ಸ್ಯಾಂಟ್ರೋ ರವಿ ಬಗ್ಗೆ ಮೈಸೂರು ಪೊಲೀಸ್ ಸ್ಟೇಷನ್ ನಲ್ಲಿ ಕೆಲವು ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಆತ ಏನು ಕೆಲಸ ಮಾಡುತ್ತಿದ್ದಾನೆ ಆತನ ಚಟುವಟಿಕೆಗಳೇನು ಎಂಬುದರ ಬಗ್ಗೆ ತಿಳಿಯಲು ಆತನನ್ನ ವಶಕ್ಕೆ ಪಡೆದು ಸಮಗ್ರ ತನಿಖೆ ಮಾಡಬೇಕು ಎಂದು ನಾನು ಮೈಸೂರು ಕಮಿಷನರ್‌ಗೆ ಸೂಚಿಸಿರುವುದಾಗಿ ಗೃಹ ಸಚಿವ ಾರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವರು ಯಾರೆಲ್ಲಾ ಆತನ ಮೇಲೆ ದೂರು ನೀಡಿದ್ದಾರೆ, ಅದನ್ನೂ ಸಮಗ್ರ ತನಿಖೆ ಮಾಡಬೇಕು. ಅವನ ಹಿನ್ನೆಲೆಯನ್ನ ಅರ್ಥಮಾಡಿಕೊಳ್ಳಬೇಕು. ಆತ ಏನು ಮಾಡಿದ್ದಾನೆ ಎಂಬುದನ್ನ ಪರಿಶೀಲನೆ ಮಾಡಬೇಕು. ಒಂದು ಬಾರಿ ಆತನ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿತ್ತು ಎಂಬ ಮಾಹಿತಿ ಇದೆ. ಈಗ ಪುನಃ ಓಡಾಡುತ್ತಿದ್ದಾನೆ ತಕ್ಷಣ ಆತನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕುಮಾರ ಕೃಪಾ ಗೆಸ್ಟ್ ಹೌಸ್ ನಲ್ಲಿ ಆತನಿಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ ಕುಮಾರಸ್ವಾಮಿಗೆ ಈ ತರಹದ ಸಾಕಷ್ಟು ಮಾಹಿತಿ ಇರಬಹುದು. 20 ವರ್ಷಗಳಿಂದ ಸ್ಯಾಂಟ್ರೋ ರವಿ ಬಹಳಷ್ಟು ರಾಜಕಾರಣಿಗಳ ಜೊತೆ ಇದ್ದ. ಕುಮಾರಸ್ವಾಮಿ ಬಳಿ ಯಾವ ತರದ ಸಂಬಂಧ ಇಟ್ಟುಕೊಂಡಿದ್ದ..? ಎಂಬುದನ್ನು ಯೋಚನೆ ಮಾಡಬೇಕಿದೆ. ಕುಮಾರಸ್ವಾಮಿಗೆ ಮಾತ್ರ ಇತರಹದ ಫೋಟೋಗಳು ಆಡಿಯೋಗಳು ಹೇಗೆ ಸಿಗುತ್ತವೆ ಎಂಬುದನ್ನ ನಾವು ಯೋಚನೆ ಮಾಡಬೇಕು. ಕುಮಾರಸ್ವಾಮಿ ತಮ್ಮ ಬಳಿ ಇರುವ ಮಾಹಿತಿಯನ್ನು ನಮಗೆ ಕೊಡಬೇಕಾಗುತ್ತದೆ. ತನಿಖೆಗೆ ಸಹಾಯವಾಗುತ್ತದೆ. ಈತ ಯಾರು ಏನು ಎತ್ತ ಎಂಬುದು ತನಿಕಖೆಯಿಂದ ಮಾತ್ರ ಹೊರಬರಲಿದೆ ಎಂದು ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ, ಉಡುಪಿ ಸೇರಿ ಹಲವೆಡೆ NIA ದಾಳಿ ಕುರಿತು ಮಾತನಾಡಿ, ತನಿಖೆ ಸಮಗ್ರವಾಗಿ ಮಾಡಲಾಗುತ್ತಿದೆ. ಮೊದಲೆಲ್ಲಾ ರಾಷ್ಟ್ರೀಯ ತನಿಖಾ ತಂಡ FIR ದಾಖಲಿಸಿ ಸುಮ್ಮನಾಗುತ್ತಿತ್ತು. ಆದರೆ ಈಗ ಎಲ್ಲಾ ಕಡೆ ಪರಿಣಾಮಕಾರಿ ತನಿಖೆ ಮಾಡುತ್ತಿದೆ. ಹೊನ್ನಾಳಿ, ಉಡುಪಿ, ಶಿವಮೊಗ್ಗ ಸೇರಿ ಹಲವೆಡೆ ದಾಳಿ ಮಾಡಿ ಕೆಲವರನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
NIA ವಶಕ್ಕೆ ಪಡೆದುಕೊಂಡ ಆರೋಪಿಗಳಲ್ಲೊಬ್ಬ ಕಾಂಗ್ರೆಸ್ ಮುಖಂಡನ ಮಗ ಎಂದು ಗೊತ್ತಾಗಿದೆ. ಇವೆಲ್ಲ ತನಿಖೆಯನ್ನು ಹೊರಗೆ ಬರುತ್ತೆ. ಕಾಂಗ್ರೆಸ್ಸಿಗೆ ಯಾರೇ ತಪ್ಪು ಮಾಡಿದರೂ ಖಂಡಿಸುವ ಶಕ್ತಿ ಇಲ್ಲ. ಮುಸ್ಲಿಮರನ್ನಂತೂ ಓಟಿಗಾಗಿ ಓಲೈಕೆ ಮಾಡುತ್ತಾರೆ . ಎಲ್ಲಾ ಕಡೆ ಜನ ಕಾಂಗ್ರೆಸ್ ಮುಗಿಸಿದ್ದಾರೆ. ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದ್ದಾರೆ, ಇಲ್ಲೂ ಮುಗಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.