ಸಾಂಕ್ರಾಮಿಕ ರೋಗವು ಪ್ರಾರಂಭವಾಗಿ ಎರಡು ವರ್ಷ ಕಳೆದಿದೆ. ಅದೀಗ ತನ್ನ ಪ್ರಭಾವವನ್ನು ನಿಧಾನವಾಗಿ ಕಡಿಮೆಗೊಳಿಸಲು ಪ್ರಾರಂಭಿಸಿದೆಯಾದರೂ, ಅದರ ವಿನಾಶಕಾರಿ ಪರಿಣಾಮಗಳು ಬಡ ಜನರನ್ನು ಬಾಧಿಸುತ್ತಲೇ ಇದೆ. ಬೆಂಗಳೂರಿನ ಜಾಲಿ ಮೊಹಲ್ಲಾ ಕೊಳೆಗೇರಿಯಲ್ಲಿ ವಾಸಿಸುವ ಗಾಯತ್ರಿ ಎಂಬ ಗೃಹಿಣಿಯದ್ದು ಇದೇ ಕತೆ. ಗಾಯತ್ರಿಗೆ ಮೂವರು ಮಕ್ಕಳಿದ್ದು, ಅವರನ್ನು ಶಾಲೆಗೆ ಕಳುಹಿಸುವುದು ಗಾಯತ್ರಿಯ ದೊಡ್ಡ ಆಸೆಯಾಗಿತ್ತು. “ನನಗೆ ದೊರಕದ ಶಿಕ್ಷಣ, ನನ್ನ ಮಕ್ಕಳಿಗಾದರೂ ಸಿಗಬೇಕು ಎಂಬುದು ನನ್ನ ಮಹದಾಸೆ” ಎಂದು ಅವರು ಹೇಳಿದ್ದಾರೆ. ಅವರ ಮಕ್ಕಳನ್ನು ಸಮೀಪದ ಖಾಸಗಿ ಶಾಲೆಗೆ ದಾಖಲಿಸಲಾಗಿತ್ತು. ಲಾಕ್‌ಡೌನ್‌ಗೆ ಮೊದಲು, ಗಾಯತ್ರಿ ಮತ್ತು ಅವರ ಪತಿ ನಿಯಮಿತವಾಗಿ ಕೆಲಸ ಮಾಡುತ್ತಿದ್ದಾಗ, ಸಮಯಕ್ಕೆ ಸರಿಯಾಗಿ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತಿತ್ತು. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಹೇರಿದ ಸತತ ಲಾಕ್‌ಡೌನ್‌ಗಳು, ದಂಪತಿಯ ಎರಡೂ ಆದಾಯವನ್ನೂ ಬತ್ತುವಂತೆ ಮಾಡಿದೆ, ಮತ್ತು ಅದರ ಬೆಲೆ ಶಾಲೆಗೆ ಹೋಗಬೇಕಾದ ಮಕ್ಕಳು ತೆರುತ್ತಿದ್ದಾರೆ.
5 ನೇ ತರಗತಿಯಲ್ಲಿ ಓದುತ್ತಿರುವ ಗಾಯತ್ರಿ ಅವರ ಮಗನೊಬ್ಬನಿಗೆ ವರ್ಷಾಂತ್ಯದ ಪರೀಕ್ಷೆಯನ್ನು ಬರೆಯಲು ಇತ್ತೀಚೆಗೆ ಅನುಮತಿಸಲಿಲ್ಲ, ಅವನ ಪೋಷಕರು ವರ್ಷದ ಶಾಲಾ ಶುಲ್ಕದ ಒಂದು ಭಾಗವನ್ನು ಮಾತ್ರ ಪಾವತಿಸಿದ್ದರಿಂದ ಪೂರ್ಣ ಶುಲ್ಕವನ್ನು ಪಾವತಿಸದೆ ಪರೀಕ್ಷೆಗೆ ಅನುವು ಮಾಡಿಕೊಟ್ಟಿರಲಿಲ್ಲ. “ನಾನು ಅವನನ್ನು ಶಾಲೆಗೆ ಬಿಟ್ಟು ಬಂದ ಕೆಲವೇ ನಿಮಿಷಗಳಲ್ಲಿ, ಶಿಕ್ಷಕರು ಅವನನ್ನು ಪರೀಕ್ಷಾ ಹಾಲ್‌ನೊಳಗೆ ಬಿಡುತ್ತಿಲ್ಲ ಎಂದು ಅವನು ನನಗೆ ಕರೆ ಮಾಡಿ ತಿಳಿಸಿದ ಎಂದು ಗಾಯತ್ರಿ ಹೇಳಿದ್ದಾರೆ.
