ಸಮಾನತೆ ಪ್ರೋತ್ಸಾಹಿಸದ ಅಥವಾ ಮನುಷ್ಯನ ಘನತೆಯನ್ನು ಖಾತ್ರಿಗೊಳಿಸದ ಯಾವುದೇ ಧರ್ಮ ಧರ್ಮವಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಟೆಕ್ ಶೃಂಗಸಭೆಯಲ್ಲಿ ಸೋಮವಾರ (ಸೆಪ್ಟೆಂಬರ್ 4) ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಚಿವ ಉದಯನಿದಿ ಸ್ಟಾಲಿನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನನ್ನ ಪ್ರಕಾರ, ಸಮಾನ ಹಕ್ಕುಗಳನ್ನು ನೀಡದ ಅಥವಾ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮ ಕಾಯಿಲೆಯಷ್ಟೇ ಕೆಟ್ಟದು ಎಂದರು.
ಈ ಮೂಲಕ ಉದಯ್ ಸ್ಟಾಲಿನ್ ಅವರ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಉದಯನಿಧಿ ಸ್ಟಾಲಿನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಉದಯನಿಧಿ ವಿರುದ್ಧ ತಿರುಗಿ ಬಿದಿದ್ದರೆ, ಕೆಲ ವಿರೋಧ ಪಕ್ಷಗಳ ನಾಯಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ.
ಇದೇ ವೇಳೆ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, INDIA ಮೈತ್ರಿಕೂಟದಿಂದ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ. ಬಿಜೆಪಿಯವರು ಭಯಗೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕ, ಮಣಿಪುರ ಅಥವಾ ಚೈನಾ ಒಳನುಸುಳಿದಾಗ ವಿಶೇಷ ಸಂಸತ್ ಅಧಿವೇಶನವನ್ನು ಅವರು ಕರೆಯಲಿಲ್ಲ. ಒಂದು ರಾಷ್ಟ್ರ, ಒಂದು ಚುನಾವಣೆಗಾಗಿ ಐದು ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಲೋಕಸಭಾ ಸಂಶೋಧನಾ ವಿಭಾಗವು ಸೂಚಿಸಿದ ಸಾಧಕ-ಬಾಧಕಗಳನ್ನು ನೋಡುವಂತೆ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರದ ಬಳಿ ಮನವಿ ಮಾಡುವುದಾಗಿ ತಿಳಿಸಿದರು.