ಹಾದಿಗೆ ತರುವ ಛಲ, ಪೂರಕವಾದ ಪ್ರಣಾಳಿಕೆ ಯಾವುದನ್ನೂ ಅವು ಸಾಕಷ್ಟು ಪ್ರಮಾಣದಲ್ಲಿ ಹೊಂದಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರನ್ನು ಜಾತಿ, ಧರ್ಮದ ಸಮೀಕರಣ ಮೀರಿ ತನ್ನ ವೈಯಕ್ತಿಕ ವರ್ಚಸ್ಸೆಂಬ ದಾರದಿಂದ ಪೋಣಿಸಬಲ್ಲ ವೈಯಕ್ತಿಕ ಕರಿಷ್ಮಾ ಇರಲಿಲ್ಲ.
ಜಾತಿ, ಧರ್ಮ ಶಕ್ತಿಯೂ ಮಿತಿಯೂ ಎರಡೂ ನಿಜ
ಕರ್ನಾಟಕದ ಪ್ರಾದೇಶಿಕ ಪಕ್ಷಗಳ ಇತಿಹಾಸವನ್ನು ಅವಲೋಕಿಸಿದರೆ ಆಯಾ ಪಕ್ಷಗಳ ನಾಯಕರು ರಾಷ್ಟ್ರೀಯ ಪಕ್ಷದಲ್ಲಿದ್ದಾಗ ಹೊಂದಿದ್ದ ವರ್ಚಸ್ಸು, ವೈಯಕ್ತಿಕವಾಗಿ ಪಕ್ಷ ಕಟ್ಟಿದಾಗ ಸೋರಿ ಹೋಗಿದ್ದು ಗಮನಕ್ಕೆ ಬರುತ್ತದೆ. ಆ ನಾಯಕರಿಗೆ ತಮ್ಮ ಜಾತಿಯೇ ದೊಡ್ಡ ಶಕ್ತಿಯಾಗಿತ್ತು. ಮತ್ತು ಅದೇ ಅವರ ಮಿತಿಯೂ ಆಗಿತ್ತು. ಅವರ ಬೆಳವಣಿಗೆಗೆ ದೊಡ್ಡ ಬೇಲಿಯಂತೆ ಅಡ್ಡ ನಿಂತು ಅಡ್ಡಿಯಾಗಿಯೂ ಹೋಯಿತು.
ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ, ಆಂಧ್ರದಲ್ಲಿ ತೆಲುಗುದೇಶಂ, ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್ ನಲ್ಲಿ ಅಕಾಲಿ ದಳ, ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ), ಮಹಾರಾಷ್ಟ್ರದಲ್ಲಿ ಶಿವಸೇನೆ, ಜಾರ್ಖಂಡ್ ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಇಂಥ ಪ್ರಾದೇಶಿಕ ಪಕ್ಷಗಳ ಉದಯ, ಅದಕ್ಕೆ ಪೂರಕವಾದ ಸನ್ನಿವೇಶಗಳು, ನಂತರದ ಬೆಳವಣಿಗೆಗಳು, ಆಯಾ ಪಕ್ಷಗಳ ಸ್ಥಾಪಕರ ಹೋರಾಟದ ಕತೆಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಏಕೆ ಅಂಥ ಬೆಳವಣಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ನಮ್ಮ ನಾಡು, ನುಡಿ, ಜಲ, ನೆಲ, ಧಾರ್ಮಿಕ ಆಚರಣೆಗಳು, ವೈವಿಧ್ಯಗಳಿಗೆ ಸಂಬಂಧಿಸಿದಂತೆ ನೂರಾರು ಸಮಸ್ಯೆಗಳಿಂದ ನಲುಗುತ್ತಿರುವ, ಪ್ರತಿ ಬಾರಿಯೂ ಪಕ್ಕದ ರಾಜ್ಯದ ಪ್ರಾದೇಶಿಕ ಪಕ್ಷದ ರಾಜಕೀಯದೆದುರು ಮಂಡಿಯೂರಬೇಕಾದ ಕನ್ನಡಿಗರ ದಯನೀಯ ಸ್ಥಿತಿಯನ್ನು ನೆನೆದಾಗಲೆಲ್ಲ, ಕನ್ನಡಿಗರ ಮನಸ್ಸು ಮೂಕವಾಗುತ್ತದೆ. ನಮ್ಮಲ್ಲೇಕೆ ಅಂಥದ್ದೊಂದು ಸಶಕ್ತ ಪ್ರಾದೇಶಿಕ ಬರಬಾರದು ಎಂದು ಅನ್ನಿಸುತ್ತದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಹಾಗೆ ಅನ್ನಿಸುತ್ತದೆ. ಚುನಾವಣೆ ಮುಗಿದಾಗ ಮರೆತು ಹೋಗುತ್ತದೆ!