ಭಾರತದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಏಷ್ಯನ್ ಗೇಮ್ಸ್ನ ಫೈನಲ್ ನಲ್ಲಿ ಗೆದ್ದು ಚಿನ್ನದ ಪದಕ ಗಳಿದಿದ್ದಾರೆ.
ಶನಿವಾರ ನಡೆದ ಡಬಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್ ವೊನ್ಹೊ ಜೋಡಿಯನ್ನು 21-18, 21-16 ಗೇಮ್ಗಳಿಂದ ಮಣಿಸಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾರೆ.
1982ರಲ್ಲಿ ಲೆರೋಯ್ ಫ್ರಾನ್ಸಿಸ್-ಪ್ರದೀಪ್ ಗಾಂಧಿ ಕಂಚು ಗೆದ್ದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಭಾರತಕ್ಕೆ ಈವರೆಗೆ ಪುರುಷರ ಡಬಲ್ಸ್ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಇದೀಗ ಚಿರಾಗ್-ಸಾತ್ವಿಕ್ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಭಾರತೀಯ ಜೋಡಿ ಯಾವುದೇ ಹಂತದಲ್ಲಿಯೂ ಎದುರಾಳಿಗಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ನೇರ ಗೇಮ್ಗಳಿಂದ ಗೆದ್ದು ಐತಿಹಾಸಿಕ ಚಿನ್ನ ತಮ್ಮದಾಗಿಸಿಕೊಂಡರು. 56 ನಿಮಿಷಕ್ಕೆ ಪಂದ್ಯ ಅಂತ್ಯ ಕಂಡಿತು.
ಬೆಳಗ್ಗೆ ನಡೆದ ಪುರುಷರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಅವರು ತಮ್ಮದೇ ದೇಶದ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಸೋಲು ಕಂಡ ಅಭಿಷೇಕ್ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ನಡೆದ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನ, ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.