ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ (BMICP)ಯಿಂದ ಭೂಮಿ ಕಳೆದುಕೊಂಡ 1,453 ರೈತರಿಗೆ ಪರಿಹಾರ ನಿವೇಶನ ಹಂಚಿಕೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಸಚಿವ ಸಂಪುಟದ ನಿರ್ಧಾರದ ಕಾನೂನುಬದ್ಧತೆ ಮತ್ತು ಅದರ ಫಲಾನುಭವಿಗಳ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಸೆಪ್ಟೆಂಬರ್ 3ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೈಸ್ ಕಂಪನಿ ಅಧೀನದಲ್ಲಿರುವ ವರಾಹಸಂದ್ರ, ಮಾದಾವರ ಹಾಗೂ ಗಂಗೊಂಡನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಸಂತ್ರಸ್ತ ಭೂಮಾಲೀಕರಿಗೆ ಪರಿಹಾರ ನಿವೇಶನ ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. 1,453 ರೈತರಿಗೆ ಮುಂದಿನ 60 ದಿನಗಳಲ್ಲಿ ನಿವೇಶನ ನೋಂದಣಿ ಮಾಡಿಸಿಕೊಡುವುದಾಗಿ ಸರ್ಕಾರ ತಿಳಿಸಿತ್ತು.
ಈ ನಿರ್ಧಾರದ ಬೆನ್ನಲ್ಲೇ ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದು, ಸರ್ಕಾರದ ಕ್ರಮವು ಈ ಹಿಂದೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವ್ಯಕ್ತವಾಗಿರುವ ನಿಲುವುಗಳಿಗೆ ವಿರುದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

BMICP ಯೋಜನೆಗಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ರೂಪಿಸಲಾದ 1997ರ ಫ್ರೇಮ್‌ವರ್ಕ್ ಒಪ್ಪಂದದ (FWA) ನಿಯಮಗಳನ್ನು ಉಲ್ಲೇಖಿಸಿರುವ ದೇವೇಗೌಡರು, ರಸ್ತೆ ಹಾಗೂ ರಸ್ತೆ ಮೂಲಸೌಕರ್ಯಕ್ಕಾಗಿ ನೀಡಲಾದ ಜಮೀನುಗಳಲ್ಲಿ ನಿವೇಶನ ನಿರ್ಮಾಣಕ್ಕೆ ಅವಕಾಶ ನೀಡುವುದು ಒಪ್ಪಂದದ ನಿಯಮಗಳಿಗೆ ವಿರುದ್ಧ ಎಂದು ಸರ್ಕಾರವೇ ಈ ಹಿಂದೆ ನ್ಯಾಯಾಲಯಗಳಲ್ಲಿ ವಾದಿಸಿತ್ತು ಎಂದು ಪತ್ರದಲ್ಲಿ ಹೇಳಿದ್ದಾರೆ.
