ಪಶ್ಚಿಮದ ಮೇಲೆ ಪ್ರಾಚೀನ ಭಾರತದ ಪ್ರಾಧಾನ್ಯತೆ ಸ್ಥಾಪಿಸುವಾಗ, ನಾವು ಐತಿಹಾಸಿಕ ದಾಖಲಾತಿಗಳಿಗಿಂತ ಸಾಮಾನ್ಯ ಜ್ಞಾನವನ್ನು ಅವಲಂಬಿಸಬೇಕಾಗು ಎನ್ನುತ್ತಾರೆ ಲೇಖಕ ಸಾಲ್ವಟೋರ್ ಬಾಬೋನ್ಸ್. ಈ ಲೇಖಕರು ಮೇ ೩೧, ೨೦೨೩ ರ ‘ದಿ ಫಸ್ಟಪೋಸ್ಟ್ ಡಾಟ್ ಕಾಮ್ ವೆಬ್ ಜರ್ನಲ್ಲಿಗೆ ಬರೆದ ತಮ್ಮ ಅಂಕಣದಲ್ಲಿ ಪಾಶ್ಚಿಮಾತ್ಯ ನಾಗರಿಕತೆಯು ಭಾರತದಲ್ಲಿ ಆರಂಭವಾಯಿತೆ ಎನ್ನುವ ತಲೆ ಬರಹದಡಿಯಲ್ಲಿ ಭಾರತದ ನಾಗರಿಕತೆಯ ಪ್ರಾಚೀನತೆ ಕುರಿತು ವಿದೇಶಿಯರ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಪ್ರಪಂಚದ ಉಳಿದ ಜನರಂತೆ, ಭಾರತೀಯರು ಕೂಡ ತಮ್ಮ ದೇಶದ ನಾಗರಿಕತೆಯ ಪ್ರಾಚೀನ ಬೇರುಗಳ ಬಗ್ಗೆ ಹೆಚ್ಚು ಹೆಮ್ಮೆಪಡುತ್ತಾರೆ ಮತ್ತು ಕೆಲವೊಮ್ಮೆ ಅವರು ಅದನ್ನು ಅತಿರಂಜಿಸುತ್ತಾರೆ ಕೂಡ. ಜಗತ್ತಿನಲ್ಲಿ ವರ್ಣಮಾಲೆಯನ್ನು ಬಳಸಿದ ಮೊದಲಿಗರು, ಪುರಾತನ ತತ್ತ್ವಶಾಸ್ತ್ರದ ಮೂಲಿಗರು ಮತ್ತು ಶೂನ್ಯವನ್ನು ಕಂಡುಹಿಡಿದವರು ಎನ್ನುವ ಭಾರತೀಯರ ಹಕ್ಕುಗಳ ಕುರಿತು ಪಾಶ್ಚಿಮಾತ್ಯ ತಜ್ಞರು ಸಾಮಾನ್ಯವಾಗಿ ವಕ್ರದೃಷ್ಟಿಯಿಂದ ನೋಡುತ್ತಾರೆ ಎನ್ನುತ್ತಾರೆ ಲೇಖಕರು.

