ಹಾವೇರಿ ಜಿಲ್ಲೆಗೂ ವಕ್ಪ್ ಆಸ್ತಿ ವಿವಾದದ ಬಿಸಿ ತಟ್ಟಿದೆ. ಎರಡು ಕೋಮಿನ ನಡುವೆ ಮಾರಾಮಾರಿ ನಡೆದಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ವಿಚಾರಕ್ಕೆ ಗಲಾಟೆ ನಡೆದಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಕ್ಫ್ ಆಸ್ತಿಗಳನ್ನು ವಕ್ಪ್ ಸಂಸ್ಥೆ ಹೆಸರಿನಲ್ಲಿ ಖಾತೆ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ವಕ್ಫ್ ಆಸ್ತಿಗೆ ಸೇರಿದ ಖಾತೆಗಳಲ್ಲಿ ವಕ್ಪ್ ಆಸ್ತಿ ಎಂದು ಲಾಕ್ ಮಾಡಲು ಪಿಡಿಒಗಳಿಗೆ ಆದೇಶ ಬಂದ ಹಿನ್ನೆಲೆ ಗಲಾಟೆ ನಡೆದಿದೆ. ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಪೊಲೀಸ್ರು ಬಂದೋಬಸ್ತ್ ಮಾಡಿದ್ದಾರೆ.
ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಕಳೆದ ಸೆಪ್ಟೆಂಬರ್ 3 ರಂದು ನಡೆದ ಸಭೆಯಲ್ಲಿ ಸೂಚನೆ ನೀಡಿದ ಬಳಿಕ ಸೆಪ್ಟೆಂಬರ್ 27 ರಂದೇ ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ಆದೇಶ ಮಾಡಿದ್ದರು. ಸರ್ಕಾರದ ನಡೆಯಿಂದ ಆಕ್ರೋಶಗೊಂಡು ಗಲಾಟೆ ಮಾಡಲಾಗಿದೆ. ಮನೆಯ ಖಾತಾಗಳಲ್ಲಿ ವಕ್ಫ್ ಆಸ್ತಿ ಅಂತ ದಾಖಲಿಸಿ ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಆತಂಕ ಶುರುವಾದ ಬಳಿಕ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಉದ್ರಿಕ್ತ ಗುಂಪು ಮುಸ್ಲಿಂ ಸಮುದಾಯದ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದೆ. ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೆ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಒಡೆದು ಹಾಕಿದ್ದಾರೆ.
ಕಡಕೋಳ ಗ್ರಾಮಕ್ಕೆ ರಾತ್ರೋ ರಾತ್ರಿ ದೌಡಾಯಿಸಿ ಬಂದ ಹಾವೇರಿ ಡಿಸಿ ವಿಜಯ್ ಮಹಾಂತೇಶ್, ಎಸ್‌ಪಿ ಅಂಶು ಕುಮಾರ್ ಅಹಿತಕರ ಘಟನೆಗಳು ಆಗದಂತೆ ಗ್ರಾಮಸ್ಥರನ್ನು ಮನವೊಲಿಕೆ ಮಾಡಲು ಯತ್ನಿಸಿದ್ದಾರೆ. ಗಲಾಟೆಗೆ ಕಾರಣರಾದವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಅಂಜುಮನ್ ಚೇರ್ಮನ್ ರಫೀಕ್ ಸೇರಿದಂತೆ ಹತ್ತಕ್ಕೂ ಅಧಿಕ ಮುಸ್ಲಿಮರಿಗೆ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಹಾವೇರಿ, ಸವಣೂರು ಹಾಗೂ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಒಟ್ಟು 32 ಜನರ ಬಂಧನ ಮಾಡಿದ್ದು, ಮೂವರು ಬಾಲಕರು ಸೇರಿದ್ದಾರೆ. ನಾಲ್ಕು KSRP ವ್ಯಾನ್, 500 ಜನ ಪೋಲಿಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಕಲ್ಲು ತೂರಾಟದಲ್ಲಿ ಬಂಧನಕ್ಕೊಳಗಾಗಿದ್ದ 33 ಜನರನ್ನು ಬಿಡುಗಡೆ ಮಾಡಲಾಗಿದೆ. ಹಿಂದೂ ಮುಸ್ಲಿಮರ ನಡುವೆ ಗಲಾಟೆ ಬಳಿಕ 33 ಜನರನ್ನ ಬಂಧಿಸಲಾಗಿತ್ತು. ಸುಮೋಟೋ ಕೇಸ್ ದಾಖಲಿಸಿ ಹಲ್ಲೆಕೋರರನ್ನ ಬಂಧನ ಮಾಡಿದ್ದರು. ವಿಷಯ ತಿಳಿದು ಹಿಂದೂಪರ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಬಳಿಕ ಗ್ರಾಮದ ಎರಡೂ ಕೋಮಿನ ಮುಖಂಡರ ಜೊತೆಗೆ ಸಭೆ ಮಾಡಿದ್ದ ಪೊಲೀಸರು, ಶಾಂತಿ ಸೌಹಾರ್ಧತೆ ಕಾಪಾಡಲು, ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಬಂಧನಕ್ಕೊಳಗಾಗಿದ್ದ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ ಸವಣೂರು ಪೊಲೀಸರು.