ಹೆಸರಿಗೆ ತಕ್ಕಂತೆ ಡಾ. ರಾಜ್‌ಕುಮಾರ್ ಕುಟುಂಬ ದೊಡ್ಮನೆಯೇ. ಬದುಕಿದ್ದಾಗ ಒಳ್ಳೆಯ ಮನುಷ್ಯ, ಉತ್ತಮ ನಟ ಎನಿಸಿಕೊಂಡಿದ್ದು ಮಾತ್ರವಲ್ಲದೆ ಸಾವಿನಲ್ಲಿಯೂ ಅಪ್ಪು ಸಾರ್ಥಕತೆ ಮೆರೆದಿದ್ದಾರೆ. ಅಂದು ಅಣ್ಣಾವ್ರು ಮಾಡಿದ ಆ ಒಂದು ಕೆಲಸ ರಾಜ್ಯದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ಇಂದು ಅದೇ ತಂದೆ ಹಾಕಿ ಕೊಟ್ಟ ಹಾದಿಯಲ್ಲೆ ತೆರಳಿ ಅಪ್ಪು ಸಾರ್ಥಕತೆ ಮೆರೆದಿದ್ದಾರೆ.
ನೇತ್ರದಾನ ಮಹಾದಾನ…ಇದನ್ನ ದೊಡ್ಮನೆ ಕುಟುಂಬ ಅಕ್ಷರಶಃ ಪಾಲಿಸಿಕೊಂಡು ಬಂದಿದೆ. ಈ ಹಿಂದೆ ರಾಜ್ಯದಲ್ಲಿ ಕಣ್ಣಿನ ಆಸ್ಪತ್ರೆಗಳೇ ಇಲ್ಲದ ಕಾಲದಲ್ಲಿ, ನೇತ್ರದಾನ ಮಾಡೋ ಮೂಲಕ ಬಹುದೊಡ್ಡ ಕ್ರಾಂತಿಯನ್ನೇ ಅಣ್ಣಾವ್ರು ಮಾಡಿದ್ದರು. ಅದನ್ನ ಈಗ ಅವರ ಪುತ್ರರತ್ನ ಯುವರತ್ನ ಮುಂದುವರೆಸಿಕೊಂಡು ಬಂದಿದ್ದಾರೆ.
ಡಾ||ರಾಜ್‌ಕುಮಾರ್-ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ ಪವರ್‌ಸ್ಡಾರ್ ಪುನೀತ್ ರಾಜ್‌ಕುಮಾರ್(ಲೋಹಿತ್) ಅವರು ಶುಕ್ರವಾರ ಬೆಳ್ಳಗ್ಗೆ 11:30ಕ್ಕೆ ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಹೃದಯಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಪುನೀತ್‌ರವರ ಅಕಾಲಿಕ ನಿಧನದಿಂದಾಗಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಅಪ್ಪು ಸಾವಿನ ಸುದ್ದಿಯನ್ನು ತಿಳಿದು ದೇಶಾದ್ಯಂತ ವಿವಿಧ ಕ್ಷೇತ್ರದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಸಾವಿನಲ್ಲು ಸಾರ್ಥಕತೆ ಮೆರೆದಿರುವ ಅಪ್ಪು ಅವರ ನೇತ್ರದಾನ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದರೊಂದಿಗೆ ನಟ ಪುನೀತ್ ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ. ನೇತ್ರದಾನ ಮಾಡುವ ಮೂಲಕ ನಟ ಪುನೀತ್ ರಾಜ್‌ಕುಮಾರ್ ಎಲ್ಲರಿಗು ಮಾದರಿಯಾಗಿದ್ದಾರೆ.
