ಅಫ್ಘಾನಿಸ್ತಾನವು ಮತ್ತೊಮ್ಮೆ ಅಂತರ್ಯುದ್ಧದ ಅಂಚಿಗೆ ಬಂದು ನಿಂತಿದೆ. ತಾಲಿಬಾನ್ ಹೋರಾಟಗಾರರು ಆ ದೇಶದಲ್ಲಿ ಸ್ಥಿರವಾಗಿ ನೆಲೆಯೂರುತ್ತಿದ್ದಾರೆ. ಸರ್ಕಾರದೊಂದಿಗೆ ಒಪ್ಪಂದದ ಯಾವುದೇ ಭರವಸೆ ಕಾಣುತ್ತಿಲ್ಲ. ದೇಶದಲ್ಲಿ ಈಗಾಗಲೇ ಬಿಗಡಾಯಿಸಿರುವ ಪರಿಸ್ಥಿತಿಯನ್ನು ಹೆಚ್ಚಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಗುರುವಾರ, ಅಮೆರಿಕನ್ ಸೈನ್ಯವು ಆಗಸ್ಟ್ 31 ರೊಳಗೆ ಅಫ್ಫಾನ್ ತೊರೆಯಲಿದೆ ಎಂದು ಘೋಷಿಸಿದ್ದಾರೆ. ಈ ನಿರ್ಧಾರವು ಅಮೆರಿಕವು ಇನ್ನು ಮುಂದೆ ಆ ದೇಶದ ವ್ಯವಹಾರಗಳಲ್ಲಿ ಭಾಗಿಯಾಗುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತದೆ .

“ನಾವು ರಾಷ್ಟ್ರ ನಿರ್ಮಾಣಕ್ಕಾಗಿ ಅಫ್ಘಾನಿಸ್ತಾನಕ್ಕೆ ಹೋಗಲಿಲ್ಲ. ತಮ್ಮ ದೇಶವನ್ನು ಹೇಗೆ ನಡೆಸಬೇಕೆಂದು ನಿರ್ಧರಿಸುವುದು ಅಫ್ಘಾನ್ ಜನರ ಹಕ್ಕು ಮತ್ತು ಜವಾಬ್ದಾರಿಯಾಗಿದೆ” ಎಂದು ಬಿಡೆನ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ಹೊಸ ಸನ್ನಿವೇಶವು ಭಾರತಕ್ಕೆ ಬಹಳ ಸೀಮಿತ ಆಯ್ಕೆಗಳನ್ನು ಮಾತ್ರ ಉಳಿಸಿದೆ. ವಿಶೇಷವಾಗಿ, ತಾಲಿಬಾನ್ ಮೇಲೆ ಭಾರತಕ್ಕೆ ಯಾವುದೇ ಹತೋಟಿ ಇಲ್ಲದಿರುವುದರಿಂದ ಇದು ದೇಶದ ಮೇಲೆ ವ್ಯತಿರಿಕ್ತ ಬೀರುವ ಪರಿಣಾಮ ಅಪಾರ. ಅಲ್ಲದೆ ಪಾಕಿಸ್ತಾನದೊಂದಿಗೆ ಆಳವಾದ ಸಂಪರ್ಕ ಹೊಂದಿರುವ ತಾಲಿಬಾನ್ ನೇತೃತ್ವದ ಯಾವುದೇ ಸರ್ಕಾರವು ಭಾರತದೊಂದಿಗಿನ ಸಂಬಂಧವನ್ನು ಅಸ್ಥಿರಗೊಳಿಸಲಿದೆ. ಒಂದು ಅಂದಾಜಿನ ಪ್ರಕಾರ ತಾಲಿಬಾನ್ ಈಗಾಗಲೇ ಶೇಕಡಾ 80 ರಷ್ಟು ಪ್ರದೇಶವನ್ನು ನಿಯಂತ್ರಿಸುತ್ತಿದೆ.

