
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಪರ ಇದೆ. ಜನಪರ ಬಜೆಟ್ ಮಂಡಿಸಿದ್ದಕ್ಕೆ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ ವಿಪಕ್ಷ ನಾಯಕ ಆರ್. ಅಶೋಕ್. 8ನೇ ಬಾರಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮನಮೋಹನ್ ಸಿಂಗ್ ಬಿಟ್ಟು ಹೋದ ಅವಧಿಗೆ ಹೋಲಿಸಿದರೆ, ಬಜೆಟ್ ಗಾತ್ರ 4-5 ಪಟ್ಟು ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ವಿತ್ತೀಯ ಕೊರತೆ 4.8 ಇತ್ತು ಈಗ 4.4 ಇದೆ. ಸಿಂಗ್ ಅವಧಿಗೆ ಹೋಲಿಸಿದರೆ ಕ್ಯಾಪಿಟಲ್ ಎಕ್ಸ್‌ಪೆಂಡೇಚರ್ 9 ಲಕ್ಷ ಕೋಟಿ ಹೆಚ್ಚಾಗಿದೆ. ಎಲ್ಲಿ ತೆರಿಗೆ ಸೋರಿಕೆಯಾಗ್ತಿತ್ತು ಅದನ್ನ ತಡೆದಿರೋದು ಇದಕ್ಕೆ ಕಾರಣ ಎಂದಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ 5 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಪಿಎಮ್ ಧನ್ ಯೋಜನೆ ಸಾಲ ಸೌಲಭ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಸ್ಟಾರ್ಟಪ್ ಕೈಗಾರಿಕೆಗಳಿಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಒದಗಿಸಲಾಗಿದೆ. ಮೊದಲ ಬಾರಿ ಎಸ್ಸಿ ಎಸ್ಟಿ ಮಹಿಳೆಯರು ಉದ್ಯಮ ಆರಂಭಿಸಲು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅದು ಅಲ್ಲದೆ 12 ಲಕ್ಷದ ತನಕ ತೆರಿಗೆ ವಿನಾಯಿತಿ ನೀಡಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಎಲ್ಲದರ ಮೇಲೆಯೂ ತೆರಿಗೆ ಹಾಕಿದ್ದಾರೆ. ಗಾಳಿ ಒಂದು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ. ಪಾಪಿ ಕಾಂಗ್ರೆಸ್‌ನವರು ತೆರಿಗೆಯನ್ನ ಹಾಕ್ತಿದ್ದಾರೆ. 60 ಪರ್ಸೆಂಟ್ ಕಮೀಷನ್ ಹೊಡೆಯಲು ಏನ್ ಬೇಕೋ ಅದನ್ನ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಘಟಕ ಆರಂಭ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಮೆಡಿಕಲ್ ಸೀಟ್ ಹೆಚ್ಚಿಸಿದ್ದಾರೆ. ಟಿವಿ, ಮೊಬೈಲ್, ಬಟ್ಟೆ, ಚರ್ಮದ ವಸ್ತು ಬೆಲೆ ಕಡಿಮೆ ಮಾಡಲಾಗಿದೆ. ಕಾಂಗ್ರೆಸ್ ಮಂತ್ರಿಗಳು ನಮಗೇನು ಕೊಟ್ಟಿಲ್ಲ ಎಂದಿದ್ದಾರೆ. ಇವರಿಗೆ ಕೊಟ್ಟರೆ ತಿಂದಾಕ್ತಾರೆ ಎಂದು ಜನರಿಗೆ ನೇರವಾಗಿ ಕೊಟ್ಟಿದ್ದಾರೆ. ಜಲ್ ಜೀವನ್ ಯೋಜನೆ ಕರ್ನಾಟಕಕ್ಕೆ ಬರುವುದು, ಜನರಿಗೆ ಬರುವಂತದ್ದು. ಒಂದು ಕೋಟಿ ಬಾಣಂತಿಯರಿಗೆ ಆರೋಗ್ಯ ಯೋಜನೆ ಕೊಡಲಾಗಿದೆ. ತೆರಿಗೆ ಹೊರೆಯಿಲ್ಲದ ಬಜೆಟ್ ಮಂಡಿಸಿದ್ದಾರೆ. ವಿಕಸಿತ ಭಾರತದ ಕಲ್ಪನೆ ಇರುವ ಭಾರತ ನಮ್ಮದು, ಕಾಮಾಲೆ ಕಣ್ಣಿನ ಕಾಂಗ್ರೆಸ್‌ಗೆ ಕಾಣೋದೆಲ್ಲ ಹಳದಿ ಎಂದಿದ್ದಾರೆ.
