ಶಿವಮೊಗ್ಗ: ಮಾ.27: ಮಾಜಿ ಸಿಎಂ ಬಂಗಾರಪ್ಪ ಅವರ ಮಗನಾಗಿ ಬಗರ್ ಹುಕುಂ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕಾಗಿದೆ, ನಾನು ಸತ್ತು ಅಪ್ಪನ ಬಳಿ ಹೋದರೆ ಏನೆಂದು ಉತ್ತರ ಕೊಡಲಿ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಹೇಳಿದರು.
ಸೊರಬ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಳಗುಪ್ಪದಲ್ಲಿ ಅರಣ್ಯ ಇಲಾಖೆಯಿಂದ ರೈತರ ಸಾಗುವಳಿ ಭೂಮಿ ತೆರವು ಮಾಡಿದ ಘಟನೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸ ಮಾತನಾಡಿದರು.
ನ್ಯಾಯಾಲಯದ ಆದೇಶದಲ್ಲಿ ಮರಗಳನ್ನು ತೆರವು ಮಾಡಿ ಎಂದು ತಿಳಿಸಿಲ್ಲ. ಆದರೆ, ದುರುದ್ಧೇಶ ಪೂರ್ವಕವಾಗಿ ತೆರವು ಮಾಡಲಾಗಿದೆ. ಶಾಸಕ ಎಸ್. ಕುಮಾರ್ ಬಂಗಾರಪ್ಪ ಜನತೆಗೆ ಸುಳ್ಳು ಹೇಳುತ್ತಾ, ಹಾದಿ ತಪ್ಪಿಸುವ ಯತ್ನದಲ್ಲಿ ತೊಡಗಿದ್ದಾರೆ. ರೈತರಿಗೆ ರಕ್ಷಣೆ ನೀಡುವುದು ನಮ್ಮ ಹೊಣೆಯಾಗಿದ್ದು. ಬಗರ್ ಹುಕುಂ ಸಾಗುವಳಿ ರೈತರ ಪರವಾದ ಎಲ್ಲರೀತಿಯ ಹೋರಾಟಕ್ಕೂ ಸಿದ್ಧ ಎಂದರು.
ಬಂಗಾರಪ್ಪನವರಿಗೆ ಅಧಿಕಾರ ನೀಡಿ ಕಾನೂನು ಮಾಡಿ ಎಂದು ಮುಖ್ಯಮಂತ್ರಿ ಯನ್ನ ಸೊರಬ ಜನ ಮಾಡಿದ್ರು. ಅವರು ಕಾನೂನು ಮಾಡಿ, ಬಿಟ್ಟು ಹೋದರು. ಆದರೆ ಇವತ್ತಿನ ಸೊರಬ ಸ್ಥಿತಿ ಚಿಂತಾಜನಕವಾಗಿದೆ. ಈಗ ಬಂಗಾರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ. ಇಲ್ಲಿ ಬಂದವರೆಲ್ಲರೂ ಕೂಡ ಬಗರ್ ಹುಕುಂ ಜಮೀನಿನಲ್ಲಿ ಬದುಕುತ್ತಿದ್ದೇವೆ. ಸಿಎಂ ಬಸವರಾಜ್ ಬೊಮ್ಮಾಯಿ ಶಿವಮೊಗ್ಗಕ್ಕೆ ಬಂದಾಗ ಅರಣ್ಯ ವಾಸಿಗಳ ಹಕ್ಕು ಪತ್ರ ಬಗ್ಗೆ ಭರವಸೆ ನೀಡಿದ್ದರು. ಈಗ ನಾವು ಅವರಿಗೆ ಧಿಕ್ಕಾರ ಹೇಳಬೇಕು ಎಂದು ಮಧು ಬಂಗಾರಪ್ಪ ಜನರೊಂದಿಗೆ ಧಿಕ್ಕಾರ ಕೂಗಿದರು.