ತಾಲಿಬಾನ್ ಬಗ್ಗೆ ಎಚ್ಚರದಿಂದಿರುವ ಭಾರತವು ತಾಲಿಬಾನ್ ಜೊತೆ ಮಾತುಕತೆ ಎಂದು ವರದಿಯಾಗಿದೆ. ಆದರೆ ವಿದೇಶಾಂಗ ಸಚಿವಾಲಯವು ತಾಲಿಬಾನ್ ಜೊತೆಗಿನ ಯಾವುದೇ ಸಂಪರ್ಕವನ್ನು ಬಲವಾಗಿ ನಿರಾಕರಿಸಿದೆ. ಎಲ್ಲಾ ಊಹೆ, ವರದಿಗಳ ಹೊರತಾಗಿಯೂ, ತಾಲಿಬಾನ್ ನೇತೃತ್ವ ಹೊಂದಿರುವ ಯಾವುದೇ ಸರ್ಕಾರವು ಭಾರತದ ನೈಸರ್ಗಿಕ ಮಿತ್ರ ಅಥವಾ ನಂಬಲರ್ಹ ಮಿತ್ರರಾಗುವ ಸಾಧ್ಯತೆಯಿಲ್ಲ, ವಿಶೇಷವಾಗಿ ಪಾಕಿಸ್ತಾನದ ಜೊತೆಗಿನ ತಾಲಿಬಾನ್ ಸಂಪರ್ಕದಿಂದಾಗಿ.
ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿರುವ ವರದಿ ಪ್ರಕಟವಾಗುತ್ತಿದೆ. ತಾಲಿಬಾನ್ ಬ್ಯಾಡ್ಗಿಸ್ ಪ್ರಾಂತ್ಯದ ರಾಜಧಾನಿಯಾದ ಖಾಲಾ-ನೌ ಮೇಲೆ ದಾಳಿ ನಡೆಸಿ, ಪೊಲೀಸ್ ಪ್ರಧಾನ ಕಚೇರಿ ಮತ್ತು ಪತ್ತೇದಾರಿ ಏಜೆನ್ಸಿಗಳನ್ನು ವಶಪಡಿಸಿಕೊಂಡಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಅಫ್ಘಾನಿಸ್ತಾನದ ಪಾಲಿಗೆ ಜೂನ್ ರಕ್ತಪಾತದ ತಿಂಗಳಾಗಿ ಮಾರ್ಪಾಡಾಗಿದೆ. ‘TOLOnews’ ಪ್ರಕಾರ, ಈ ಅವಧಿಯಲ್ಲಿ ತಾಲಿಬಾನ್ ದಾಳಿಯಲ್ಲಿ 638 ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,060 ಇತರರು ಗಾಯಗೊಂಡಿದ್ದಾರೆ. ಅಫ್ಘಾನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಪಡೆಯು (ಎಎನ್‌ಎಸ್‌ಎಫ್) ಈ ತಿಂಗಳಲ್ಲಿ 6,000 ತಾಲಿಬಾನ್ ಹೋರಾಟಗಾರರನ್ನು ನಿರ್ಮೂಲನೆ ಮಾಡಿದೆ ಎಂದು ಟೋಲೋನ್ಯೂಸ್ ವರದಿ ಮಾಡಿದೆ.

ಅಫ್ಘಾನಿನ ಭದ್ರತಾ ಪಡೆಗಳು ಕಳೆದ ಒಂದು ವರ್ಷದಿಂದ ಹೋರಾಟದಲ್ಲಿ ನಿರತವಾಗಿದೆ. ಆದರೆ ಅವರು ಇನ್ನೂ ವಾಯು ಪಡೆಗಾಗಿ ಅಮೆರಿಕವನ್ನು ಅವಲಂಬಿಸಿದ್ದಾರೆ. ವಾಯುವ್ಯ ಬ್ಯಾಡ್ಗಿಸ್‌ನ ಖಾಲಾ-ಎ-ನೌ ಅನ್ನು ವಶಪಡಿಸಿಕೊಳ್ಳುವ ತಾಲಿಬಾನ್ ಪ್ರಯತ್ನವುಆ ವಿಮಾನ ನಿಲ್ದಾಣ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ವಿವರಿಸುತ್ತದೆ.