2016ರಲ್ಲಿ ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿ ಇಂಟರ್‌ಚೇಂಜ್‌ಗಳಲ್ಲಿ ನಿವೇಶನ ನಿರ್ಮಾಣಕ್ಕೆ ಅನುಮತಿ ನೀಡುವುದು FWA ಒಪ್ಪಂದಕ್ಕೆ ವಿರುದ್ಧವಾಗುತ್ತದೆ ಎಂದು ತಿಳಿಸಿತ್ತು. ಇದೇ ನಿಲುವನ್ನು ಸರ್ಕಾರ ಇದೀಗ ಬದಲಾಯಿಸಿದೆಯೇ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

ಹೈಕೋರ್ಟ್‌ನ ಕೆಲವು ಆದೇಶಗಳು ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿರುವ ಅವರು, BMICP ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ರೀತಿಯಲ್ಲಿ ರಸ್ತೆ ಅಥವಾ ಇಂಟರ್‌ಚೇಂಜ್ ಪ್ರದೇಶಗಳಲ್ಲಿ ನಿವೇಶನ ನಿರ್ಮಾಣಕ್ಕೆ ಅವಕಾಶ ನೀಡಬಹುದೇ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
ಸರ್ಕಾರ ಹಂಚಿಕೆ ಮಾಡಲು ಮುಂದಾಗಿರುವ ನಿವೇಶನಗಳು ಯಾವಾಗ ನಿರ್ಮಾಣಗೊಂಡವು? ಅವುಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದವರು ಯಾರು? ಎಂಬ ಪ್ರಶ್ನೆಗಳನ್ನೂ ದೇವೇಗೌಡರು ಪತ್ರದಲ್ಲಿ ಕೇಳಿದ್ದಾರೆ.ಮಾದಾವರ, ಕೋಡಿಗೆಹಳ್ಳಿ, ಕೆಂಗೇರಿ, ಕೊಮ್ಮಘಟ್ಟ, ವರಾಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತಾನಹಳ್ಳಿ, ಯು.ಎಂ. ಕಾವಲ್, ಚಿಕ್ಕತೋಗೂರು, ಪಂತರಪಾಳ್ಯ, ಕೆ.ಜಿ. ಶ್ರೀಕಂಠಪುರ ಹಾಗೂ ಗಂಗೊಂಡನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿವೇಶನ ಹಂಚಿಕೆ ಮಾಡುವ ಕುರಿತು ವರದಿಯಾಗಿದ್ದು, ಈ ಪ್ರದೇಶಗಳ ಜಮೀನುಗಳು BMICP ಯೋಜನೆಯ ರಸ್ತೆ ಮತ್ತು ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಸಂಬಂಧಿಸಿವೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೈಸ್ ಕಂಪನಿಯ ಹಣಕಾಸು ದಾಖಲೆಗಳು, ಭೂ ಮಾರಾಟ ಹಾಗೂ ಜಂಟಿ ಅಭಿವೃದ್ಧಿ ಒಪ್ಪಂದಗಳ (JDA) ಕುರಿತ ಅಂಶಗಳನ್ನೂ ದೇವೇಗೌಡರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಯೋಜನಾ ಜಮೀನುಗಳ ನಗದೀಕರಣ, ಭೂ ಮಾರಾಟ ಹಾಗೂ ಟೋಲ್ ಸಂಗ್ರಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಅವರು ಉಲ್ಲೇಖಿಸಿದ್ದಾರೆ.ಕಂಪನಿಯ ಆಸ್ತಿಗಳನ್ನು ಬಳಸಿಕೊಂಡು ಯೋಜನೆಯ ಪ್ರವರ್ತಕರು ಲಾಭ ಗಳಿಸಿರುವ ಕುರಿತು ನ್ಯಾಯಾಲಯವೇ ಪ್ರಶ್ನೆಗಳನ್ನು ಎತ್ತಿದೆ ಎಂದು ಹೇಳಿರುವ ದೇವೇಗೌಡರು, ಕಂಪನಿಯ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆ (Forensic Audit) ಕುರಿತು ಕೂಡ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಅಂತಿಮವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಪ್ರಶ್ನೆಗಳನ್ನು ಮುಂದಿಟ್ಟಿರುವ ದೇವೇಗೌಡರು, “ಈ ನಿವೇಶನಗಳ ನಿಜವಾದ ಫಲಾನುಭವಿಗಳು ಜಮೀನು ಕಳೆದುಕೊಂಡ ಸಂತ್ರಸ್ತರೋ ಅಥವಾ ನೈಸ್ ಸಂಸ್ಥೆ ಮತ್ತು ಅದರ ಹೂಡಿಕೆದಾರರೋ?” ಎಂದು ಪ್ರಶ್ನಿಸಿದ್ದಾರೆ.ಅಲ್ಲದೆ, “ಆ ಹೂಡಿಕೆದಾರರು ನಿಮ್ಮ ಸಂಪುಟದಲ್ಲಿದ್ದಾರೆಯೇ?” ಎಂಬ ಪ್ರಶ್ನೆಯನ್ನೂ ಎತ್ತಿರುವ ಅವರು, ಸರ್ಕಾರದ ಈ ನಿರ್ಧಾರದ ಕುರಿತು ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.






