ಬಿಎಸ್ ಯಡಿಯೂರಪ್ಪ ವಿರುದ್ಧ ಹಿಂದಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಯಡಿಯೂರಪ್ಪ ಪರ್ಯಾಯ ಎಂದೇ ಬಿಂಬಿತವಾಗಿರುವ ಅರವಿಂದ ಬೆಲ್ಲದ್ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ರನ್ನು ಭೇಟಿಯಾಗದೆ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ನಾಲ್ವರು ಸಚಿವರು ಸೇರಿದಂತೆ ಒಟ್ಟು 51 ಮಂದಿ ಬಿಜೆಪಿ ಶಾಸಕರು ಅರುಣ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅವರಲ್ಲಿ 35 ಮಂದಿ ಶಾಸಕರು ಬಿ ಎಸ್ ಯಡಿಯೂರಪ್ಪ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಶಾಸಕರು ಹಾಗೂ ಅರುಣ್ ಸಿಂಗ್ ನಡುವಿನ ಭೇಟಿ ಪ್ರತ್ಯೇಕವಾಗಿ ಜರುಗಿವೆ.
ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಶಾಸಕರಲ್ಲಿ 15 ಕ್ಕೂ ಹೆಚ್ಚು ಶಾಸಕರು ಬಿ ಎಸ್ ವೈ ನಾಯಕತ್ವದ ವಿರುದ್ಧ ಅಪಸ್ವರ ಎತ್ತಿರುವುದಾಗಿ ಆಂತರಿಕ ಮೂಲಗಳು ತಿಳಿಸಿವೆ.
ಅರುಣ್ ಸಿಂಗ್ ಅವರನ್ನು ಭೇಟಿಯಾಗದ ಬೆಲ್ಲದ್-ಯತ್ನಾಳ್
ನಾಯಕತ್ವ ಬದಲಾವಣೆ ಊಹಾಪೋಹಗಳು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಲಿಂಗಾಯತ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಅವರ ಕಡೆಗೆ ವಿಶೇಷವಾಗಿ ಗಮನ ಹರಿಸಲಾಗಿತ್ತು.

ಬಿಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ವಿರುದ್ಧ ಹಿಂದಿನಿಂದಲೂ ಅಸಹನೆ ವ್ಯಕ್ತಪಡಿಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಹಾಗೂ ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನಾರ್ಥಿ ಎಂದು ಬಿಂಬಿತವಾಗಿದ್ದ ಅರವಿಂದ ಬೆಲ್ಲದ್ ಅವರು ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಹೊರ ಬಂದಿತ್ತು. ಆದರೆ, ಗುರುವಾರ ಸಂಜೆವರೆಗೂ ಅರುಣ್ ಸಿಂಗ್ ಭೇಟಿಗೆ ಈ ನಾಯಕರೀರ್ವರೂ ಬರದೇ ಇರುವುದು ಕುತೂಹಲ ಮೂಡಿಸಿದೆ. ಬಲ್ಲ ಮೂಲಗಳ ಪ್ರಕಾರ, ಅರುಣ್ ಸಿಂಗ್ ವಿಜಯೇಂದ್ರ ಪರವಿದ್ದಾರೆ ಎಂದೇ ಅನೇಕ ಬಂಡಾಯ ಶಾಸಕರು ಅವರನ್ನು ಭೇಟಿಯಾಗಲಿಲ್ಲ ಎಂದು ಹೇಳಲಾಗಿದೆ.
ಅರುಣ್ ಸಿಂಗ್ ಭೇಟಿಗೆ ನಾನು ಅವಕಾಶವೇ ಕೇಳಿಲ್ಲ – ಯತ್ನಾಳ್ ಸ್ಪಷ್ಟಣೆ
ಅರುಣ್ ಸಿಂಗ್ ಅವರ ಭೇಟಿಯಾಗದಿರುವ ಕುರಿತು ಹರಿದಾಡುತ್ತಿರುವ ಊಹಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ , ನಾನು ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶವನ್ನೇ ಕೇಳಲಿಲ್ಲ. ಸುಳ್ಳು ಸುದ್ದಿ ಬಿತ್ತರಿಸಬೇಡಿ ಎಂದು ತಮ್ಮ ಫೇಸ್‌ಬುಕ್ ಖಾತೆ ಮೂಲಕ ತಿಳಿಸಿದ್ದು, ಜೊತೆಗೆ ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿದ ಶಾಸಕರು ಎನ್ನಲಾದ ಪಟ್ಟಿಯೊಂದನ್ನು ಬಹಿರಂಗಗೊಳಿಸಿದ್ದಾರೆ. ಕೆಲವು ಗಂಟೆಗಳ ಬಳಿಕ ಆ ಪಟ್ಟಿಯನ್ನು ಪೇಸ್‌ಬುಕ್‌ನಿಂದ ಡಿಲಿಟ್ ಮಾಡಿದ್ದಾರೆ.

ಯತ್ನಾಳ್ ಹಂಚಿ, ಅಳಿಸಿದ ಪಟ್ಟಿ