ಅಮೇರಿಕಾ ಇನ್ನು ಮುಂದೆ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಒತ್ತಿಹೇಳಿದ ಬಿಡನ್ ಅವರ ಭಾಷಣದೊಂದಿಗೆ, ANDSAF ಯುಎಸ್ ನಿಂದ ನಿರಂತರ ಬೆಂಬಲ ಪಡೆದುಕೊಳ್ಳುವುದು ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಉಳಿದಿದೆ. ಆದರೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಆತ್ಮವಿಶ್ವಾಸದಿಂದ “ನಾವು ಪರಿವರ್ತನೆಯ ಅತ್ಯಂತ ಸಂಕೀರ್ಣ ಹಂತಕ್ಕೆ ಸಾಕ್ಷಿಯಾಗುತ್ತಿದ್ದೇವೆ” ಎಂದು ಕಾಬೂಲ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. “ನ್ಯಾಯಸಮ್ಮತತೆ ನಮ್ಮದು, ದೇವರು ನಮ್ಮೊಂದಿಗಿದ್ದಾನೆ” ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾವು ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಫ್ಘಾನಿಸ್ತಾನದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಬಗ್ಗೆ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಮ್ಮ ಪ್ರತಿಕ್ರಿಯೆಯನ್ನು ಅದಕ್ಕೆ ತಕ್ಕಂತೆ ಮಂಡಿಸಲಾಗುವುದು’’ ಎಂದು ಎಂಇಎ ವಕ್ತಾರ ಅರಿಂದಂ ಬಾಗ್ಚಿ ಈ ವಾರದ ಆರಂಭದಲ್ಲಿ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಈ ಮಧ್ಯೆ, ಜೈಶಂಕರ್ ಬುಧವಾರ ಮಾಸ್ಕೋಗೆ ತೆರಳುವಾಗ ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ. ” ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಯಿತು ಮತ್ತು ಅಲ್ಲಿನ ಭದ್ರತೆಯು ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು” ಎಂದು ಬಾಗ್ಚಿ ಹೇಳಿದ್ದಾರೆ. “ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ಮತ್ತು ಚಬಹಾರ್ ಬಂದರು ಸೇರಿದಂತೆ ಈ ಪ್ರದೇಶದ ಜಂಟಿ ಸಂಪರ್ಕ ಉಪಕ್ರಮಗಳ ಬಗ್ಗೆ ಎರಡೂ ಕಡೆಯವರು ಚರ್ಚಿಸಿದ್ದಾರೆ”ಎಂದೂ ಅವರು ಹೇಳಿದ್ದಾರೆ.

ಇರಾನ್ ಸರ್ಕಾರವು ಅಫ್ಘಾನ್ ಸರ್ಕಾರದ ನಿಯೋಗದೊಂದಿಗೆ ತಾಲಿಬಾನ್ ನಾಯಕರ ಮಾತುಕತೆಯನ್ನು ನಿಯೋಜಿಸಿದ ಸಮಯದಲ್ಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ. ಇರಾನ್ ಗಡಿಗೆ ತಾಗಿಕೊಂಡಿರುವ ಅಫ್ಘಾನ್ ಪ್ರದೇಶಗಳನ್ನು ತಾಲಿಬಾನ್ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಟೆಹ್ರಾನ್ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಉತ್ಸುಕವಾಗಿದೆ. ಭಾರತವು ಪಾಕಿಸ್ತಾನದ ನೆರವಿಲ್ಲದೆ ಅಫ್ಘಾನಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದುವುದು ಅನಿವಾರ್ಯವಾಗಿದೆ.
ರಷ್ಯಾದಲ್ಲಿ ನಡೆಯಲಿರುವ ಜೈಶಂಕರ್ ಅವರ ಸಭೆಯು ಅಫ್ಘಾನಿಸ್ತಾನದೆಡೆಗೆ ಗಮನವನ್ನೂ ಹರಿಸಲಿದೆ. ಭಾರತದ ಉನ್ನತ ರಾಜತಾಂತ್ರಿಕರು ರಷ್ಯಾದ ರಾಜತಾಂತ್ರಿಕರೊಂದಿಗೆ ಮಾತುಕತೆಯಲ್ಲಿರುವುದರಿಂದ, ತಾಲಿಬಾನ್‌ನ ಒಂದು ನಿಯೋಗವೂ ಮಾಸ್ಕೋದಲ್ಲಿದೆ. ಸರ್ಕಾರ ಮತ್ತು ತಾಲಿಬಾನ್ ಅನ್ನು ಒಂದೇ ವೇದಿಕೆಗೆ ತರುವ ಮತ್ತೊಂದು ಪ್ರಯತ್ನ ಇದು.
