ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(NWKRTC)ದ ಸಾರಿಗೆಗಳಲ್ಲಿ ಇನ್ನು ಮುಂದೆ ನಿರ್ವಾಹಕನ ಬಳಿ ಚಿಲ್ಲರೆ ವಾಪಸ್ಸು ಕೇಳಿದರೆ ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಂದು ಪರಿಗಣಿಸಲಾಗುವುದು ಮತ್ತು ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ ಮತ್ತು ಈ ಬಗ್ಗೆ ಬಸ್ಸುಗಳಲ್ಲಿ ಬಿತ್ತಿಪತ್ರಗಳನ್ನು ಸಹ ಅಂಟಿಸಲಾಗಿದೆ.
ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕ ಮತ್ತು ಸಾರಿಗೆ ಸಿಬ್ಬಂದಿ ನಡುವೆ ಆಗಾಗ ಘರ್ಷಣೆ ನಡೆಯುವುದು ಹೊಸದೇನಲ್ಲ. ಚಿಲ್ಲರೆಯ ಸಮಸ್ಯೆ ತಲೆದೂರುವುದು ಆಗಾಗ ಬಸ್ಸಿನಲ್ಲಿ ಪ್ರಯಾಣಿಕ ಮತ್ತು ನಿರ್ವಾಹಕನ ನಡುವೆ ವಾಗ್ವಾದವೇ ನಡೆದು ಬಿಡುತ್ತದೆ. ಇದರಿಂದ ಬಸ್ಸುಗಳು ಗಂಟೆಗಟ್ಟಲೆ ನಿಂತ ಕಡೆ ನಿಂತು ಬಿಡುತ್ತವೆ ಈ ಸಮಸ್ಯೆಗಳು ಮುಂದಿನ ದಿನಗಳಲ್ಲಿ ತಲೆದೂರಬಾರದು ಎಂಬ ಕಾರಣಕ್ಕೆ ಸಂಸ್ಥೆಯ ತನ್ನೆಲ್ಲಾ ಬಸ್ಸುಗಳಲ್ಲಿ ಈ ಬಿತ್ತಿಪತ್ರಗಳನ್ನು ಅಂಟಿಸಲು ನಿರ್ಧರಿಸಿದೆ.
ಸಂಸ್ಥೆಯ ಈ ನಿರ್ಧಾರವು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ್ದು ಎಲ್ಲರೂ ಒಮ್ಮಲ್ಲೆ ಶಾಕ್ ಆಗಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಶಾಲಾ ಶಿಕ್ಚಕರಾದ ಕೆಂಪಣ್ಣ ಹವಾಲ್ದಾರ್ ʻಬಸ್ಸಿನಲ್ಲಿ ನಾನು ಪ್ರತಿನಿತ್ಯ ಬಾಗಲಕೋಟೆಗೆ ಪ್ರಯಾಣಿಸುತ್ತೇನೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಈ ರೀತಿಯ ಪ್ರಕಟನೆ ನೋಡಿದ ನಂತರ ಒಮ್ಮಲೆ ಗಾಬರಿಯಾದೆ ಮತ್ತು ಬಸ್ಸು ಹತ್ತುವ ಮುನ್ನ ನಾನು ನನ್ನ ಜೇಬಿನಲ್ಲಿ ಸರಿಯಾದ ಚಿಲ್ಲರೆ ಇದೆಯಾ ಎಂಬುದನ್ನು ಪರಿಶೀಲಿಸಿ ನಂತರ ನಾನು ಬಸ್ಸನ್ನು ಏರಿದೆ. ಚಿಲ್ಲರೆ ವಾಪಸ್ಸು ಕೇಳಿದ್ದರೆ ಮೂರು ವರ್ಷಗಳವರೆಗೆ ಸೆರೆವಾಸ ಇದು ನಿಜವಾಗಲೂ ಕ್ರೂರ ಹೀಗೆ ಆದರೆ, ಮುಂದಿನ ದಿನಗಳಲ್ಲಿ ಜನರು ಖಾಸಗಿ ಬಸ್ಸುಗಳ ಮೊರೆ ಹೋಗಲಿದ್ದಾರೆʼ ಎಂದು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ 21ರ ಅಡಿಯಲ್ಲಿ ಸಂಸ್ಥೆಯು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರನ್ನು ಸಾರ್ವಜನಿಕ ಸೇವಕರೆಂದು ಗುರುತಿಸಲಾಗಿದೆ. ಆದ್ದರಿಂದ ಚಾಲಕ ಮತ್ತು ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ಇವರಿಬ್ಬರ ಮೇಲೆ ಹಲ್ಲೆ ಮಾಡುವುದು ಸೆಕ್ಷನ್ 332, 353ರ ಅಡಿಯಲ್ಲಿ ಮೂರು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ. ಸಾರಿಗೆಯ ಇಲಾಖೆಯ ಕ್ರಮವನ್ನ ಅನುಸರಿಸದಿದ್ದರೆ ಪ್ರಯಾಣಿಕರಿಗೆ ಸೆಕ್ಷನ್ 186ರ ಅಡಿಯಲ್ಲಿ ಮೂರು ತಿಂಗಳ ಸಜೆ ಎಂದು ಸಂಸ್ಥೆ ಹೊರಡಿಸಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸದ್ಯ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಈ ಕ್ರಮವನ್ನು ಜಾರಿಗೆ ತರಲು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಚಿಲ್ಲರೆಯ ಸಮಸ್ಯೆಯನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಬಸ್ಸುಗಳಲ್ಲಿ ನಗದು ರಹಿತ ವ್ಯವಹಾರವನ್ನ ನಡೆಸಲು ಚಿಂತಿಸಲಾಗುತ್ತಿದೆ. ಅಂದರೆ ಮುಂಬರುವ ದಿನಗಳಲ್ಲಿ ಎಲ್ಲಾ ಬಸ್ಸುಗಳಲ್ಲಿ ಕ್ಯೂಆರ್ ಕೋಡ್ಗಳ ಸ್ಕ್ಯಾನರ್ಗಳನ್ನು ಹಾಕಲಾಗುವುದು ಇದರ ಮೂಲಕ ಪ್ರಯಾಣಿಕರು ಹಣವನ್ನ ಪಾವತಿಸಿ ಟಿಕೆಟ್ಅನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಇದು ಕಾರ್ಯರೂಪಕ್ಕೆ ತರಲು ಸ್ವಲ್ಪ ಕಷ್ಟವಾಗಬಹುದು ಆದರೆ ಮುಂದಿನ ದಿನಗಳಲ್ಲಿ ಇದು ಜಾರಿಯಾಗುತ್ತದೆ ಮತ್ತು ಪ್ರಯಾಣಿಕರು ನಿರ್ವಾಹಕರಿಗೆ ಸರಿಯಾದ ಚಿಲ್ಲರೆ ನೀಡುವ ಮೂಲಕ ಅಗತ್ಯ ಅಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆದಷ್ಟು ಬೇಗ ಬಸ್ಸಿನಲ್ಲಿ ಅಂಟಿಸಿರುವ ಬಿತ್ತಿಪತ್ರಗಳನ್ನು ತೆಗೆದುಹಾಕಲಾಗುವುದು ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಹೇಳಿದ್ದಾರೆ.