ಇತ್ತೀಚೆಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳುವ ಮೂಲಕ ಮೂರೂ ಮಾದರಿಯ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿದ್ದಾರೆ. ಸುಮಾರು 7 ವರ್ಷಗಳ ಕಾಲ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ವಿರಾಟ್ ಕೊಹ್ಲಿ ಅವಧಿ ವಿಶ್ವ ಕ್ರಿಕೆಟ್ ನಲ್ಲಿ ಎದ್ದು ಕಾಣ ಬಲ್ಲ ಅಧ್ಯಾಯ. ಇದೀಗ ನಾಯಕತ್ವಕ್ಕೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಅದೀಗ ನೆಟ್ಟಿಗರ ಗಮನ ಸೆಳೆದಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಈ ನಿಟ್ಟಿನಲ್ಲಿ ಆಂಗ್ಲ ಭಾಷೆಯಲ್ಲಿ ಅನುಷ್ಕಾ ಶರ್ಮಾ ಬರೆದಿರುವ ಪತ್ರವನ್ನು ‘ಪ್ರತಿಧ್ವನಿ’ ಓದುಗರಿಗಾಗಿ ಕನ್ನಡೀಕರಿಸಿದೆ.
“ಅದು 2014. ನನಗೆ ಇನ್ನೂ ಸರಿಯಾಗಿ ನೆನಪಿದೆ. ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ನಾಯಕತ್ವದಿಂದ ನಿವೃತ್ತಿ ಘೋಷಿಸಿಕೊಂಡಾಗ ನೀನು ನಾಯಕನಾದ ಗಳಿಗೆಯನ್ನು ನನ್ನ ಬಳಿ ಹಂಚಿಕೊಂಡಿದ್ದೆ. ಎಮ್ ಎಸ್ ಧೋನಿ, ನಾನು ಮತ್ತು ನೀನು ಅದೇ ದಿನ ಈ ಬಗ್ಗೆ ನಗುತ್ತಾ ಬಹಳ ಹೊತ್ತು ಮಾತನಾಡಿಕೊಂಡಿದ್ದೆವು. ಈ ವೇಳೆ ಧೋನಿ, ನಿನ್ನ ಗಡ್ಡ ಎಷ್ಟು ಬೇಗನೆ ಬಿಳಿ ಬಣ್ಣಕ್ಕೆ ತಿರುಗುತ್ತಿದೆ ನೋಡು ಎಂದು ನಿನ್ನ ಕಾಲೆಳೆದಿದ್ದರು. ಈ ಬಗ್ಗೆ ಮತ್ತೆ ಮತ್ತೆ ನೆನಪಿಸಿಕೊಂಡು ನಕ್ಕಿದ್ದೆವು. ಆ ದಿನದಿಂದ ಈ ಕ್ಷಣದವರೆಗೆ ನಿನ್ನ ಸುತ್ತಲಿದ್ದು, ನಿನ್ನ ಜೊತೆಯಲ್ಲೇ ಇದ್ದು ನಿನ್ನ ಗಡ್ಡ ಬೆಳ್ಳಗಾಗುವುದಕ್ಕಿಂತ ಹೆಚ್ಚಾಗಿ ನಿನ್ನ ಏಳಿಗೆಯನ್ನು ನೋಡಿದ್ದೇನೆ ನಾನು. ಟೀಂ ಇಂಡಿಯಾದ ನಾಯಕನಾಗಿ ನಿನ್ನ ಸಾಧನೆಯನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಿನ್ನ ನಾಯಕತ್ವದಲ್ಲಿ ಭಾರತ ಗಳಿಸಿದ ಯಶಸ್ಸು ನನ್ನನ್ನು ಸದಾ ಹೆಮ್ಮೆ ಪಡುವಂತೆ ಮಾಡಿದೆ. ಎಲ್ಲದಕ್ಕೂ ಮಿಗಿಲಾಗಿ ನಿನ್ನೊಳಗೆ ನಿನ್ನನು ನೀನು ನಿಯಂತ್ರಿಸಿದ ಪರಿಯ ಬಗ್ಗೆ ನಾನು ಹೆಚ್ಚು ಬೀಗುತ್ತೇನೆ.
2014ರ ಸಮಯದಲ್ಲಿ ನಮ್ಮಲ್ಲಿ ಇದಕ್ಕಿಂತಲೂ ಯೌವನವಿತ್ತು. ನಿಷ್ಕಳಂಕ ಮನೋಭಾವನೆ ಇತ್ತು. ಒಳ್ಳೆಯ ಗುರಿ, ಸಕಾರಾತ್ಮಕ ಯೋಚನೆಗಳು ಮುಂದಿನ ನಮ್ಮ ಬದುಕನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬಲ್ಲದು ಎಂದು ನಾವಿಬ್ಬರು ಯೋಚಿಸಿಕೊಂಡಿದ್ದೆವು. ಸವಾಲುಗಳಿಲ್ಲಿದೆ ಬದುಕನ್ನು ಗೆಲ್ಲಲು ಅಸಾಧ್ಯ. ಹಾಗೆಯೇ ಆಫ್ ಫೀಲ್ಡ್ ಹಾಗೂ ಆನ್ ಫೀಲ್ಡ್ ಎರಡಲ್ಲೂ ನೀನು ಸವಾಲುಗಳನ್ನು ಎದುರಿಸಿ, ಅವೆಲ್ಲವನ್ನೂ ಗೆದ್ದು ಮತ್ತೆ ಮುಂದುವರೆದಿದ್ದಿ. ನಿರೀಕ್ಷಿಸುವ ಜಾಗದಲ್ಲಿ ಕೈಕೊಟ್ಟು, ನಿನಗೆ ಹೆಚ್ಚು ಅಗತ್ಯವಿರುವ ಸಂದರ್ಭಗಳಲ್ಲಿ ನಿನ್ನನ್ನು ಬದುಕು ಹೆಚ್ಚೆಚ್ಚು ಪರೀಕ್ಷಿಸುತ್ತದೆ. ಪರ್ವಾಗಿಲ್ಲ, ಬದುಕೆಂದರೆ ಹಾಗೆ ತಾನೆ..?
