ಜನ ಸಾಮಾನ್ಯರು ಏಪ್ರಿಲ್ 1ನೇ ತಾರೀಖನ್ನು ಮೂರ್ಖರ ದಿನ ಎಂದು ಆಚರಿಸೋದು ಸರ್ವೇ ಸಾಮಾನ್ಯ. ಆದರೆ, ಬಿಬಿಎಂಪಿ ಅಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿಕೊಂಡು ಒಂದು ದಿನ ಮೊದಲೇ ಇಡಿ ನಗರದ ಜನರನ್ನು ಮೂರ್ಖರನ್ನಾಗಿಸಿದ್ದಾರೆ.
ಕಳ್ಳರಂತೆ ಕದ್ದು ಮುಚ್ಚಿ ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಿರುವುದಲ್ಲದೆ ಕಾನೂನಿಗೆ ವಿರೋಧವಾಗಿ ತಮ್ಮ ಮನಸ್ಸಿಗೆ ಬಂದಂತೆ ಬಜೆಟ್ ಮಂಡನೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. 1949ರಲ್ಲಿ ಮೇಯರ್‍ಗಿರಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಪಾಲಿಕೆ ಕಟ್ಟಡ ಹೊರತುಪಡಿಸಿ ಬೇರೆ ಕಡೆ ಬಜೆಟ್ ಮಂಡನೆ ಮಾಡಿರುವ ಇತಿಹಾಸವಿಲ್ಲ. ಅದರಲ್ಲೂ ಬಜೆಟ್ ಮಂಡನೆ ಮಾಡಬೇಕಾದರೆ, ಮೇಯರ್, ಉಪಮೇಯರ್‍ಗಳು, ಆಯುಕ್ತರ ಹಾಜರಾತಿಯಲ್ಲೇ ಬಜೆಟ್ ಮಂಡನೆ ಮಾಡಬೇಕು. ಒಂದು ವೇಳೆ ಜನಪ್ರತಿನಿಗಳು ಇಲ್ಲದಿದ್ದರೆ ಅಡಳಿತಾಕಾರಿಗಳ ಸಮ್ಮುಖದಲ್ಲಿ ಬಜೆಟ್ ಮಂಡನೆ ಮಾಡುವುದು ವಾಡಿಕೆ.
ಆದರೆ, ಈ ಬಾರಿ ಬಿಬಿಎಂಪಿ ಕಟ್ಟಡಕ್ಕೆ ಬದಲಾಗಿ ರಾತ್ರೋರಾತ್ರಿ ನಗರಾಭಿವೃದ್ಧಿ ಇಲಾಖೆಯ ರೂಮ್ ನಂಬರ್ 436ರಲ್ಲಿ ಬಜೆಟ್ ಮಂಡನೆ ಮಾಡಿ ತಕ್ಷಣ ಅನುಮೋದನೆ ಪಡೆದುಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಬಿಬಿಎಂಪಿ ಮುಖ್ಯ ಅಯುಕ್ತರ ಅನುಪಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡಿ ಅಪ್ರೂವಲ್ ಪಡೆದುಕೊಂಡಿರುವುದರ ಹಿಂದೆ ನಗರದ ಪ್ರಭಾವಿ ಸಚಿವರುಗಳ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿಂದೆ ಬಜೆಟ್ ಮಂಡನೆ ಮಾಡಿ ನಂತರ ಅಯವ್ಯಯವನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಲಾಗುತ್ತಿತ್ತು. ಆದರೆ, ನಿನ್ನೆ ರಾತ್ರಿ ಮಂಡನೆಯಾದ ಬಜೆಟ್‍ಗೆ ತಕ್ಷಣ ಅನುಮೊದನೆ ಪಡೆದುಕೊಂಡಿರುವುದನ್ನು ಗಮನಿಸಿದರೆ, ಜನಪ್ರತಿನಿಗಳಿಗೆ ಕಾನೂನಿನ ಬಗ್ಗೆ ಇರುವ ಗೌರವ ಎಷ್ಟು ಎನ್ನುವುದು ಎಂತಹವರಿಗಾದರೂ ಗೊತ್ತಾಗುತ್ತದೆ. 198 ವಾರ್ಡ್‍ಗಳಲ್ಲಿ ಸದಸ್ಯರುಗಳು ತಮ್ಮ ತಮ್ಮ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಹಾಯವಾಗುವಂತೆ ಪಿ-1771 ಕೋಡ್ ಅಡಿ ಪ್ರತಿ ವಾರ್ಡ್‍ಗಳಿಗೆ Program of Works ಯೋಜನೆಯಡಿ ಇಂತಿಷ್ಟು ಹಣ ಮೀಸಲಿಡಲಾಗುತ್ತಿತ್ತು.
