ರಾಜಸ್ಥಾನದ ಮಿಲಿಟರಿ ಪ್ರವೇಶಾತಿ ಕ್ಯಾಂಪ್’ನಲ್ಲಿ ಭಾಗವಹಿಸಿದ್ದ 20 ವರ್ಷದ ಯುವಕನನ್ನು ಆಯ್ಕೆ ಮಾಡದೇ ಇರಲು ಸೇನೆಯು ನೀಡಿದ ಕಾರಣ ಈಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿರುವ ಆಲಿಗಢ್ ಮುಸ್ಲಿಂ ಯೂನಿವರ್ಸಿಟಿ (AMU) ಶಿಕ್ಷಣ ಮಂಡಳಿಯಲ್ಲಿ ಅಧಿಕೃತವಾಗಿ ದಾಖಲಾಗದ ಕಾರಣ ಒಬ್ಬ ಮುಸ್ಲಿಂ ಯುವಕನಿಗೆ ಸೇನೆಯ ನೌಕರಿ ಕೈ ತಪ್ಪಿದೆ. ಯುಪಿ ಸರ್ಕಾರವು ಸೇನೆಗೆ ನೀಡದ ‘ಅಧಿಕೃತ’ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ AMU ಹೆಸರಿಲ್ಲದೇ ಇರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
AMUನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಮರ್ಸಲೀಮ್ ಖಾನ್ ಅವರು ಕಳೆದ ತಿಂಗಳು ರಾಜಸ್ಥಾನದ ಕೋಟಾದಲ್ಲಿ ನಡೆದ ಸೇನೆ ದಾಖಲಾತಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ, ಜುಲೈ 29ರಂದು ಅವರ ಅರ್ಜಿ ತಿರಸ್ಕೃತಗೊಂಡ ಕುರಿತು ಅಧಿಕೃತ ಪತ್ರ ತಲುಪಿದಾಗ ಆಶ್ಚರ್ಯಗೊಂಡಿದ್ದರು. ‘ಅನಧಿಕೃತವಾದ’ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯರ್ಥಿಯು ವ್ಯಾಸಂಗ ಮಾಡುತ್ತಿರುವ ಕಾರಣ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು, ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸೇನಾ ಅಧಿಕಾರಿಯೊಬ್ಬರು, ಪ್ರತೀ ರಾಜ್ಯದಿಂದ ಜನವರಿಯಲ್ಲಿ ಅಧಿಕೃತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಸೇನೆಗೆ ಕಳುಹಿಸಿಕೊಡಲಾಗುತ್ತದೆ. ಉತ್ತರ ಪ್ರದೇಶ ಸರ್ಕಾರ ನೀಡಿದ ಪಟ್ಟಿಯಲ್ಲಿ AMU ಹೆಸರಿರಲಿಲ್ಲ. ಹಾಗಾಗಿ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗಿದೆ, ಎಂದಿದ್ದಾರೆ.
ಇತ್ತ ಕಡೆ, AMU ಸಂಸ್ಥೆಯ ಮುಖ್ಯಸ್ಥರು ಈ ವಾದವನ್ನು ಅಲ್ಲಗೆಳೆದಿದ್ದು, ಅಕ್ಟೋಬರ್ 2015ರಲ್ಲಿಯೇ Council of Boards of School Education in India (COBSE)ನಲ್ಲಿ AMU ಹೆಸರನ್ನು ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾಗಿರುವ ದಿನೇಶ್ ಶರ್ಮಾ ಅವರು, ಈ ಕುರಿತು ತನಗೆ ಮಾಹಿತಿಯಿಲ್ಲ. ವಿಚಾರಣೆ ನಡೆಸುತ್ತೇನೆ, ಎಂದು ಮಾತ್ರ ಹೇಳಿದ್ದಾರೆ.
ಹಲವು ದಶಕಗಳ ಇತಿಹಾಸವಿರುವ AMU ಸಂಸ್ಥೆಯೊಂದಿಗೆ ಈ ರಿತಿಯ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಂಸ್ಥೆಯ ಹಳೆ ವಿದ್ಯಾರ್ಥಿಯೊಬ್ಬರು ಇಂತಹುದೇ ದೂರು ನೀಡಿದ್ದರು ಎಂದು AMU ಉಪ ಕುಲಪತಿಗಳಾದ ತಾರಿಕ್ ಮನ್ಸೂರ್ ಅವರು ಹೇಳಿದ್ದಾರೆ.
ಸಂಸ್ಥೆಯ ಮಾಜಿ ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಜಮೀರುದ್ದೀನ್ ಶಾ ಅವರು, ಉನ್ನತ ಶಿಕ್ಷಣ ಸಂಸ್ಥೆಯ ಕುರಿತಾಗಿ ಇರುವ ನಿರ್ಲಕ್ಷ್ಯ ಮನೋಭಾವನೆಯನ್ನು ಈ ಘಟನೆ ತೋರಿಸುತ್ತಿದೆ. ಇಂತಹ ಗೊಂದಲಗಳು ಮುಂದೆಂದೂ ನಡೆಯದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.