ಈ ಹಿಂದೆ ವರನಟ ದಿ|| ಡಾ.ರಾಜ್‌ಕುಮಾರ್‌ರವರು ನೇತ್ರದಾನ ಮಾಡುವ ಮೂಲಕ ಎಲ್ಲರಿಗು ಮಾದರಿಯಾಗಿದ್ದರು. ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಡಾ.ರಾಜ್‌ಕುಮಾರ್ ಟ್ರಸ್ಟ್ ಮತ್ತು ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ ಸಂಸ್ಥೆಗಳು ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ 2019ರ ನವೆಂಬರ್‌ನಲ್ಲಿ ಸಿದ್ದಗಂಗಾ ಮಠದ ಹತ್ತು ಸಾವಿರ ಮಕ್ಕಳಿಗೆ ಉಚಿತ ನೇತ್ರ ತಪಾಸನೆ ಮತ್ತು ಕನ್ನಡಕಗಳ ವಿತರಣೆ ನಡೆಸಿತ್ತು. ಹತ್ತು ಸಾವಿರ ಮಕ್ಕಳ ನೇತ್ರ ರಕ್ಷಣೆ ನಮ್ಮ ಗುರಿ ಅಭಿಯಾನವು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದೆ ಎಂದು ನಟ ಪುನೀತ್ ರಾಜಕುಮಾರ್ ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಬರೆದುಕೊಂಡಿದ್ದರು.

ಪುನೀತ್ ರಾಜ್‌ಕುಮಾರ್‌ರವರ ಹೀರೋಯಿಸಂ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರಲಿಲ್ಲ ಬದಲಿಗೆ, ನಿಜ ಜೀವನದಲ್ಲು ಅವರು ನಾಯಕ ಎನಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ದಾಶ್ರಮ, ಅನಾಥ ಮಕ್ಕಳ ಮತ್ತು
ಗೋ ಶಾಲೆಗಳ ಪೋಷಣೆ ಮಾಡುತ್ತಿದ್ದರು, ಜತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕ ಸಹಾಯ ಮಾಡಿದ್ದಾರೆ. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗ ಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು ಮತ್ತು ಎಲ್ಲಿಯೂ ತಾನು ಸಮಾಜ ಸೇವಕ ಎಂದು ಬಿಂಬಿಸಿಕೊಂಡಿರಲಲ್ಲ.
ಪುನೀತ್ ರಾಜ್‌ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ನಡೆಸುತ್ತಿದ್ದರು. ಸುಮಾರು 45 ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ತಾವು ಪಡೆಯುತ್ತಿದ್ದ ಸಂಭಾವನೆಯಲ್ಲಿ ಶೇಕಡ 1%ರಷ್ಟು ಹಣವನ್ನು ತಾವು ನಡೆಸುತ್ತಿದ್ದ ಅನಾಥಾಶ್ರಮಗಳಿಗೆ ಮೀಸಲಿಡುತ್ತಿದ್ದರು. ಪುನೀತ್ ಮಾಡಿರುವ ಸೇವೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಜಕುಮಾರ ಸಿನಿಮಾದಿಂದ ಪಡೆದ ಸಂಭಾವನೆಯ ಒಂದು ಭಾಗವನ್ನು ವೃದ್ಧಾಶ್ರಮಗಳಿಗೆ ವಿನಿಯೋಗಿಸಿದ್ದರು ಎನ್ನಲಾಗಿದೆ. ಪುನೀತ್ ರಾಜ್‌ಕುಮಾರ್‌ರವರ ಸಾವಿನಿಂದ ಅವರು ನಡೆಸುತ್ತಿದ್ದ ಅನಾಥಶ್ರಮಗಳು ಅನಾಥವಾಗಿವೆ.
ಒಟ್ಟಿನಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಸಾವು ಎಲ್ಲರಿಗೂ ಅತೀವ ನೋವನ್ನುಂಟು ಮಾಡಿದೆ. ಅವರ ಸಾವಿನ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರಿಗು ಮತ್ತು ಅವರ ಅಭಿವಾನಿ ವರ್ಗಕ್ಕೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.