ಆದರೆ ಈ ಪಾಶ್ಚಿಮಾತ್ಯ ಅನುಮಾನಗಳು ಹೆಚ್ಚಾಗಿ ಸಾಕ್ಷ್ಯದ ಅನುಪಸ್ಥಿತಿಯನ್ನು ಆಧರಿಸಿವೆ ಎನ್ನುತ್ತಾರೆ ಲೇಖಕರು. ಪ್ರಾಚೀನ ಭಾರತೀಯರು ತಾಳೆ ಎಲೆಗಳ ಮೇಲೆ ಬರೆಯುತ್ತಿದ್ದ ಸಂಗತಿ ನಮಗೆಲ್ಲ ತಿಳಿದಿದೆ. ಆದರೆ ಮೆಸೊಪಟ್ಯಾಮಿಯನ್ನರು ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಮಣ್ಣಿನ ಹಲಗೆಗಳ ಮೇಲೆ ಬರೆದು ಅವುಗಳನ್ನು ಮರುಭೂಮಿಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ನಾವು ೫,೦೦೦ ವರ್ಷಗಳಿಗಿಂತಲೂ ಹಿಂದಿನ ಮೂಲ ಸುಮೇರಿಯನ್ ಪಠ್ಯಗಳ ಆರ್ಚಿವ್ ಗಳನ್ನು ಹೊಂದಿರುವುದು ಆಶ್ಚರ್ಯದ ಸಂಗತಿಯಲ್ಲ, ಆದರೆ ಭಾರತದ ಯಾವುದೇ ಲಿಖಿತ ಸಾಹಿತ್ಯಕ್ಕೆ ೨,೦೦೦ ವರ್ಷಗಳಿಗಿಂತ ಹಿಂದಿನ ಸಾಕ್ಷ್ಯಗಳಿಲ್ಲ. ಅಶೋಕನ ಸ್ತಂಭಗಳು ಸಹ ಇರಾಕ್‌ನಲ್ಲಿ ಅಳಿದುಳಿದ ಅಂಗಡಿಗಳಿಗಿಂತ ಅರ್ಧ ಆಯುಷ್ಯ ಮಾತ್ರ ಹೊಂದಿವೆ ಎನ್ನುತ್ತಾರೆ ಲೇಖಕರು. ಹಾಗಾಗಿ ಪಶ್ಚಿಮದ ಸಂಸ್ಕೃತಿಗಳ ಮೇಲೆ ಪ್ರಾಚೀನ ಭಾರತ ಪ್ರಾಧಾನ್ಯತೆ ಸ್ಥಾಪಿಸುವಾಗ, ನಾವು ಐತಿಹಾಸಿಕ ದಾಖಲಾತಿಗಳಿಗಿಂತ ಸಾಮಾನ್ಯ ಜ್ಞಾನವನ್ನು ಅವಲಂಬಿಸಬೇಕು ಎನ್ನುತ್ತಾ ಟ್ರೋಜನ್ ಕುದುರೆಯ ಪ್ರಾಚೀನ ಗ್ರೀಕ್ ಕಥೆಯನ್ನು ಲೇಖಕರು ಉಲ್ಲೇಖಿಸುತ್ತಾರೆ.

ನೂರಾರು ಗ್ರೀಕ್ ಸೈನಿಕರು ದೈತ್ಯ ನಕಲಿ ಕುದುರೆಯ ಹೊಟ್ಟೆಯೊಳಗೆ ಅಡಗಿಕೊಂಡಿದ್ದು ˌ ೧೦ ವರ್ಷಗಳ ಯುದ್ಧದ ನಂತರ ಗ್ರೀಕರು ಅದನ್ನು ಉಡುಗೊರೆಯಾಗಿ ಬಿಟ್ಟುಕೊಟ್ಟದ್ದು. ಆ ರಾತ್ರಿ ಗ್ರೀಕರು ವಿಶ್ವಾಸಘಾತುಕತನದಿಂದ ನಗರವನ್ನು ವಶಪಡಿಸಿಕೊಳ್ಳಲು “ಗ್ರೀಕರು ಉಡುಗೊರೆಗಳನ್ನು ಹೊಂದಿರುವ ಬಗ್ಗೆ ಎಚ್ಚರದಿಂದಿರಿ” ಎಂಬ ಪುರಾತನ ಮಂತ್ರವನ್ನು ಹುಟ್ಟುಹಾಕಿದ್ದು. ಹೀಗೆ ಲೇಖಕರು ಗ್ರೀಕ್ ಪೌರಾಣಿಕ ಕತೆಗಳನ್ನು ವಿವರಿಸುತ್ತಾರೆ. ಸಹಜವಾಗಿ, ಇಡೀ ಕಥೆ ಹಾಸ್ಯಾಸ್ಪದವೆನ್ನಿಸುತ್ತದೆ. ಭಾರತೀಯ ಮೂಲದ ಕತೆಗಳು ಇದೆ ರೀತಿ ಇವೆ: ಕವಿ ಭಾಸನ ಪ್ರತಿಜ್ಞಾಯೌಗಂಧರಾಯಣದಲ್ಲಿ, ದಟ್ಟವಾದ ಕಾಡಿನಲ್ಲಿ ಇರಿಸಲಾಗಿದ್ದ ನಕಲಿ ಆನೆಯ ಹೊಟ್ಟೆಯಲ್ಲಿ ಅನೇಕ ಸೈನಿಕರು ಅಡಗಿರುವ ಕತೆಯಿದೆ. ಆದರೆ ಪಾಶ್ಚಿಮಾತ್ಯ ವಿದ್ವಾಂಸರು ಭಾರತದ ಈ ಬಗೆಯ ಅತಿರಂಜಿತ ಆವೃತ್ತಿಗಳನ್ನು ಗ್ರೀಕ್‌ನಿಂದ ಎರವಲು ಪಡೆಯಲಾಯಿಗಿದೆ ಎನ್ನುತ್ತಾರೆ, ಏಕೆಂದರೆ ಗ್ರೀಕ್ ಆವೃತ್ತಿಯು ಭಾರತಕ್ಕಿಂತ ಹಲವಾರು ಶತಮಾನಗಳ ಹಿಂದೆ ದೃಢೀಕರಿಸಲ್ಪಟ್ಟಿದೆ ಎನ್ನುವುದು ಲೇಖಕರ ಅಭಿಮತ.
ಪ್ರಾಚೀನ ಭಾರತಕ್ಕೆ ಲಿಖಿತ ದಾಖಲೆಗಳು ತುಂಬಾ ವಿರಳವಾಗಿವೆ, ಭಾಸ ಯಾವಾಗ ಬದುಕಿದ್ದನೆಂದು ನಿರ್ಧಿಷ್ಟವಾಗಿ ಯಾರಿಗೂ ತಿಳಿದಿಲ್ಲ. ಭಾಷಾಶಾಸ್ತ್ರದ ಪುರಾವೆಗಳ ಆಧಾರದ ಮೇಲೆ, ಪ್ರತಿಜ್ಞಾಯೌಗಂಧರಾಯಣವು ಸಾಂಪ್ರದಾಯಿಕವಾಗಿ ಅಂದಾಜು ಕ್ರಿಸ್ತಪೂರ್ವ ಅಥವಾ ಕ್ರಿಸ್ತಶಕ ಮೊದಲ ಶತಮಾನದ್ದು ಇರಬಹುದು ಎನ್ನುವ ಬಗ್ಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ. ಭಾಸನ ಕಥೆಯ “ಟ್ರೋಜನ್ ಆನೆ” ಪ್ರಸಂಗವು ಗ್ರೀಕ್ ಕಥೆಯ ಪುನರಾವರ್ತನೆಯಾಗಿದೆಯೇ ಎನ್ನುವದು ಯಾರಿಗೂ ಗೊತ್ತಿಲ್ಲ. ಪ್ರಾಚೀನ ಭಾರತದಲ್ಲಿ ರಂಗಭೂಮಿ ಮತ್ತು ನಾಟಕಗಳು ಇದ್ದವು, ಆದರೆ ಅದರ ಕುರಿತು ಯಾರಿಗೂ ಹೆಚ್ಚಿನ ಮಾಹಿತಿಗಳಿಲ್ಲ. ಹೀಗಾಗಿ ಭಾರತೀಯ ಪ್ರಾಚೀನ ಇತಿಹಾಸಕ್ಕೆ ಕರಾರುವಕ್ಕಾದ ಸಾಕ್ಷ್ಯಗಳ ಕೊರತೆ ಇದೆ. ಇದೇ ಮಾದರಿಯಲ್ಲಿ, ಒಡಿಸ್ಸಿ ಕಥಾನಕವನ್ನು ಪರಿಗಣಿಸಿದಾಗ, ಹೋಮರ್‌ಗೆ ಕಾರಣವಾದ ಪ್ರಾಚೀನ ಗ್ರೀಕ್ ಪ್ರವಾಸ ಮಹಾಕಾವ್ಯದಲ್ಲಿ, ನಾಯಕನು ತನ್ನ ಪತ್ನಿಯಾಗುವ ಕನ್ಯೆಯನ್ನು ಆಯ್ಕೆಮಾಡಿಕೊಳ್ಳಲು ಸ್ವಯಂವರದಲ್ಲಿ ದೊಡ್ಡ ಬಿಲ್ಲು ಹೂಡಬೇಕಾಗುತ್ತದೆ ಎನ್ನುತ್ತಾರೆ ಲೇಖಕರು.