ಹುಡುಗ, ನಿನ್ನ ಒಳ್ಳೆಯ ಉದ್ದೇಶಗಳೆಡೆಗೆ ತೂರಿ ಬಂದ ಎಲ್ಲಾ ದುರುದ್ದೇಶಗಳನ್ನು ಮೆಟ್ಟಿ ನಿಂತಿದ್ದಕ್ಕಾಗಿ ನಿನ್ನ ಬಗ್ಗೆ ನಾನು ಅತಿ ಹೆಚ್ಚು ಹೆಮ್ಮೆ ಪಡುತ್ತಿದ್ದೇನೆ. ನಿನ್ನ ತಾಕತ್ತಿಗೂ ಮೀರಿ ನೀನು ಮೈದಾನದಲ್ಲಿ ದೇಶವನ್ನು ಮುನ್ನಡೆಸಿದ್ದೆ. ಸೋತಗಳಿಗೆಯಲ್ಲಿ ಕಣ್ಣೀರಿನೊಂದಿಗೆ ವಾಪಾಸ್ ಆದ ನಿನ್ನ ಪಕ್ಕದಲ್ಲಿ ನಾನು ಸಾಕಷ್ಟು ಬಾರಿ ಕೂತಿದ್ದೇನೆ. ಈ ವೇಳೆ ಎಲ್ಲವೂ ನೀನು, ಮುಂಂದೆ ಇನ್ನೇನಾದರು ಮಾಡಲು ಸಾಧ್ಯವೇ..? ಎಂಬುವುದನ್ನು ಯೋಚಿಸುತ್ತಾ ಕೂಡುವುದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಹುಡುಗಾ.. ನಿಜಕ್ಕೂ ನೀನು ಹಲವರಿಗೆ ಮಾದರಿ. ನೀನೊಬ್ಬ ನೇರ ನಡೆ ನುಡಿ ಹೊಂದಿರುವ ಮನುಷ್ಯ. ಇದೇ ಕಾರಣಕ್ಕೆ ಎಲ್ಲರಿಂದಲೂ ನೀನು ಅದನ್ನೇ ನಿರೀಕ್ಷೆ ಮಾಡುತ್ತಿದ್ದೆ. ನಿಷ್ಕಲ್ಮಶವಾದ ನಿನ್ನ ಉದ್ದೇಶಗಳೇ ನಿನ್ನನ್ನು ನಿನ್ನ ವೈರಿಗಳಿಂದ ಭಿನ್ನವಾಗಿಸಿದೆ. ಇದುವೇ ನನ್ನನ್ನೂ ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳಿಗೆ ನಿನ್ನ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿದ್ದು.

ನಿನ್ನನ್ನು ಮುಕ್ತ ಮನಸ್ಸಿಂದ ಅರ್ಥಮಾಡಿಕೊಂಡವರು ನಿಜಕ್ಕೂ ಧನ್ಯರು. ಅಲ್ಪರಿಂದ ನಿನ್ನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನೀನು ಪರಿಪೂರ್ಣ ಮನುಷ್ಯನಲ್ಲ ಎಂಬುವುದು ನನಗೆ ತಿಳಿದಿದೆ. ಆದರೆ ನೀನು ನಿನ್ನ ನ್ಯೂನತೆಗಳನ್ನು ಮರೆಮಾಚಲು ಯಾವತ್ತೂ ಪ್ರಯತ್ನಿಸಿಲ್ಲ. ಸತ್ಯದ ಪರ, ಕಠಿಣ ಪರಿಶ್ರಮ ಹಾಗೂ ಸರಿಯಾದ ದಾರಿಯಲ್ಲೇ ಎಲ್ಲವನ್ನೂ ಧಕ್ಕಿಸಿಕೊಂಡಿದ್ದಿಯಾ. ಅದೇ ಕಾರಣಕ್ಕೆ ನೀನಿಂದು ಇಲ್ಲಿದ್ದಿಯಾ ಎಂದೂ ನನಗೆ ಗೊತ್ತಿದೆ. ಇದೇ ಕಾರಣಕ್ಕೆ ನಿನ್ನ ಹಾಗೂ ನನ್ನ ನಡುವಿನ ಪ್ರೀತಿಗೆ ಎಲ್ಲೆ ಇಲ್ಲ.
ಕೊನೆಯದಾಗಿ,
“ನಿನ್ನ ಈ ನಿರ್ಧಾರ ಸರಿಯಾಗಿಯೇ ಇದೆ. ಕಳೆದ 7 ವರ್ಷದಲ್ಲಿ ನೀನು ನಡೆದ ಬಂದ ಹಾದಿಯೇ ಮುಂದಿನ ದಿನಗಳಲ್ಲಿ ನಮ್ಮ ಮಗಳಿಗೆ ಸ್ಫೂರ್ತಿಯಾಗಲಿದೆ.”
- ಅನುಷ್ಕಾ ಶರ್ಮಾ