ಈ ಹಿಂದೆ ಹಳೆಯ ವಾರ್ಡ್‍ಗಳಿಗೆ ತಲಾ ಎರಡು ಕೋಟಿ ಹಾಗೂ ಹೊಸ ವಾರ್ಡ್‍ಗಳಿಗೆ ತಲಾ ಮೂರು ಕೋಟಿ ರೂ.ಗಳ ಅನುದಾನ ನೀಡಲಾಗುತ್ತಿತ್ತು. ಈ ಅನುದಾನ ಯಾವುದಕ್ಕೂ ಸಾಲದು ಎಂದು ಬಿಬಿಎಂಪಿ ಸದಸ್ಯರುಗಳು ಕೌನ್ಸಿಲ್‍ನಲ್ಲಿ ಬೊಬ್ಬೆ ಹೊಡೆದುಕೊಂಡರು ನಯಾಪೈಸೆ ಹೆಚ್ಚು ಮಾಡುತ್ತಿರಲಿಲ್ಲ. ಈ ಬಾರಿ ಬಿಬಿಎಂಪಿ ಸದಸ್ಯರಿಲ್ಲದ ಸಂದರ್ಭದಲ್ಲಿ ಪ್ರೋಗ್ರಾಂ ಆಫ್ ವರ್ಕ್ಸ್ ಅನುದಾನ ದುಪ್ಪಟ್ಟಾಗಿರುವುದು ಮಾಜಿ ಸದಸ್ಯರುಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ 132 ಹಳೆ ವಾರ್ಡ್‍ಗಳಿಗೆ ಇದ್ದ 2 ಕೋಟಿ ಅನುದಾನ ಈ ಬಾರಿ 4 ಕೋಟಿಗೆ ಏರಿಕೆಯಾಗಿದ್ದರೆ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 66 ವಾರ್ಡ್ ಹೊಸ ವಾರ್ಡ್‍ಗಳ ಮೂರು ಕೋಟಿ ಅನುದಾನ ಬರೊಬ್ಬರಿ 6 ಕೋಟಿ ರೂ.ಗಳಿಗೆ ಏರಿಸಲಾಗಿದೆ.
ಇನ್ನು ಬಜೆಟ್‍ನಲ್ಲಿ ಆರ್ಥಿಕ ಶಿಸ್ತು ಜಾರಿಗೆ ತರುವ ಉದ್ದೇಶದಿಂದ ಜಾರಿಗೆ ತಂದಿದ್ದ ವಿತ್ತಿಯ ನಿರ್ವಹಣೆ ಕಾಯ್ದೆಯನ್ನು ಈ ಬಾರಿ ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಆರ್ಥಿಕ ಶಿಸ್ತು ನಿಯಮದಡಿ ಬಜೆಟ್ ಮಂಡಿಸಿದ್ದರೆ ಬಜೆಟ್ ಗಾತ್ರ 9 ಸಾವಿರ ಕೋಟಿ ಗಡಿ ದಾಟುವಂತಿರಲಿಲ್ಲ. ಆದರೆ ಈ ನಿಯಮವನ್ನು ಕಡೆಗಣಿಸಿ 10,480 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ.
ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದರೂ ಜನಪ್ರತಿನಿಗಳಿಗೆ ಮಾತ್ರ ತೃಪ್ತಿಯಿಲ್ಲ. ಬಿಡುಗಡೆಯಾದ ಅನುದಾನದ ಕಾಮಗಾರಿಗಳು ಪೂರ್ಣಗೊಳ್ಳದೆ ಇದ್ದರೂ ಮತ್ತೆ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಕಳೆದ ಆರೇಳು ವರ್ಷಗಳಲ್ಲಿ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 23,984 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 7800 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಲಾಗಿತ್ತು.
ಸಾಲದೆಂಬಂತೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತಿಚೆಗೆ ನಗರದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ 6 ಸಾವಿರ ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿದ್ದರು. ಇಷ್ಟಿದ್ದರೂ ಬಿಬಿಎಂಪಿ ಬಜೆಟ್‍ನಲ್ಲಿ ಮತ್ತೆ 924 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಈ ಹಿಂದೆ ಘೋಷಣೆಯಾದ ಕಾಮಗಾರಿಗಳೇ ಇನ್ನು ಪೂರ್ಣಗೊಂಡಿಲ್ಲ. ಆ ಕಾಮಗಾರಿಗಳಿಗೆ ಮೀಸಲಿಟ್ಟಿದ ಸಾವಿರಾರು ಕೋಟಿ ರೂ.ಗಳ ಅನುದಾನ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಇಂತಹ ಸಮಯದಲ್ಲಿ ಮತ್ತೆ ಬಜೆಟ್‍ನಲ್ಲಿ 924 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದನ್ನು ನೋಡಿದರೆ ಸಾಮಾನ್ಯ ಜನರಿಗೂ ಜನಪ್ರತಿನಿಧಿಗಳ ವರ್ತನೆ ಬಗ್ಗೆ ಅನುಮಾನ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಾರ್ಪೋರೇಟರ್‌ಗಳು ಇಲ್ಲದ ಸಮಯದಲ್ಲಿ ಪ್ರೋಗ್ರಾಂ ಆಫ್ ವರ್ಕ್ಸ್ ಅನುದಾನ ದುಪ್ಪಟ್ಟು ಮಾಡಿಕೊಂಡಿರುವುದು ಅಭಿವೃದ್ಧಿ ನೆಪದಲ್ಲಿ ಸಾವಿರಾರು ಕೋಟಿ ಅನುದಾನ ಮೀಸಲಿಸಿಕೊಂಡಿರುವುದು ನೋಡಿದರೆ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯಲು ಮಾಡಿರುವ ಹುನ್ನಾರ ಇದು ಎನ್ನುವುದು ಸಾಬೀತಾಗುತ್ತದೆ. ಸಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಸದೆ ವಿನಾಕಾರಣ ಚುನಾವಣೆಯನ್ನು ಮುಂದೂಡುವಂತೆ ಮಾಡುತ್ತಿರುವುದನ್ನು ಗಮನಿಸಿದರೆ ನಗರವನ್ನು ಪ್ರತಿನಿಧಿಸುವ ಶಾಸಕರುಗಳಿಗೆ ಬಿಬಿಎಂಪಿ ಸದಸ್ಯರೊಂದಿಗೆ ಅಕಾರ ಹಂಚಿಕೆ ಮಾಡಿಕೊಳ್ಳಲು ಇಷ್ಟವಿಲ್ಲ ಎನ್ನುವುದನ್ನು ಪುಷ್ಟಿಕರಿಸಿದಂತಿದೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಗರದ ಶಾಸಕರು ಒಂದಾಗಿ ಈ ರೀತಿಯ ಕಾನೂನು ಬಾಹಿರ ಬಜೆಟ್ ಮಂಡನೆ ಮಾಡಿಕೊಳ್ಳುವ ಮೂಲಕ ನಮಗೆಲ್ಲ ದ್ರೋಹ ಬಗೆದಿದ್ದಾರೆ ಎಂದು ಪಕ್ಷಾತೀತವಾಗಿ ಬಿಬಿಎಂಪಿ ಮಾಜಿ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ ಅಂತ್ಯದೊಳಗೆ ಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆಯಿಂದ ಸಂಪೂರ್ಣ ಪಾರದರ್ಶಕವಾಗಿ ಅಗತ್ಯ ಕೆಲಸ, ಕಾಮಗಾರಿಗಳಿಗೆ ಒತ್ತು ನೀಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ ಎಂದು ಬಿಬಿಎಂಪಿ ಆಡಳಿತಾಕಾರಿ ರಾಕೇಶ್‍ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಪ್ರೋಗ್ರಾಂ ಆಫ್ ವರ್ಕ್ಸ್ ಅನುದಾನವನ್ನು ದುಪ್ಪಟ್ಟು ಮಾಡಲಾಗಿದೆ. ರಸ್ತೆ, ರಾಜಕಾಲುವೆ, ಕೆರೆ, ಮೇಲ್ಸೇತುವೆ ಸೇರಿದಂತೆ ಎಲ್ಲ ವಿಭಾಗಗಳಿಗೂ ಅನುದಾನ ನೀಡಲಾಗಿದ್ದು, ಬಿ ಖಾತಾ ಹೊಂದಿರುವವರಿಗೆ ಎ ಖಾತಾ ಮಾಡಿಕೊಡಲು ಅನುವು ಮಾಡಿಕೊಡುವುದರ ಜತೆಗೆ ಬಿಬಿಎಂಪಿಯ ಆದಾಯ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.