ಆದರೂ, ಭಾರತವು ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಹಿಡಿತವನ್ನು ಬೆಂಬಲಿಸುತ್ತಿಲ್ಲ ಮತ್ತು ತನಗಿರುವ ಇತರ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸಿದೆ. ಸೆಪ್ಟೆಂಬರ್ 2020 ರಲ್ಲಿ ಹೊಸ ದೆಹಲಿಗೆ ತಾಲಿಬಾನ್ ವಿರುದ್ಧದ ಪ್ರತಿರೋಧದ ಪ್ರಮುಖ ಉಜ್ಬೆಕ್ ಸೇನಾಧಿಕಾರಿ ಅಬ್ದುಲ್ ರಶೀದ್ ದೋಸ್ತಮ್ ಅವರು ನೀಡಿರುವ ಭೇಟಿ ವಿಶೇಷವಾಗಿ ಮಹತ್ವದ್ದಾಗಿದೆ. ದೋಸ್ತಮ್ ಅವರ ದೆಹಲಿ ಭೇಟಿಯ ಸಮಯದಲ್ಲಿ ಅವರು ಜೈಶಂಕರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾ ಅವರನ್ನು ಭೇಟಿ ಮಾಡಿದ್ದರು. ಉತ್ತರ ಒಕ್ಕೂಟದ ಮಾಜಿ ಕಮಾಂಡರ್ ಇಸ್ಮಾಯಿಲ್ ಖಾನ್ ಏಪ್ರಿಲ್‌ನಲ್ಲಿ ದೆಹಲಿಯಲ್ಲಿದ್ದರು. ಇದು ಭಾರತವು ಹಳೆಯ ಪಶ್ತೂನ್ ಅಲ್ಲದ ಸ್ನೇಹಿತರನ್ನು ಮರುಶೋಧಿಸುತ್ತಿದೆ ಮತ್ತು ಆಯ್ಕೆಗಳನ್ನು ಮುಕ್ತವಾಗಿರಿಸುತ್ತಿದೆ ಎಂಬುವುದನ್ನು ಸೂಚಿಸುತ್ತದೆ.

ಭಾರತದ ಅತಿದೊಡ್ಡ ಅಸ್ತ್ರವೆಂದರೆ ಅಭಿವೃದ್ಧಿಗೆ ಅದರ ಬದ್ಧತೆ. ಆ ದೇಶದಲ್ಲಿ ಭಾರತೀಯ ಹೂಡಿಕೆ 3 ಬಿಲಿಯನ್ ಡಾಲರ್. ಹಣದ ದೃಷ್ಟಿಯಿಂದ ಇದು ಅಲ್ಪ ಮೊತ್ತವಾಗಿದೆ. ಆದರೆ ಭಾರತ ಅಲ್ಲಿ ಕೈಗೊಂಡ ಪ್ರತಿ ಯೋಜನೆಯು ಜನರ ಅಭಿಮಾನವನ್ನು ಗಳಿಸಿದೆ. “ನನ್ನ ಪ್ರಕಾರ, ಎಲ್ಲಾ 34 ಅಫಘಾನ್ ಪ್ರಾಂತ್ಯಗಳಲ್ಲಿ, ನಾವು ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಯೋಜನೆಗಳನ್ನು ಹೊಂದಿದ್ದೇವೆ” ಎಂದು ಜೈಶಂಕರ್ ರೈಸಿನಾ ಸಂವಾದದಲ್ಲಿ ಮಾತನಾಡುತ್ತಾ ಹೇಳಿದ್ದಾರೆ. “ಕಳೆದ 20 ವರ್ಷಗಳಲ್ಲಿ, ನಮ್ಮ ಕಾರ್ಯಗಳು ಮತ್ತು ಯೋಜನೆಗಳ ಮೂಲಕ ನಾವು ಅಫ್ಘಾನಿನೆಡೆಗೆ ನಮ್ಮ ನೈಜ ಭಾವನೆಗಳು ಯಾವುವು ಎಂಬುವುದನ್ನು ತೋರಿಸಿದ್ದೇವೆ” ಎಂದು ಹೇಳಿದ್ದಾರೆ.





