ಕರೊನಾ ಸೋಂಕಿನ ಹೊಸ ರೂಪಾಂತರವಾದ ಡೆಲ್ಟಾ ಪ್ಲಸ್ ಪ್ರಕರಣವು ದೇಶದಲ್ಲಿ 40 ಕ್ಕೂ ಹೆಚ್ಚು ವರದಿಯಾಗಿದೆ. ಒಕ್ಕೂಟ ಸರ್ಕಾರವು ಇದನ್ನು “ಕಳವಳಕಾರಿ ರೂಪಾಂತರಿ” ಎಂದು ಗುರುತಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡು ಬಂದಿರುವ ಕುರಿತು ನಿನ್ನೆ ಒಕ್ಕೂಟ ಸರ್ಕಾರವು ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಕ್ಕೆ ಎಚ್ಚರಿಕೆ ಕಳುಹಿಸಿದೆ.
ಭಾರತದಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರವಾದ ಡೆಲ್ಟಾ ರೂಪಾಂತರ ಅಥವಾ ಬಿ.1.617.2 ರೂಪಾಂತರದ ಪ್ರಕರಣಗಳು ಈ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ . ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮುಗಳಲ್ಲಿ ತಲಾ ಒಂದು ಪ್ರಕರಣಗಳಿವೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಸಾಂಕ್ರಾಮಿಕ ಡೆಲ್ಟಾ ರೂಪಾಂತರವು ‘ಡೆಲ್ಟಾ ಪ್ಲಸ್ ಅಥವಾ ಎವೈ.1(AY.1) ರೂಪಾಂತರವಾಗಿ ಪರಿವರ್ತನೆಗೊಂಡಿದೆ. ಇದು ಬಹಳ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೊಸ ರೂಪಾಂತರದಿಂದಾಗಿ ಕರೊನಾ ರೋಗದ ತೀವ್ರತೆಯ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಸೂರಿನಲ್ಲಿ ಡೆಲ್ಟಾ ರೂಪಾಂತರಿ ತಳಿ ಪತ್ತೆ?
ಕೋವಿಡ್ ಪಾಸಿಟಿವಿಟಿ ಪ್ರಮಾಣ ಅಧಿಕ ಇರುಚ ಮೈಸೂರು ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ತಳಿಯ ವೈರಾಣು ಪತ್ತೆಯಾಗಿರುವ ವರದಿ ಬಂದಿದೆ ಎನ್ನಲಾಗಿದೆ. ಆದರೆ, ‘ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ’ ಎಂಬುದಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ನಿಮ್ಹಾನ್ಸ್ಗೆ ಸುಮಾರು 40 ಮಾದರಿ ಕಳುಹಿಸಲಾಗಿದೆ. ಡೆಲ್ಟಾ ಪ್ಲಸ್ ಪತ್ತೆಯಾಗಿರುವ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತವಾಗಿ ಗೊತ್ತಾಗುವವರೆಗೆ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಯಾವುದೇ ರೀತಿಯ ವೈರಾಣುವನ್ನು ಎದುರಿಸಲು ನಾವು ಸಿದ್ಧವಿದ್ದೇವೆ’ ಎಂದು ಗೌತಮ್ ಹೇಳಿದ್ದಾರೆ.
ಅದಾಗ್ಯೂ, MMCRI (Mysore Medical College And Research Institute) ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಹಾಗೂ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿರುವುದಾಗಿ ಹೇಳಿದ್ದಾರೆ.
‘ಒಬ್ಬ ವ್ಯಕ್ತಿಯ ಗಂಟಲು ದ್ರವ ಮಾದರಿಯಲ್ಲಿ ಡೆಲ್ಟಾ ಪ್ಲಸ್ ತಳಿ ಪತ್ತೆಯಾಗಿರುವುದಾಗಿ ನಿಮ್ಹಾನ್ಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಪರೀಕ್ಷೆಗಾಗಿ ಕಳೆದ ತಿಂಗಳು ಮಾದರಿ ಕಳುಹಿಸಿದ್ದೆವು’ ಎಂದು ಡಾ.ಸಿ.ಪಿ.ನಂಜರಾಜ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲೇ ಅಧಿಕ!
ಕೋವಿಡ್ ಎರಡೂ ಅಲೆಗಳಿಗೆ ತೀವ್ರವಾಗಿ ತುತ್ತಾಗಿದ್ದ ಮಹಾರಾಷ್ಟ್ರದಲ್ಲೇ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಅಧಿಕವಾಗಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 21 ಡೆಲ್ಟಾ ಪ್ಲಸ್ ರೂಪಾಂತರಿ ಕೇಸ್ಗಳು ಕಾಣಿಸಿಕೊಂಡಿವೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಇವುಗಳಲ್ಲಿ 9 ಪ್ರಕರಣಗಳು ರತ್ನಗಿರಿಯಲ್ಲಿ, 7 ಪ್ರಕರಣಗಳು ಜಲ್ಗೋನ್ನಲ್ಲಿ, 2 ಪ್ರಕರಣಗಳು ಮುಂಬೈನಲ್ಲಿ ಮತ್ತು ಸಿಂದುದರ್ಗ್, ಥಾಣೆ ಮತ್ತು ಪಾಲ್ಗಾರ್ ಜಿಲ್ಲೆಗಳಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಟೋಪೆ ತಿಳಿಸಿದ್ದಾರೆ.
21 ಡೆಲ್ಟಾ ಪ್ಲಸ್ ರೂಪಾಂತರಿ ಕೇಸ್ಗಳು ಪತ್ತೆಯಾಗಿರುವ ಹಿನ್ನೆಲ್ಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 100 ಸ್ಯಾಂಪಲ್ಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕಳೆದ ಮೇ 15 ರಿಂದ 7,500 ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 21 ಕೇಸ್ಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಂಡು ಬಂದಿದೆ. ಸೋಂಕಿತರ ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಅವರ ಪ್ರಯಾಣದ ಹಿನ್ನೆಲೆಯನ್ನು ಕಲೆ ಹಾಕಲಾಗಿದೆ ಎಂದು ರಾಜೇಶ್ ಟೋಪೆ ತಿಳಿಸಿದ್ದಾರೆ.
ಕೇರಳದಲ್ಲೂ ಡೆಲ್ಟಾ ಆತಂಕ!
ಕೇರಳದ ಪಲಕ್ಕಾಡ್ ಮತ್ತು ಪಟ್ಟನಂತಿಟ್ಟ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇರಳ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟನಂತಿಟ್ಟ ಜಿಲ್ಲೆಯ ಕಡಪರಾ ಪಂಚಾಯತ್ ಮೂಲದ 4 ವರ್ಷದ ಬಾಲಕನಲ್ಲಿ, ಪಲಕ್ಕಾಡ್ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.