ವಿಧಾನಸೌಧದಲ್ಲಿ ಕೂತ್ಕೊಂಡು ಕಾನೂನು ಮಾಡ್ತೀವಿ ಅಂತ ಹೇಳಿದ್ದರು. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಸಂಸತ್ತಿನಲ್ಲಿ ಹೋಗಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು. ನಾನು ಅಧಿಕಾರದಲ್ಲಿದ್ದಾಗ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ವಿತರಿಸಿದ್ದೆ. ನಾನು ಕೊಟ್ಟ ಹಕ್ಕನ್ನ ಈಗಿನ ಶಾಸಕ ಕುಮಾರ್ ಬಂಗಾರಪ್ಪ ತೆಗೆಯುತ್ತಾರೆ ಎಂದರೆ ನಾವು ಹೋರಾಡಬೇಕಾ ಅಥವಾ ಬೇಡವಾ..? ಈಗಿನ ಶಾಸಕರಿಗೂ ಧಿಕ್ಕಾರ ಕೂಗಲೇಬೇಕು. ಶಿವಮೊಗ್ಗದಲ್ಲಿ ಭಾಷಣ ಮಾಡಿ ಸಂಸದ ಬಿವೈ ರಾಘವೇಂದ್ರ ಭರವಸೆ ನೀಡಿದ್ದರು. ನಂತರ ಸುಳಿಯಲಿಲ್ಲ. ಆದರೆ ನಾನು ನನ್ನ ತಂದೆಗೆ ನೀಡಿದ ಮಾತನ್ನ ಪರಿಪಾಲನೆ ಮಾಡಿಯತ್ತಿರುತ್ತೇನೆ. ನನ್ನ ತಂದೆ ಕೂಡ ಹೇಳಿದ್ದರು ಅವರ ಮಾತಿಗೆ ಬದ್ಧನಾಗಿದ್ದೇನೆ. ಒತ್ತುವರಿ ತೆರವು ಮಾಡಲು ಬಂದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಅವರನ್ನು ವಾಪಸ್ ಕಳಿಸುತ್ತೇನೆ ಎಂದು ಶಾಸಕರು ಹೇಳಿದ್ದರು. ಆದರೆ ಏನೂ ಮಾಡಲಿಲ್ಲ..! ಸಿಎಂ ಜೊತೆ ಮಾತನಾಡುತ್ತೇನೆ, ಮೋದಿ ಜೊತೆ ಮಾತನಾಡುತ್ತೇನೆ ಅಂತ ಹೇಳುತ್ತಾರೆ. ಮೋದಿ ಎದುರು ನಿಲ್ಲೋದೇ ಇಲ್ಲ ಇವರು. ಈಗ ತೆರವಾದ ಜಾಗಕ್ಕೆ ಹೋಗಿ ನನ್ನ ವಿರುದ್ಧ ಕುಮಾರ್ ಬಂಗಾರಪ್ಪ ಆರೋಪ ಮಾಡಿದ್ದಾರೆ. ಮಧು ಬಂಗಾರಪ್ಪ ಕೇಸ್ ಹಾಕಿದ್ದರು ಎಂದು ಹೇಳುತ್ತಾರೆ. ಬಂಗಾರಪ್ಪ ಹೊಟ್ಟೆಯಲ್ಲಿ ಹುಟ್ಟಿ ಸುಳ್ಳು ಹೇಳುವುದು ಯಾವಾಗ ಕಲಿತೆ ಕುಮಾರ್ ಬಂಗಾರಪ್ಪ..? ಹಿಂದೆ ನನ್ನ ತಂದೆ ಎದುರು ಕೂಡ ಸುಳ್ಳು ಹೇಳುತ್ತಿದ್ದೆ.

ಈತ ಸೊರಬ ಜನರಿಗೂ ಸುಳ್ಳು ಹೇಳುತ್ತಾನೆ. ಇಂಥ ಕೆಟ್ಟ ಶಾಸಕನನ್ನು ಸೊರಬ ಕ್ಷೇತ್ರದಲ್ಲಿ ನಾವು ನೋಡಿಲ್ಲ. ಮತ ಕೇಳಲು ಊರು ಊರಿಗೆ ಈ ಸಲ ಬರ್ತಾರಲ್ಲ, ಅಲ್ಲಿ ಉತ್ತರ ಕೊಡಿ. ಈಗಾಗಲೇ ಜನ ಅವರಿಗೆ ಹೇಳುತ್ತಿದ್ದಾರೆ ಸುಮ್ಮನೆ ಬುರುಡೆ ಬಿಡಬೇಡಿ ಅಂತ. ಮುಂದೆ ಇನ್ನಷ್ಟು ವಿರೋಧ ಕಟ್ಟಿಕೊಳ್ಳಬೇಕು. ನಾನು ಒಂದು ದಿನ ಸಾಯ್ತಿನಿ ನನ್ನ ತಂದೆ ಬಳಿಗೆ ಹೋಗಿ ಏನು ಉತ್ತರ ನೀಡಲಿ..? ಎಲ್ಲರನ್ನೂ ನಾಶ ಮಾಡಿ ಬಂದೆ ಅಂತ ಹೇಳಲಾ..? ಎಂದು ಮಧು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ತಾಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.