ನುಗ್ಗೇಹಳ್ಳಿ : ರಾಷ್ಟ್ರೀಯ ಹೆದ್ದಾರಿ ಎನ್ಎಚ್ 4 ಬಾಂಬೆ ರಸ್ತೆಗೆ ಸಂಪರ್ಕ ಕಲ್ಪಿಸಲು ಚನ್ನರಾಯಪಟ್ಟಣ ಹಾಗೂ ತಿಪಟೂರು ಹುಳಿಯಾರು ಮಾರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿಸಲು ಕೇಂದ್ರ ಸರ್ಕಾರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ಹೋಬಳಿ ಕೇಂದ್ರದ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ಕುಂದುಕೊರತೆಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ಚನ್ನರಾಯಪಟ್ಟಣ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಆದರೆ ಈ ಭಾಗದಲ್ಲಿ ಕಾರ್ಖಾನೆಗಳ ಸ್ಥಾಪನೆ ಮಾಡಲು ಉದ್ಯಮಿಗಳು ಬರುತ್ತಾರೆ ಇದರಿಂದ ರೈತರ ಮಕ್ಕಳಿಗೂ ಉದ್ಯೋಗಾವಕಾಶ ದೊರೆಯುತ್ತದೆ ಎಂದರು. ಕೊಬ್ಬರಿ ವ್ಯಾಪಾರದಲ್ಲಿ ಲಾಬಿ ನಡೆಯುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ 12 ಸಾವಿರ ರಾಜ್ಯ ಸರ್ಕಾರ 3 ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಲು ಶಾಸಕರು ಹಾಗೂ ರೈತರೊಂದಿಗೆ ಪ್ರಾಮಾಣಿಕ ಹೋರಾಟ ನಡೆಸುತ್ತೇನೆ ಎಂದರು.ರೈತರ ಪಂಪ್ಸೆಟ್‌ಗಳಿಗೆ ಬೇಸಿಗೆಯಲ್ಲಿ ಸಮಯ ನಿಗದಿಪಡಿಸಿ ವಿದ್ಯುತ್ ನೀಡಬೇಕು ಎಂದು ಸರ್ಕಾರಕ್ಕೆ ಅಗ್ರಹಿಸಿದರು.