ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವೆ ಐದು ದಶಕಗಳಿಂದ ಬಾಕಿ ಇದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ದೀರ್ಘಕಾಲೀನ ಈ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
“ವಿವಾದ ಮುಕ್ತ ಈಶಾನ್ಯಕ್ಕೆ ಇಂದು ಮಹತ್ವದ ದಿನ. ಮೋದಿಯವರು ಪ್ರಧಾನಿಯಾದಾಗಿನಿಂದ ಈಶಾನ್ಯ ಭಾಗದ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಿದ್ದಾರೆ” ಎಂದು ಅಮಿತ್ ಶಾ ಹೇಳಿದ್ದಾರೆ.
“ನಾನು ಈಶಾನ್ಯ ಗಡಿ ಸಮಸ್ಯೆಯ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇನೆ. 2019 ರಲ್ಲಿ ತ್ರಿಪುರಾದಲ್ಲಿ ಸಶಸ್ತ್ರ ಗುಂಪುಗಳ ನಡುವೆ ಒಪ್ಪಂದವಿತ್ತು. ಜನವರಿ 16, 2020 ರಂದು ಸಹಿ ಮಾಡಿದ ಬ್ರೂ ರಿಯಾಂಗ್ ಒಪ್ಪಂದವು 34,000 ಕ್ಕೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡಿದೆ. ಐತಿಹಾಸಿಕ ಬೋಡೋ ಒಪ್ಪಂದಕ್ಕೆ 27 ಜನವರಿ, 2020 ರಂದು ಸಹಿ ಹಾಕಲಾಯಿತು, ನಂತರ, ಕಾರ್ಬಿ ಆಂಗ್ಲಾಂಗ್ ಒಪ್ಪಂದವನ್ನು ಸೆಪ್ಟೆಂಬರ್, 2021 ರಲ್ಲಿ ಮತ್ತು ಇಂದು ಈ ಒಪ್ಪಂದವನ್ನು ತಲುಪಲಾಯಿತು. ಅಸ್ಸಾಂನ ಸ್ವರೂಪಕ್ಕೆ ತೊಂದರೆಯಾಗದಂತೆ ಮತ್ತು ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ 50 ವರ್ಷಗಳ ಸಮಸ್ಯೆಯನ್ನು ಕೊನೆಗೊಳಿಸಲಾಗಿದೆ. 70 ರಷ್ಟು ಗಡಿ ವಿವಾದ ಬಗೆಹರಿದಿದೆ” ಎಂದು ಅವರು ಹೇಳಿದ್ದಾರೆ.

ಅಸ್ಸಾಂ ಮತ್ತು ಮೇಘಾಲಯ ಎರಡೂ ಸರ್ಕಾರಗಳು ತಮ್ಮ ರಾಜ್ಯದ ಗಡಿಯುದ್ದಕ್ಕೂ 12 ಪ್ರದೇಶಗಳಲ್ಲಿ ಆರರಲ್ಲಿ ಗಡಿ ವಿವಾದಗಳನ್ನು ಪರಿಹರಿಸಲು ಕರಡು ನಿರ್ಣಯದೊಂದಿಗೆ ಬಂದಿದ್ದವು. ಅಸ್ಸಾಂ ಮತ್ತು ಮೇಘಾಲಯ 885-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ.
ಮೇಘಾಲಯ ರಾಜ್ಯದಲ್ಲಿ ವಿವಾದದ 12 ಪ್ರದೇಶಗಳಿವೆ ಮತ್ತು ನಿರ್ಣಯದ ಮೊದಲ ಹಂತದಲ್ಲಿ ಆರು ಪ್ರದೇಶಗಳ ವಿವಾದವನ್ನು ಪರಿಹರಿಸಲಾಗಿದೆ ಎಂದು ಮೇಘಾಲಯ ಸಿಎಂ ಶರ್ಮಾ ಈ ಹಿಂದೆ ಹೇಳಿದ್ದರು.
1972 ರಲ್ಲಿ ಅಸ್ಸಾಂನಿಂದ ಮೇಘಾಲಯವು ಪ್ರತ್ಯೇಕ ರಾಜ್ಯವಾಗಿ ಬೇರ್ಪಟ್ಟಂದಿನಿಂದ ಎರಡು ರಾಜ್ಯಗಳ ನಡುವೆ ಗಡಿ ವಿವಾದವು ಹುಟ್ಟಿಕೊಂಡಿತು. ಈ ವಿವಾದವನ್ನು ಬಗೆ ಹರಿಸಲು, ಕಳೆದ ವರ್ಷ ಆಗಸ್ಟ್‌ನಲ್ಲಿ, ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ಉಭಯ ರಾಜ್ಯಗಳ ಮೂರು ಪ್ರಾದೇಶಿಕ ಸಮಿತಿಯನ್ನು ರಚಿಸಿತ್ತು.
ಪ್ರಸ್ತಾವಿತ ಶಿಫಾರಸುಗಳ ಪ್ರಕಾರ, ವಿವಾದಿತ 36.79 ಚದರ ಕಿಮೀ ಭೂಮಿಯಲ್ಲಿಅಸ್ಸಾಂ 18.51 ಚದರ ಕಿಲೋಮೀಟರ್ ಅನ್ನು ಇಟ್ಟುಕೊಂಡು ಉಳಿದ 18.28 ಚದರ ಕಿಮೀಯನ್ನು ಮೇಘಾಲಯಕ್ಕೆ ನೀಡುತ್ತದೆ. ಎರಡು ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಅರ್ಧ ಶತಮಾನಗಳ ಇತಿಹಾಸವಿರುವುದರಿಂದ ಅಸ್ಸಾಂ ಮತ್ತು ಮೇಘಾಲಯ ನಡುವಿನ ಒಪ್ಪಂದವು ಮಹತ್ವದ್ದಾಗಿದೆ.