ಅಸ್ಸಾಂ ಶೀಘ್ರದಲ್ಲೇ ತನ್ನ ಜನಸಂಖ್ಯಾ ನೀತಿಯನ್ನು ರಾಜ್ಯ ಸರ್ಕಾರ ಪ್ರಾಯೋಜಿತ ಯೋಜನೆಗಳಲ್ಲಿ ಜಾರಿಗೆ ತರಲಿದೆ. ಸಾಲ ಮನ್ನಾ ಅಥವಾ ಇನ್ಯಾವುದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಿದ್ದರೆ ಇನ್ನು ಮುಂದೆ ಸರ್ಕಾರದ ಜನಸಂಖ್ಯಾ ನೀತಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅದಾಗ್ಯೂ, ಟೀ ಎಸ್ಟೇಟುಗಳಲ್ಲಿ ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನಾಲ್ಕರಿಂದ ಐದು ಮಕ್ಕಳು ಪಡೆಯುವವರೆಗೆ ಜನಸಂಖ್ಯಾ ನೀತಿಯಿಂದ ವಿನಾಯಿತಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗುವುದಿಲ್ಲ ಮತ್ತು ಅವರು ಪಂಚಾಯತ್ ಮತ್ತು ಇತರೆ ಸ್ಥಳೀಯ ಆಡಳಿತ ಸಂಸ್ಥೆಗಳ ಸದಸ್ಯರಾಗಲು ಸಾಧ್ಯವಿಲ್ಲ ಎಂದು “ಅಸ್ಸಾಂನ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ” ಹೇಳಿತ್ತು. ಈ ವರ್ಷದ ಜನವರಿ 1 ರಿಂದ ಜಾರಿಗೆ ಬಂದಿದ್ದ ಈ ನೀತಿಯ ಕಾರಣ, ಹಲವು ಯೋಜನೆಗಳಿಗೆ ಫಲಾನುಭವಿಗಳಾಗುವ ಅವಕಾಶವನ್ನು ಹಲವಾರು ಮಂದಿ ಕಳೆದುಕೊಂಡಿದ್ದರು.

ಅಸ್ಸಾಂ ಜನಸಂಖ್ಯೆ ಕುಸಿಯುವ ಆತಂಕ
ಅಸ್ಸಾಮಿನಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಅಸ್ಸಾಮಿನ ಮಹಿಳೆಯರಲ್ಲಿ ಫಲವತ್ತತೆ ಪ್ರಮಾಣ ಕುಸಿದಿದೆ. ಇದು ಹೀಗೇ ಮುಂದುವರೆದರೆ, ಅಸ್ಸಾಂನ ಭವಿಷ್ಯದ ಜನಸಂಖ್ಯೆಯು ಪ್ರಸ್ತುತ ಜನಸಂಖ್ಯೆಗಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ.
ಇದೇ ಆತಂಕವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೈಗೊಂಡ ಮತ್ತು 2020 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಡೇಟಾವನ್ನು ಹಂಚಿಕೊಂಡಿದ್ದು, ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಭಾರತೀಯ ರಾಜ್ಯಗಳಲ್ಲಿ ಒಟ್ಟು ಫಲವತ್ತತೆ ಪ್ರಮಾಣ (ಟಿಎಫ್‌ಆರ್) ಕುಸಿದಿದೆ ಎಂದು ಹೇಳಿದೆ.

ಅದೇ ಸಮೀಕ್ಷೆಯ ಪ್ರಕಾರ, ಅಸ್ಸಾಂನಲ್ಲಿ ಮಹಿಳೆಯರ ಫಲವತ್ತತೆ ಪ್ರಮಾಣವು 2015-16ರಲ್ಲಿ 2.2 ರಿಂದ 2020-21ರಲ್ಲಿ 1.9 ಕ್ಕೆ ಇಳಿದಿದೆ. ಇದು ಅಸ್ಸಾಂನ ಭವಿಷ್ಯದ ಜನಸಂಖ್ಯೆಗೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಹೇಳಿದೆ.