ತಮ್ಮದು ಭಿನ್ನವಾದ ಪಕ್ಷ, ಶಿಸ್ತಿನ ಪಕ್ಷ ಎಂದು ಪೋಸು ಕೊಡುವ ಬಿಜೆಪಿಯ ಆತ್ಮವಂಚನಾ ರಾಜಕೀಯಕ್ಕೆ, ದ್ವಿಮುಖ ನೀತಿಗೆ, ಕುತಂತ್ರ-ಕುತರ್ಕಕ್ಕೆ ಅದರ ಪಶ್ಚಿಮ ಬಂಗಾಳದ ರಾಜ್ಯ ಘಟಕ ಮಾಡಿರುವ ಟ್ವೀಟ್ ಒಂದು ಬಹಳ ಅತ್ಯುತ್ತಮ ಉದಾಹರಣೆ. ದೇಶದಲ್ಲಿ ಕರೋನಾ ಎರಡನೇ ಅಲೆಯ ವೇಳೆ ಪ್ರತಿದಿನ ಮೂರು ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಎರಡನೇ ಅಲೆಯ ತೀವ್ರತೆ ಮೇ ತಿಂಗಳ ಕೊನೆಯವರೆಗೂ ಇರಲಿದೆ. ಅಷ್ಟೊತ್ತಿಗೆ ಪ್ರತಿದಿನ ಆರೇಳು ಲಕ್ಷ ಜನ ಸೋಂಕು ಪೀಡಿತರಾಗುತ್ತಾರೆ. ಪ್ರತಿ ದಿನ ಐದಾರು ಸಾವಿರ ಜನ ಸಾಯುತ್ತಾರೆ ಎಂದು ವಿದೇಶಗಳ ಅಧ್ಯಯನಗಳು ಭವಿಷ್ಯ ನುಡಿದಿವೆ. ಆದರೆ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಯ ಸದ್ಯದ ಗುರಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಗೆಲ್ಲುವುದೇ ಆಗಿದೆ.
ಇರಲಿ, ಅದಕ್ಕಾಗಿ ಬಿಜೆಪಿ ಹೇಳಿರುವ ಸುಳ್ಳಾದರೂ ಎಂಥದೂ ನೋಡಿ: “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲರಿಗೂ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು (As soon as the BJP government comes to power in West Bengal, COVID-19 vaccine will be provided free of cost to everyone)” ಎಂದು.
ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತದ ಮತದಾನ ನಡೆಯುತ್ತಿದ್ದು ಏಳನೇ ಹಂತದ ಮತದಾನ ನಡೆಯುವ ಪ್ರದೇಶಗಳಲ್ಲಿ ಪ್ರಚಾರಕ್ಕೆ ಕೊನೆಯ ದಿನ ಬಿಜೆಪಿ ಇಂಥ ಟ್ವೀಟ್ ಮಾಡಿದೆ. ಬಿಜೆಪಿ ಈ ಹಂತದಲ್ಲಿ ಹೀಗೆ ಟ್ವೀಟ್ ಮಾಡಲು ಅಥವಾ ಸುಳ್ಳು ಭರವಸೆ ನೀಡಲು ಎರಡು ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಒಂದು, ಕಡೆಯ ಎರಡೂ ಹಂತದ ಮತದಾನ ನಡೆಯುವ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೂಡ ಪ್ರಬಲವಾಗಿವೆ. ಇದರಿಂದಾಗಿ ಇಲ್ಲಿ ಬಿಜೆಪಿ ಅತ್ಯಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ಅಂದಾಜಿದೆ. ಆದ್ದರಿಂದ ಇಂಥ ಭರವಸೆ ನೀಡಿಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎರಡನೇಯದಾಗಿ ಬಿಜೆಪಿ ತನ್ನ ಪ್ರಚಾರಕ್ಕೆ ನಂಬಿಕೊಂಡಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು. ಅದರಲ್ಲೂ ಕಡೆ ದಿನಗಳಲ್ಲಿ ಅಬ್ಬರದ ಪ್ರಚಾರ ಮಾಡಿ ತಮ್ಮ ಪರವಾದ ಅಲೆ ಎಬ್ಬಿಸಲು. ಆದರೀಗ ಕೊರೊನಾ ತೀವ್ರವಾಗಿ ಹೆಚ್ಚಾಗುತ್ತಿದ್ದರೂ ಮೋದಿ-ಶಾ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಸಭೆ-ಸಮಾವೇಶ ಮಾಡುತ್ತಿರುವ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಅವರು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. (ಮೋದಿ-ಶಾ ತಮ್ಮ ಪಶ್ಚಿಮ ಬಂಗಾಳ ಪ್ರವಾಸವನ್ನು ಮೊಟಕುಗೊಳಿಸಿದ ಮೇಲೆ ಚುನಾವಣಾ ಆಯೋಗ ಚುನಾವಣಾ ಪ್ರಚಾರ ಸಭೆ-ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಇರಬಾರದು ಎಂದು ಆದೇಶ ಮಾಡಿದೆ. ಚುನಾವಣಾ ಆಯೋಗ ಮೊದಲೇ ಈ ಅದೇಶ ಹೊರಡಿಸಬಹುದಿತ್ತು ಎಂದು ಹೇಳಲಾಗುತ್ತಿದೆ). ಇದು ಕೂಡ ಬಿಜೆಪಿಯ ಸುಳ್ಳು ಭರವಸೆಯನ್ನೊಳಗೊಂಡ ಟ್ಬೀಟಿಗೆ ಕಾರಣ ಎನ್ನಲಾಗುತ್ತಿದೆ.
ಇನ್ನು ಬಿಜೆಪಿಗೆ ತಾನು ಅಧಿಕಾರಕ್ಕೆ ಬಂದ ಮೇಲೆ ಎಲ್ಲರಿಗೂ ಉಚಿತವಾಗಿ ಕರೊನಾ ಲಸಿಕೆ ನೀಡಬೇಕೆಂಬ ಕಳಕಳಿ ಅಥವಾ ಇಚ್ಛಾಶಕ್ತಿ ಇದ್ದಿದ್ದರೆ ಬಿಹಾರದಲ್ಲಿ ಏಕೆ ಕೊಟ್ಟಿಲ್ಲ? ಬಿಹಾರ ವಿಧಾನಸಭಾ ಚುನಾವಣೆಗೂ ಮೊದಲು ಆ ರಾಜ್ಯದಲ್ಲೂ ಬಿಜೆಪಿ ‘ತಾನು ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತವಾಗಿ ಕರೋನಾ ಲಸಿಕೆ ಕೊಡುತ್ತೇನೆ’ ಎಂದು ಭರವಸೆ ನೀಡಿತ್ತು. ಅಷ್ಟೇ ಏಕೆ ಬಿಜೆಪಿ ಈಗ ಇಡೀ ದೇಶವನ್ನೇ ಆಳುತ್ತಿದೆ. ಇಡೀ ದೇಶಕ್ಕೆ ಉಚಿತವಾಗಿ ಕರೋನಾ ಲಸಿಕೆ ಕೊಟ್ಟು ತನ್ನ ಕಾಳಜಿಯನ್ನು ಸಾಬೀತುಪಡಿಸಬಹುದಿತ್ತು. ಆದರೆ ರಾಜ್ಯ ಸರ್ಕಾರಗಳು ಶೇಕಡಾ 50ರಷ್ಟು ಕರೋನಾ ಲಸಿಕೆಗಳನ್ನು ಉತ್ಪಾದಕರಿಂದ ಖರೀದಿಸಬಹುದು ಎಂದು ಹೇಳುವ ಮೂಲಕ ಒಂದೇ ಏಟಿಗೆ ಶೇಕಡಾ 50ರಷ್ಟು ಜವಾಬ್ದಾರಿಯಿಂದ ನುಣುಚಿಕೊಂಡಿದೆ.
ಕರೋನಾ ಲಸಿಕೆಗಳನ್ನು ರಾಷ್ಟ್ರೀಯ ಸ್ವತ್ತು ಎಂಬುದಾಗಿ ಘೋಷಿಸಿ, ಅದನ್ನು ಉಚಿತವಾಗಿ ನೀಡಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ಮೋದಿ ಉತ್ತರಿಸಿಲ್ಲ. ಇದಲ್ಲದೆ ಒಂದು ರಾಷ್ಟ್ರ, ಒಂದು ಭಾವುಟ, ಒಂದು ಭಾಷೆ, ಒಂದು ಚುನಾವಣೆ, ಒಂದು ತೆರಿಗೆ, ಒಂದು ಧರ್ಮ ಎಂದು ಹಲವು ‘ಒಂದು’ಗಳ ಬಗ್ಗೆ ಮಾತನಾಡುವ ಬಿಜೆಪಿ ಕರೋನಾ ಲಸಿಕೆಗೆ ಮಾತ್ರ ದೇಶಾದ್ಯಂತ ಒಂದೇ ದರ ನಿಗದಿ ಮಾಡುತ್ತಿಲ್ಲವೇಕೆ? ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ಪ್ರಶ್ನಿಸಿದ್ದಾರೆ. ಇವುಗಳ ಬಗ್ಗೆ ತುಟಿ ಬಿಚ್ಚದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ‘ತಾನು ಅಧಿಕಾರಕ್ಕೆ ಬಂದರೆ ಉಚಿತವಾಗಿ ಕರೋನಾ ಲಸಿಕೆ ನೀಡುತ್ತೇನೆ’ ಎನ್ನುತ್ತಿದೆ.
ಇನ್ನೊಂದೆಡೆ ಇದೇ ಸಂದರ್ಭದಲ್ಲಿ ನಡೆದ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಬಿಜೆಪಿ ಕರೋನಾ ಲಸಿಕೆಗಳನ್ನು ಉಚಿತವಾಗಿ ನೀಡುವುದರ ಬಗ್ಗೆ ಇರಲಿ, ಕರೋನಾ ನಿರ್ವಹಣೆ, ನಿಯಂತ್ರಣದ ಬಗ್ಗೆ ಸೊಲ್ಲೆತ್ತಿರಲಿಲ್ಲ. ಇದರಿಂದ ‘ಒಂದು ರಾಷ್ಟ್ರ ಎಂದು ಹೇಳುವ ಬಿಜೆಪಿಯಿಂದ ಪಶ್ಚಿಮ ಬಂಗಾಳಕ್ಕೆ ಒಂದು ನೀತಿ, ಬೇರೆ ರಾಜ್ಯಗಳಿಗೆ ಮತ್ತೊಂದು ನೀತಿಯೇ?’ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಒಟ್ಟಿನಲ್ಲಿ ’ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲರಿಗೂ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು’ ಎಂದು ಹೇಳುವ ಮೂಲಕ ಬಿಜೆಪಿ ತನ್ನ ಆತ್ಮವಂಚನಾ ರಾಜಕೀಯ, ದ್ವಿಮುಖ ನೀತಿ ಮತ್ತು ಕುತಂತ್ರ-ಕುತರ್ಕಗಳನ್ನು ಪ್ರದರ್ಶಿಸಿದೆ.