
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭಾರೀ ಕಸರತ್ತು ಮಾಡಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಸಚಿವ ಕೆ.ಎನ್ ರಾಜಣ್ಣ, ಬ್ಯಾಂಕ್ ಹಿತದೃಷ್ಟಿಯಿಂದ ಬಿಜೆಪಿಯ ಬೆಳ್ಳಿ ಪ್ರಕಾಶ್ ಅಧ್ಯಕ್ಷರಾಗಿ ಮುಂದುವರೆಯುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕೆ ಡಿ.ಕೆ ಶಿವಕುಮಾರ್ ಸಭೆಗೆ ಬಾರದೆ ಗೈರಾಗಿದ್ದ ರಾಜಣ್ಣ, ಇದೀಗ ಹೊಸ ದಾಳವನ್ನು ಉರುಳಿಸಿದ್ದು, ಡಿ.ಕೆ ಶಿವಕುಮಾರ್ ಕಂಗಾಲಾಗುವಂತೆ ಮಾಡಿದೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಒಂದು ವೇಳೆ ಬೆಳ್ಳಿ ಪ್ರಕಾಶ್ ಕೆಳಗಿಳಿಸಿದ್ರೆ ನಾನೆ ಅಧ್ಯಕ್ಷ ಆಗ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೊಸ ದಾಳ ಉರುಳಿಸಿದ್ದಾರೆ. ಕೆ.ಎನ್.ರಾಜಣ್ಣ ಹೊಸ ದಾಳದ ಹಿಂದೆ ಹಲವು ಲೆಕ್ಕಾಚಾರಗಳಿವೆ ಎನ್ನಲಾಗ್ತಿದೆ. ಸಂಪುಟ ಪುನರ್ ರಚನೆಯಲ್ಲಿ ತಮ್ಮನ್ನ ಕೈಬಿಟ್ರೆ ಮಹತ್ವದ ಅಪೆಕ್ಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬಹುದು. ಸಹಕಾರಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಮುಂದುವರೆಸಬಹುದು ಅನ್ನೋದು ಒಂದು ಲೆಕ್ಕಾಚಾರ ಆದರೆ ಮತ್ತೊಂದು ಡಿ.ಕೆ ಶಿವಕುಮಾರ್ಗೆ ಠಕ್ಕರ್ ಕೊಡುವುದಾಗಿದೆ.

2013 ರಲ್ಲಿ ಶಾಸಕರಾಗಿದ್ದ ವೇಳೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಎನ್ ರಾಜಣ್ಣ, ಇದೀಗ ಮತ್ತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ಗೆ ಠಕ್ಕರ್ ಕೊಡಲು ತಂತ್ರಗಾರಿಕೆ ಮಾಡಿದ್ದಾರೆ. ಸದ್ಯ ರಾಜಣ್ಣರನ್ನ ಸಚಿವ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಮೇಲೆ ಡಿ.ಕೆ ಶಿವಕುಮಾರ್ ಒತ್ತಡ ಹೇರಿದ್ದಾರೆ ಎನ್ನಲಾಗ್ತಿದೆ. ಯಾವ ಹೈಕಮಾಂಡ್ ರೀ..? ಯಾವುದು ಇಲ್ಲ ಎಂದಿದ್ದ ರಾಜಣ್ಣ ವಿರುದ್ದ ಸುರ್ಜೆವಾಲ ಕೂಡ ವರದಿ ನೀಡಿರುವ ಬೆನ್ನಲ್ಲೇ ಅಲರ್ಟ್ ಆಗಿರುವ ರಾಜಣ್ಣ ಹೊಸ ದಾಳ ಉರುಳಿಸಿದ್ದಾರೆ. ತಮ್ಮ ಹಿಡಿತ ಸಡಿಲಿಸಲು ಮುಂದಾದ ಡಿಕೆಶಿಗೂ ತಿರುಗೇಟು ಕೊಟ್ಟಂತಾಗುತ್ತೆ ಎಂಬುದು ರಾಜಣ್ಣ ಲೆಕ್ಕಾಚಾರ.
ಬೆಳ್ಳಿ ಪ್ರಕಾಶ್ ಕೆಳಗಿಳಿಸಿ ಡಿ.ಕೆ ಶಿವಕುಮಾರ್ ಸಂಬಂಧಿ ರವಿಯನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ರೆ ಬ್ಯಾಂಕ್ ಉಳಿಯಲ್ಲ. ದೊಡ್ಡ ಮೊತ್ತದ ಠೇವಣಿದಾರರು ಹಣವನ್ನ ವಾಪಾಸ್ ಪಡೆಯುತ್ತಾರೆ. ನಬಾರ್ಡ್‌ನಿಂದಲೂ ಅನುದಾನ ಕಡಿಮೆ ಆಗಿದೆ. ಇನ್ನಾರು ತಿಂಗಳಲ್ಲಿ ಚುನಾವಣೆ ನಡೆಯುತ್ತದೆ. ಸದ್ಯಕ್ಕೆ ಬೆಳ್ಳಿ ಪ್ರಕಾಶ್ ಬದಲಾವಣೆ ಬೇಡ. ಒಂದು ವೇಳೆ ಬದಲಾವಣೆ ಮಾಡಲೇ ಬೇಕು ಎನ್ನುವುದಾದ್ರೆ ನಾನೇ ಅಧ್ಯಕ್ಷನಾಗ್ತೇನೆ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಇದೀಗ ಸಿಎಂ ಹಾಗು ಹೈಕಮಾಂಡ್ ಏನ್ ಹೇಳುತ್ತಾರೆ ಅನ್ನೋದ್ರ ಮೇಲೆ ಭವಿಷ್ಯ ನಿರ್ಧಾರ ಆಗಲಿದೆ.