ಗದಗ: ಸರ್ಕಾರದಿಂದ ಮಠಕ್ಕೆ ಬರಬೇಕಿದ್ದ 75 ಲಕ್ಷಕ್ಕೆ 25 ಲಕ್ಷ ಹಣದ ಬೇಡಿಕೆಯನ್ನು ಗದಗ ಹಾಗೂ ಶಿರಹಟ್ಟಿಯ ಲ್ಯಾಂಡ್ ಆರ್ಮಿಯವರು ಇಟ್ಟಿದ್ದಾರೆ ಎಂದು ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀ ಆರೋಪಿಸಿದರು.
ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿ,
ನಾನು ಪರ್ಸೆಂಟೇಜ್ ಕೊಟ್ಟಿಲ್ಲ. ಆದ್ರೆ ಪರ್ಸೆಂಟೇಜ್ ಕಟ್ ಮಾಡಿಕೊಂಡು ಕೊಡುತ್ತೇವೆ ಎನ್ನುವ ಹಠಕ್ಕೆ ಅಧಿಕಾರಿಗಳು ಬಿದ್ದಿದ್ದಾರೆ.
ಮಠಕ್ಕೆ ಬರಬೇಕಿದ್ದ 75 ಲಕ್ಷಕ್ಕೆ 75ಲಕ್ಷ ಕೊಟ್ಟಿಲ್ಲ. ಈ ಹಿಂದೆ ಸರ್ಕಾರದ ನಿಯಮವಿತ್ತು. ರಾಯಲ್ಟಿ ಮತ್ತು ಸೇಲ್ ಟ್ಯಾಕ್ಸ್ ಕಟ್ ಮಾಡುವುದು. ಈಗಲೂ ಈ ಕಾರಣಕ್ಕೆ ಹಣ ಕಟ್ ಮಾಡಿಕೊಂಡು ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ.
ಒಂದು ವೇಳೆ ಬ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುವುದಾದರೆ ನಮ್ಮ ಮಠಕ್ಕೆ ಬಂದ ಅನುದಾನ ಬೇಗನೆ ಬಿಡುಗಡೆ ಮಾಡಿಸಿ. ಬಂದ ಹಣ ಏಕೆ ಇಟ್ಟುಕೊಂಡು ಕೂತಿದ್ದೀರಿ ಎಂದು ಪ್ರಶ್ನಿಸಿದರು.
ಸಿಎಂ ಹಾಗೂ ಸಚಿವರುಗಳು ಬ್ರಷ್ಟಾಚಾರಕ್ಕೆ ದಾಖಲೆ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಡೆಯುವುದೇ ಬ್ರಷ್ಟಾಚಾರ ಇದಕ್ಕೆ ದಾಖಲೆ ಕೊಡುವುದಕ್ಕೆ ಆಗುತ್ತಾ? ನಿಮ್ಮ ಜನ್ಮಕ್ಕೆ ನಾಚಿಕೆ ಇದೆಯೇ? ಇದು ಒಳಗೆ ನಡೆಯುವ ವ್ಯವಹಾರ. ಹೊರಗೆ ನಡೆಯುವುದಲ್ಲ. ನಾವೇ ಬಾಯಿ ಬಿಟ್ಟು ಹೇಳುತ್ತಿದ್ದೇವೆ. ಲ್ಯಾಂಡ್ ಆರ್ಮಿಯರು 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತ. ಇದು ನಿಜವೋ, ಸುಳ್ಳೊ ಅಂತ ಗೊತ್ತಾಗಬೇಕಾದರೆ ಲ್ಯಾಂಡ್ ಆರ್ಮಿ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೋ, ಇಲ್ಲವೋ ಎನ್ನುವುದು ಗೊತ್ತಾಗಲಿದೆ ಎಂದರು.
ಸರ್ಕಾರ ಸಂಪೂರ್ಣ ಬ್ರಷ್ಟಾಚಾರದಲ್ಲಿ ಮುಳುಗಿದೆ. ಒಂದು ಭೂಮಿ ಪೂಜೆಗೂ ಪರ್ಸೆಂಟೇಜ್, ಎಮ್.ಬಿ ಬರೆಯಬೇಕಂದರೂ ಇಷ್ಟು ಹಣ ಅಂತ ನಿಗದಿ. ವರ್ಗಾವಣೆಗೆ 25-30 ಲಕ್ಷ ಬೇಡಿಕೆ. ಇದು ಯಾರಿಗೂ ಗೊತ್ತಿಲ್ಲ ಅಂತ ಅಂದುಕೊಂಡಿದ್ದೀರಾ? ನಾನಿನ್ನು ಲಂಚ ಕೊಟ್ಟಿಲ್ಲ. ಆದರೆ ನನಗೆ ಬರಬೇಕಾದ ಹಣ ಬಂದಿಲ್ಲ ಎಂದು ಹೇಳಿದ್ದೇನೆ. ಇದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದಂತಾಗಿದೆ. ತಮಗೆ ತಿಳಿದಂತೆ ಮಾತಾಡಿದರೆ ಕೇಳಿಸಿಕೊಳ್ಳಲು ರಾಜ್ಯದ ಜನ ಬುದ್ದಿಗೇಡಿಗಳಲ್ಲ. ರಾಜ್ಯದ ಜನ ಪ್ರಜ್ಞಾವಂತರಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ನಮ್ಮ ಹೇಳಿಕೆ ಕಾಂಗ್ರೆಸ್ ಪ್ರೇರಣೆ ಎನ್ನುವುದು ಎಷ್ಟು ಸರಿ? ಆವತ್ತು ಬಿ.ಎಸ್. ಯಡಿಯೂರಪ್ಪ ಅವರ ಪರ ನಮಗೆ ಯಾರು ಪ್ರೇರೇಪಣೆ ಮಾಡಿದರು. ಬಿಜೆಪಿಯವರೇನಾದ್ರು ಮಠಕ್ಕೆ ಬಂದು ಆಮಂತ್ರಣ ಕೊಟ್ಟಿದ್ದರಾ? ನಾವು ಯಾರ ಪರವಾಗಿ, ಆಮಿಷ, ಪ್ರೇರಣೆಯಿಂದ ಮಾತನಾಡುವ ಬುದ್ದಿಗೇಡಿ ಸ್ವಾಮಿಗಳಲ್ಲ. ನಾವು ವ್ಯಕ್ತಿಯ ಪರ ಇರುವವರಲ್ಲ. ಸತ್ಯದ ಪರ ಇರುವವರು ಎಂದು ಪ್ರತಿಕ್ರಿಯಿಸಿದರು.