ಇಂದಿರಾ ಗಾಂಧಿ ಅವಧಿಯಲ್ಲಿ ಪಾಕಿಸ್ತಾನ ಭಾರತದ ಬಜೆಟ್ ಸರಿಸಮಾನ ಆಗಿತ್ತು. ಇದನ್ನು ನವಾಜ್ ಶರೀಫ್ ಅವರೇ ಹೇಳಿದ್ರು. ಈಗ ಭಾರತ ಹೇಗಿದೆ ಅನ್ನೋದನ್ನ ಅವರೇ ಹೇಳಿದ್ದಾರೆ. ಪಾಕಿಸ್ತಾನದ ಬಜೆಟ್ ಒಮ್ಮೆ ನೋಡಿ, ನರೇಂದ್ರ ಮೋದಿ ಬಜೆಟ್ ಒಮ್ಮೆ ನೋಡಿ. ಪ್ರಪಂಚದಲ್ಲಿ ನಾವು ಐದನೆ ಸ್ಥಾನದಲ್ಲಿದ್ದೇವೆ. ನೂರು ದೇಶಕ್ಕೆ ನಾವು ಕೋವಿಡ್ ಲಸಿಕೆ ಕೊಟ್ಟಿದ್ದೇವೆ. ಮೋದಿ ಅವರು ಬಂದ ಮೇಲೆ ಭಾರತ ಸಮೃದ್ಧವಾಗ್ತಿದೆ. ನಮ್ಮ ರಾಜ್ಯದಲ್ಲಿ ತೆರಿಗೆ ಹೊರೆ ಹಾಕ್ತಿದ್ದಾರೆ. ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲ ಎನ್ನುತ್ತಾರೆ. ಅದು ಪ್ರಪೋಸಲ್ ಹೋಗಿತ್ತು ಅಷ್ಟೇ ಅನುಮೋದನೆ ಯಾಗಿರಲಿಲ್ಲ. ಬೆಂಗಳೂರಿಗೆ 63 ಸಾವಿರ ಕೋಟಿ ಕೇಳಿದ್ದಾರೆ ಡಿ.ಕೆ ಶಿವಕುಮಾರ್. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದೆ ಅನ್ನೋದನ್ನು ಡಿ.ಕೆ ಶಿವಕುಮಾರ್ ಲೆಕ್ಕ ಕೊಡಿ ಎಂದಿದ್ದಾರೆ.

ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಸರ್ಕಾರ ಕೊಟ್ಟಿದ್ದಕ್ಕಿಂತ ಹೆಚ್ಚು ಹಣ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಚೆಂಬು ಕೊಟ್ಟಿದ್ದಾರೆ ಎನ್ನುವ ಸಿಎಂ ಹೇಳಿಕೆಗೆ ಟಾಂಗ್ ಕೊಟ್ಟಿದ್ದು, ಸಂತೇ ಭಾಷಣ ಬಿಟ್ಬಿಡಿ, ಮನಮೋಹನ್ ಸಿಂಗ್ ಅವಧಿಯಲ್ಲಿ ಎಷ್ಟು ಕೊಡ್ತಿದ್ರಿ, ಆಗಲೂ ನಾವು ತೆರಿಗೆ ಹೆಚ್ಚು ಕೊಡ್ಡಿದ್ದೆವು. ಆಗಲೂ ತೆರಿಗೆ ಕಟ್ಟುವುದರಲ್ಲಿ ನಾವು ಎರಡನೇ, ಮೂರನೇ ಸ್ಥಾನದಲ್ಲಿ ಇದ್ದೆವು. ಆಗ ತಕೊಂಡೋಗು ಸಿದ್ದರಾಮಯ್ಯ ಎಂದು ಹೇಳಿ ಕೊಟ್ಟಿದ್ದಾರ..? ಜನಸಂಖ್ಯೆ ಆಧಾರದ ಮೇಲೆ ಹೋಗಬೇಕೆನ್ನುವ ನಿಯಮ ಮಾಡಿದ್ದು ನೀವೇ. ಈಗ ನಿಯಮದ ಪ್ರಕಾರ ಹೋಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.