ಇದೆ ಮಾದರಿಯಲ್ಲಿ ರಾಮಾಯಣದ ನಾಯಕನ ಕತೆ ಬರುತ್ತದೆ. ಒಡಿಸ್ಸಿಯಸ್, ದೇಶಭ್ರಷ್ಟನಾಗಿ ಹತ್ತು ವರ್ಷಗಳ ಅವಧಿಗೆ ವನವಾಸಕ್ಕೆ ಹೋದರೆ ಇಲ್ಲಿ ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗುತ್ತಾನೆ. ಇಬ್ಬರೂ ಭೂಗತ ಜಗತ್ತಿಗೆ ಭೇಟಿ ನೀಡುವ ಕತೆಯಲ್ಲಿ ಸಾಮ್ಯತೆಯಿದೆ. ಹೀಗೆ ಭಾರತದ ಪ್ರತಿಯೊಂದು ಕಾಲ್ಪನಿಕ ಪುರಾಣಗಳು ವಿದೇಶದ ಪೌರಾಣಿಕ ಕತೆಗಳನ್ನು ಹೋಲುತ್ತವೆ. ಇಲಿಯಡ್, ಹೋಮರ್ನ ಮಹಾನ್ ಯುದ್ಧದ ಮಹಾಕಾವ್ಯದಲ್ಲಿ ˌ ಮಹಾನ್ ನಾಯಕ ಅಕಿಲ್ಸ್ ತನ್ನ ಭರವಸೆಯ ಸಂಗಾತಿಯನ್ನು ಕಳೆದುಕೊಂಡ ನಂತರ ಯುದ್ಧದಿಂದ ಹಿಂದೆ ಸರಿಯುತ್ತಾನೆ. ಅವನ ರಥ ಓಡಿಸುವ ಸಾರಥಿಯು ಬುದ್ಧಿವಂತ ಗ್ರೀಕರ ಸಲಹೆಯನ್ನು ಪಡೆಯುತ್ತಾನೆ, ಮತ್ತು ಯುದ್ದದಲ್ಲಿ ಹೋರಾಡುವದೇ ಸೈನಿಕನ ಆದ್ಯ ಕರ್ತವ್ಯ ಎಂದು ಆಕಿಲ್ಸ್ ನಿಗೆ ಸಲಹೆ ನೀಡುತ್ತಾನೆ. ಅಕಿಲ್ಸ್ ನನ್ನು ಅಂತಿಮವಾಗಿ ಮತ್ತೆ ಯುದ್ಧ ಮಾಡಲು ಮನವೊಲಿಸಲಾಗುತ್ತದೆ. ಇದು ನಮ್ಮ ಮಹಾಭಾರತದ ಕುರುಕ್ಷೇತ್ರ ಯುದ್ಧವನ್ನು ವರ್ಣಿಸುವ ಭಗವದ್ಗೀತೆಯನ್ನು ನೆನಪಿಸುತ್ತದೆ ಎನ್ನುತ್ತಾರೆ ಲೇಖಕರು.