ಕುಟುಂಬದ ಸಂಕಷ್ಟದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲು ಗಾಯತ್ರಿ ಶಾಲೆ ಆಡಳಿತಕ್ಕೆ ಮನವಿ ಮಾಡಿದರೂ, ಪೂರ್ಣ ಮೊತ್ತವನ್ನು ಪಾವತಿಸಿದ ನಂತರವೇ ಮಗುವಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಆಡಳಿತವು ಧೃಡವಾಗಿತ್ತು. “ನಮಗೆ ಆಯ್ಕೆ ಇರಲಿಲ್ಲ, ಉಳಿದ ಮೊತ್ತವನ್ನು ನಾವು ನಮ್ಮ ನೆರೆಹೊರೆಯವರಿಂದ ಸಾಲ ಪಡೆಯಬೇಕಾಗಿತ್ತು. ಈ ಬಾರಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ಮುಂದಿನ ವರ್ಷ ಇದು ಹೆಚ್ಚು ಕಷ್ಟಕರವಾಗಿರುತ್ತದೆ, ”ಎಂದು ಅವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದಿಂದ ಉಂಟಾಗುವ ತಂತ್ರಜ್ಞಾನದ ವಿಭಜನೆ ಮತ್ತು ಆರ್ಥಿಕ ಒತ್ತಡವು ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮಕ್ಕಳನ್ನು ತೀವ್ರವಾಗಿ ಬಾಧಿಸುತ್ತಿದೆ, ಅವರ ಶಿಕ್ಷಣವನ್ನು ಮುಂದುವರಿಸುವುದನ್ನು ನಿಲ್ಲಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಅವರ ಹೆತ್ತವರಿಗೆ ಜೀವನೋಪಾಯಕ್ಕಾಗಿ ಸಹಾಯ ಮಾಡಲು ಶಾಲೆಯನ್ನು ಬಿಡಲು ಕಾರಣವಾಗುತ್ತದೆ ಎಂಬುದು ಕೂಡಾ ವಾಸ್ತವ.
ಆಗಸ್ಟ್ 2021 ರಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಆ ಸಮಯದಲ್ಲಿ ದೇಶಾದ್ಯಂತ 15 ಕೋಟಿಗೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು ಮತ್ತು ರಾಷ್ಟ್ರೀಯ ಡ್ರಾಪ್ಔಟ್ ದರವು ಉನ್ನತ ಪ್ರಾಥಮಿಕ ಶ್ರೇಣಿಗಳಲ್ಲಿ (6 ರಿಂದ 8 ನೇ ತರಗತಿಗಳು) 17% ರಷ್ಟಿದೆ ಎಂದು ಹೇಳಿದರು. ಇದಲ್ಲದೆ, UDISE+ 2019-20ರ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ ಪ್ರಕಾರ, 30% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಾಧ್ಯಮಿಕ (9-10 ತರಗತಿಗಳು) ಹಂತದಿಂದ ಹಿರಿಯ ಮಾಧ್ಯಮಿಕ (11-12 ತರಗತಿಗಳು) ಹಂತಕ್ಕೆ ಶಿಕ್ಷಣ ಮುಂದುವರಿಸಿಲ್ಲ.
ಎನ್‌ಜಿಒಗಳು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಮೂರು ವಾರ್ಡ್‌ಗಳಲ್ಲಿ, 2020 ಮತ್ತು 2021 ರಲ್ಲಿ ಪೋಷಕರು ಶುಲ್ಕವನ್ನು ಪಾವತಿಸಲು ಸಾಧ್ಯವಿಲ್ಲದ ಕಾರಣ 384 ಮಕ್ಕಳಲ್ಲಿ ಕನಿಷ್ಠ 142 ಮಕ್ಕಳು ಶಾಲೆಯನ್ನು ತೊರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೆಂಗಳೂರಿನ ಜಾಲಿ ಮೊಹಲ್ಲಾದ ಮತ್ತೋರ್ವ ನಿವಾಸಿ ರಾಜೇಶ್ವರಿ ಅವರದ್ದೂ ಗಾಯತ್ರಿ ಅವರಂತಹದ್ದೇ ಅನುಭವವಾಗಿದೆ. ಸಣ್ಣ ಕೂಲಿ ಮಾಡುವ ರಾಜೇಶ್ವರಿ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡುವ ಪತಿ ವೇಲು ಅವರಿಗೆ ಲಾಕ್‌ಡೌನ್ ಘೋಷಿಸಿದ ನಂತರ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. “ನಮಗೆ ಆಹಾರದ ವ್ಯವಸ್ಥೆ ಮಾಡಲು ಕಷ್ಟವಾಗುತ್ತಿದೆ. ಶಾಲೆಗಳು ಪುನರಾರಂಭವಾದಾಗ, ನಾವು ನಮ್ಮ ಮಕ್ಕಳನ್ನು ಕಳುಹಿಸಿದ್ದೇವೆ. ಆದರೆ ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಶುಲ್ಕವನ್ನು ಪಾವತಿಸುವಂತೆ ಶಾಲಾ ಪ್ರಾಧಿಕಾರ ತಿಳಿಸಿದೆ. ನಾವು ಒಂದು ತಿಂಗಳ ಶುಲ್ಕವನ್ನು ಪಾವತಿಸಬಹುದು ಎಂದು ತಿಳಿಸಿ, ಮಕ್ಕಳನ್ನು ತರಗತಿ ಮುಂದುವರಿಸಲು ಅವಕಾಶ ನೀಡುವಂತೆ ಕೇಳಿದೆವು. ಆದರೆ, ಶಾಲೆಯು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅವರಿಗೆ ಹೇಳಿದೆ, ಆದರೆ ಮಕ್ಕಳಿಗೆ ಸ್ಮಾರ್ಟ್‌ಫೋನ್ ಖರೀದಿಸಲು ನಮಗೆ ಸಾಧ್ಯವಾಗಲಿಲ್ಲ. ಶಾಲೆಯು ಇದನ್ನು ಒಪ್ಪಿಕೊಳ್ಳದ ಕಾರಣ, ನಮ್ಮ ಮಕ್ಕಳು ಮತ್ತೆ ಮನೆಯಲ್ಲಿ ಕುಳಿತುಕೊಳ್ಳಬೇಕಾಯಿತು, ”ಎಂದು ಅವರು ಹೇಳಿದ್ದಾರೆ.
ಈ ಮಕ್ಕಳು ಎರಡು ವರ್ಷಗಳಿಂದ ಮನೆಯಲ್ಲಿದ್ದಾರೆ. ಸರ್ಕಾರವು ಆನ್‌ಲೈನ್ ತರಗತಿಗಳಂತಹ ಯೋಜನೆಗಳನ್ನು ಪರಿಚಯಿಸಿದೆ, ಆದರೆ ಮಗು ಅಥವಾ ಅವರ ಪೋಷಕರು ಮನೆಯಲ್ಲಿ ಅಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವೇ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ವಿದ್ಯಾಗಮ ಯೋಜನೆಯನ್ನು ನಂತರ ಪರಿಚಯಿಸಲಾಯಿತು, ಆದರೆ, ವಿದ್ಯಾಗಮ ಯೋಜನೆಗೆ ತನ್ನದೇ ಆದ ಮಿತಿಗಳಿವೆ ಎಂದು ActionAid ಪ್ರೋಗ್ರಾಮ್ ಮೆನೇಜರ್ ರೇಶ್ಮಾ ಹೇಳುತ್ತಾರೆ.
ನಗರ ಪ್ರದೇಶಗಳಲ್ಲಿ ತರಗತಿಗಳು ಸಾಮಾನ್ಯವಾಗಿ ಬಿಡುವಿಲ್ಲದ ಸ್ಥಳಗಳಲ್ಲಿ ನಡೆಯುತ್ತವೆ, ಅಲ್ಲಿ ಎಲ್ಲಾ ಶಬ್ದ ಮತ್ತು ಚಲನೆಯು ವಿದ್ಯಾರ್ಥಿಗಳನ್ನು ಸುಲಭವಾಗಿ ವಿಚಲಿತಗೊಳಿಸುತ್ತದೆ. ಗಾಯತ್ರಿ ಮತ್ತು ರಾಜೇಶ್ವರಿ ಅವರಂತಹ ಅನೇಕ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲವನ್ನು ತೆಗೆದುಕೊಳ್ಳುವಂತೆ ನಿರ್ಬಂಧಪಡಿಸಿವೆ. ಇದಲ್ಲದೆ, ಲಾಕ್‌ಡೌನ್‌ಗಳ ಸಮಯದಲ್ಲಿ ಅನೇಕ ಮಕ್ಕಳು ಆನ್‌ಲೈನ್ ತರಗತಿಗಳನ್ನು ಪ್ರವೇಶಿಸಲು ಸಹ ಸಾಧ್ಯವಾಗಲಿಲ್ಲ ಆದರೂ ಪೋಷಕರು ಪೂರ್ಣ ಶುಲ್ಕವನ್ನು ಪಾವತಿಸಬೇಕಾಗಿತ್ತು ಎಂದು ರೇಷ್ಮಾ ಹೇಳುತ್ತಾರೆ.
ಶಿಕ್ಷಣ ವಂಚಿತ ಮಕ್ಕಳ ಮಾಹಿತಿ ಕಲೆ ಹಾಕುವ ಹಾಗೂ ಈ ಸಮಸ್ಯೆಗಳ ಕಡೆಗೆ ಗಮನ ಸೆಳೆಯುವ ಸಲುವಾಗಿ public hearing ಎಂಬ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜೇಶ್ವರಿ, ಗಾಯತ್ರಿ ಸೇರಿದಂತೆ ಶಿಕ್ಷಣ ವಂಚಿತ ಮಕ್ಕಳ ಪೋಷಕರು ತಮ್ಮ ಅಹವಾಲುಗಳನ್ನು ಬಹಿರಂಗಪಡಿಸಿದ್ದರು.