ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಶುರುವಾಗಲಿದೆ. ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ವಿರೋಧ ಪಕ್ಷಗಳು ಕೆಂಡಕಾರಲು ಸಜ್ಜಾಗಿವೆ. ಹೀಗಾಗಿ ಸದ್ಯದ ದೇಶದ ಜ್ವಲಂತ ಸಮಸ್ಯೆಗಳಾದ ಕೊರೋನಾ ನಿರ್ವಹಣೆ, ರೈತರ ಪ್ರತಿಭಟನೆ, ಇಂಧನ ಬೆಲೆ ಏರಿಕೆ, ಲಸಿಕೆ ಕೊರತೆ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ವಿರೋಧ ಪಕ್ಷಗಳು ಮುಂದಾಗಿದೆ. ಹೀಗೆ ಹಲವು ಪ್ಲಾನ್ ಮಾಡಿಕೊಂಡಿರುವ ವಿರೋಧ ಪಕ್ಷದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿವೇಶನಕ್ಕೆ ಆರಂಭಕ್ಕೆ ಮುನ್ನ ಕಿವಿಮಾತು ಹೇಳಿದ್ದಾರೆ.
ಅಧಿವೇಶನ ಆರಂಭಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಇಡೀ ಪ್ರಪಂಚವೇ ಕೊರೋನಾಗೆ ತತ್ತರಿಸಿ ಹೋಗಿದೆ. ಹೀಗಾಗಿ ಇಂದು ನಾನು ವಿರೋಧ ಪಕ್ಷದ ನಾಯಕರಿಂದ ಒಂದು ಅರ್ಥಪೂರ್ಣ ಸಂಸತ್ ಅಧಿವೇಶನ ನಿರೀಕ್ಷಿಸುತ್ತಿದ್ದೇನೆ. ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಕೊರೋನಾ ಕುರಿತು ಅತಿ ತೀಕ್ಷ್ಣ ಪ್ರಶ್ನೆಗಳನ್ನು ಕೇಳಲಿ ಎಂದರು.
ವಿರೋಧ ಪಕ್ಷಗಳು ಕಠಿಣ ಪ್ರಶ್ನೆಗಳನ್ನು ಕೇಳಬೇಕು, ಸರ್ಕಾರಕ್ಕೆ ಉತ್ತರ ನೀಡಲು ಅವಕಾಶ ಮಾಡಿಕೊಡಬೇಕು. ಇದು ಆರೋಗ್ಯಕರ ಬೆಳವಣಿಗೆ. ಪ್ರಜಾಪ್ರಭುತ್ವ ಮತ್ತು ಜನರ ನಂಬಿಕೆಯನ್ನು ಬಲವರ್ಧನೆಗೊಳಿಸಲು ಇದು ಅತ್ಯವಶ್ಯಕ ಎಂದರು ಪ್ರಧಾನಿ ಮೋದಿ.
ಹೀಗೆ ಮುಂದುವರಿದ ಅವರು, ಕೊರೋನಾ ವಿರುದ್ಧ ಹೋರಾಡಲು ಕೇಂದ್ರದಿಂದ ವ್ಯಾಕ್ಸಿನ್ ಡ್ರೈವ್ ಕಾರ್ಯ ಮುಂದುವರಿಸುತ್ತೇವೆ. ವ್ಯಾಕ್ಸಿನ್ ಬಾಹುವಿನ ಮೇಲೆ ಹಾಕಲಾಗುತ್ತದೆ. ಯಾರು ವ್ಯಾಕ್ಸಿನ್ ತೆಗೆದುಕೊಳ್ಳುತ್ತಾರೋ ಅವರು ಬಾಹುಬಲಿ. ಕೊರೋನಾ ವಿರುದ್ಧದ ಹೋರಾಟದಲ್ಲಿ 40 ಕೋಟಿಗೂ ಹೆಚ್ಚು ಭಾರತೀಯರು ವ್ಯಾಕ್ಸಿನ್ ತೆಗೆದುಕೊಳ್ಳುವ ಮೂಲಕ ಬಾಹುಬಲಿಯಾಗಿದ್ದಾರೆ ಎಂದು ತಿಳಿಸಿದರು.
ಇಂದಿನಿಂದ ಶುರುವಾಗಲಿರುವ ಮುಂಗಾರು ಅಧಿವೇಶನ ಆಗಸ್ಟ್ 13ರಂದು ಮುಕ್ತಾಯವಾಗಲಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ನಡೆಸಲಾಗುತ್ತಿರುವ ಮೊದಲ ಮುಂಗಾರು ಅಧಿವೇಶನ ಇದಾಗಿದೆ. ಮುಂಗಾರು ಅಧಿವೇಶನದ 19 ಕಲಾಪಗಳಲ್ಲಿ ದೇಶದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಕಲಾಪಗಳು ನಡೆಯಲಿವೆ.
ಅಧಿವೇಶನಕ್ಕೂ ಮುನ್ನ ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ 33 ಪಕ್ಷಗಳ 40ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಕಲಾಪದಲ್ಲಿ ಯಾವ ವಿಷಯಗಳ ಕುರಿತು ಬಗ್ಗೆ ಚರ್ಚಿಸಬೇಕು ಎಂಬುದರ ಸಲಹೆ ನೀಡಿದರು.