ಮಹಾಭಾರತದ ಕುರುಕ್ಷೇತ್ರ ಯುದ್ದದ ಪ್ರಸಂಗವು ಕೂಡ ಒಂದಷ್ಟು ಬದಲಾವಣೆಗಳ ಹೊರತಾಗಿ ಗಮನಾರ್ಹವಾಗಿ ಗ್ರೀಕ್ ಕಾಲ್ಪನಿಕ ಪುರಾಣಗಳ ನಕಲಿನಂತೆ ಗೋಚರಿಸುತ್ತದೆ. ಇದು ಕಾಕತಾಳೀಯವೆ ಅಥವಾ ಭಾರತದ ಕಾಲ್ಪನಿಕ ಪುರಾಣಗಳು ಗ್ರೀಕ್ ಕತೆಗಳಿಂದ ಪ್ರಭಾವಿತವಾಗಿದ್ದವೆ ಎನ್ನುವ ಸಂಶಯ ಸಹಜವಾಗಿ ಮೂಡುತ್ತದೆ. ಸಾಮಾನ್ಯ ಮೂಲವನ್ನು ಕಂಡುಹಿಡಿಯಲು ಕಥೆಯ ಅಂಶಗಳು ಸಾಕಾಗದಿದ್ದರೆ, ಭಾವನೆಗಳು ಅದೇ ಕಥೆಯನ್ನು ಹೇಳುತ್ತವೆ. ಭಗವದ್ಗೀತೆಯು ಪ್ರಾಚೀನ ಭಾರತದಲ್ಲಿರುವಂತೆ ಪೂರ್ವ-ಶಾಸ್ತ್ರೀಯ ಗ್ರೀಕ್ ನಲ್ಲಿ ರಚಿತವಾಗಿರಬಹುದು. ಉದಾಹರಣೆಗೆ, ಅಧ್ಯಾಯ ೬ ರಲ್ಲಿ, ಕೃಷ್ಣನು ಅರ್ಜುನನಿಗೆ ಯೋಗಿ ಹೇಗೆ ಧ್ಯಾನ ಮಾಡಬೇಕುಂದು ವಿವರಿಸುತ್ತಾನೆ. ಆದರೆ ಆತನ ಭೋದನೆಯ ಮಿತಿ ಎಂದರೆ “ಎಲ್ಲ ವಿಷಯಗಳಲ್ಲಿ ಮಿತವಾಗಿರುಬೇಕು” ಎಂಬ ಪ್ರಾಚೀನ ಗ್ರೀಕ್ ತತ್ವವನ್ನು ಹೆಚ್ಚು ನಿರರ್ಗಳವಾಗಿ ವ್ಯಕ್ತಪಡಿಸಲು ಭಗವದ್ಗೀತೆ ವಿಫಲವಾಗಿದೆ. ಹೀಗೆ ಪ್ರಾಚೀನ ಗ್ರೀಕ್ ಸಾಹಿತ್ಯದೊಡನೆ ಭಾರತೀಯ ವೈದಿಕ ಸಾಹಿತ್ಯವನ್ನು ತುಲನೆ ಮಾಡುತ್ತಾ ˌ ಭಾರತೀಯ ವೈದಿಕ ಸಂಸ್ಕೃತಿಯು ವಿದೇಶದಿಂದ ಎರವಲು ಪಡೆದದ್ದು ಎನ್ನುತ್ತಾರೆ ಲೇಖಕರು.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಸಾಹತುಶಾಹಿ ಆಡಳಿತಕ್ಕೆ ಮೊದಲು, ಮಂಗೋಲಿಯಾದ ಬೌದ್ಧಧರ್ಮದಿಂದ ಹಿಡಿದು ಬಾಲಿಯ ಹಿಂದೂ ದೇವಾಲಯಗಳವರೆಗೆ ಏಷ್ಯಾದಾದ್ಯಂತ ಇಂಡಿಕ್ ಸಂಸ್ಕೃತಿ ಅಸ್ತಿತ್ವದಲ್ಲಿತ್ತು ಎನ್ನುವ ಸಂಗತಿ ತಿಳಿದಿದೆ. ಯುರೋಪಿಯನ್ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದ ಅಂತಿಮ ಮೂಲವಾದ ಶಾಸ್ತ್ರೀಯ ಗ್ರೀಕ್ ಧರ್ಮದ ಮೂಲವು ಭಾರತದಲ್ಲಿ ಅಗತ್ಯವಾಗಿಲ್ಲದಿದ್ದರೂ, ಇಂದು ಭಾರತದ ಜೀವಂತ ನಾಗರಿಕತೆಗೆ ಜಗತ್ತಿನ ಇತರ ಎಲ್ಲ ನಾಗರಿಕತೆಗಳಿಗಿಂತ ಹೆಚ್ಚು ಹತ್ತಿರವಿರುವ ಮೂಲದಲ್ಲಿದೆ ಎಂದು ಕಡಿಮೆ ಜನರಿಗೆ ತಿಳಿದಿದೆ. ಲೇಖಕರು ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವು ಇಡೀ ಪ್ರಾಚೀನ ಭಾರತೀಯ ನಾಗರಿಕತೆಗೆ ಅನ್ವಯವಾಗಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಲಿಪಿ ಮತ್ತು ಭಾಷೆಗಳ ಬೆಳವಣಿಗೆಗೆ ಮೊದಲು ಹಾಗು ಲೇಖಕರು ಪ್ರಾಸ್ತಾಪಿಸಿರುವ ಭಾರತೀಯ ಸ್ಥಾಪಿತ ವೈದಿಕ ನಾಗರಿಕತೆಗಿಂತ ಪೂರ್ವದಲ್ಲಿ ಭಾರತದಲ್ಲಿ ಸಿಂಧೂ ಕಣಿವೆಯ ನಾಗರಿಕತೆ ಅಸ್ತಿತ್ವದಲ್ಲಿರುವ ಕುರಿತು ಮತ್ತು ಅದು ಭಾರತೀಯ ಮೂಲ ನಾಗರಿಕತೆ ಎನ್ನುವ ಬಗ್ಗೆ ಲೇಖಕರ ಅಜ್ಞಾನ ಅಥವಾ ಸಿಮಿತ ಗ್ರಹಿಕೆ ಇಲ್ಲಿ ಪ್ರದರ್ಶನವಾಗಿದೆ.
ಭಾರತಕ್ಕೆ ಆರ್ಯ ವೈದಿಕ ಸಂಸ್ಕೃತಿ ಕಾಲಿಡುವ ಮೊದಲೆ ಇಲ್ಲೊಂದು ಭವ್ಯ ದ್ರಾವಿಡ ನಾಗರಿಕತೆ ಅಸ್ತಿತ್ವದಲ್ಲಿತ್ತು ಎನ್ನುವ ಕುರಿತು ಅನೇಕ ಪಾಶ್ಚಾತ್ಯ ಪಂಡಿತರಿಗೆ ತಿಳಿದ ಸಂಗತಿಯಾಗಿದೆ. ಭಾರತೀಯ ವೈದಿಕ ಸಂಸ್ಕೃತಿಯೇ ಇಲ್ಲಿನ ಅಂತಿಮ ನಾಗರಿಕತೆಯಲ್ಲ ಎನ್ನುವುದನ್ನು ಲೇಖಕರು ಪ್ರಸ್ತಾಪಿಸದೆ ಭಾರತದ ಪ್ರಾಚೀನ ಇತಿಹಾಸದ ಕುರಿತು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಆದರೆ ವೇದೋತ್ತರ ಕಾಲದ ವೈದಿಕ ಸಂಸ್ಕೃತಿ ಮಾತ್ರ ಪಾಶ್ಚಾತ್ಯ ಸಂಸ್ಕೃತಿಯ ನಕಲು ಎಂದಿರುವ ಲೇಖಕರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಈ ಅಂಕಣವನ್ನು ಬರೆದಿರುವ ಲೇಖಕರು ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ ಮತ್ತು ‘ಅನ್ಹೋಲಿ ಅಲೈಯನ್ಸ್: ಇನ್ಸೈಡ್ ದಿ ಆಕ್ಟಿವಿಸ್ಟ್ ಕ್ಯಾಂಪೇನ್ ಟು ಪ್ರೈ ಇಂಡಿಯಾ ಫ್ರಮ್ ದಿ ವೆಸ್ಟ್’ ಎಂಬ ಹೊಸ ಅಧ್ಯಯನದ ಲೇಖಕರಾಗಿದ್ದಾರೆ. ಅವರು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ತಮ್ಮ ಎಮ್ ಎಸ್ ಪದವಿ (ಗಣಿತ ವಿಜ್ಞಾನ) ಮತ್ತು ಪಿ ಎಚ್ಡಿ ಪದವಿ (ಸಮಾಜಶಾಸ್ತ್ರ) ಗಳಿಸಿದ್ದಾರೆ.
ಡಾ. ಜೆ ಎಸ್ ಪಾಟೀಲ