ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾತ್ಮಗಾಂಧೀಜಿಯವರು ಹುತಾತ್ಮರಾದ ದಿನವನ್ನು ನಾವು ಹುತಾತ್ಮರ ದಿನವಾಗಿ ಆಚರಿಸುತ್ತಿದ್ದೇವೆ. ಈ ಮೂಲಕ ಸ್ವಾತಂತ್ರ್ಯಹೋರಾಟಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಾವಿರಾರು ದೇಶಭಕ್ತರಿಗೆ ಗೌರವವನ್ನು ಅರ್ಪಿಸುತ್ತಿದ್ದೇವೆ. ಇವರಲ್ಲಿ ಬಹಳಷ್ಟು ಹುತಾತ್ಮರು ಅನಾಮಿಕರಾಗಿಯೇ ಉಳಿದಿದ್ದಾರೆ. ಅವರ ನಿಸ್ವಾರ್ಥವಾದ ದೇಶಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು, ಎಂದವರು ಹೇಳಿದ್ದಾರೆ.
“ಮಹಾತ್ಮ ಗಾಂಧೀಜಿಯವರು ಯಾರನ್ನೂ ಶತ್ರುಗಳು ತಿಳಿದು ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯವರನ್ನು ಹತ್ಯೆಮಾಡಲಿಲ್ಲ. ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೋಡ್ಸೆ ಎಂಬ ದೇಶದ್ರೋಹಿ ಗಾಂಧೀಜಿಯವರನ್ನು ಹತ್ಯೆಮಾಡಿದ್ದ ಎಂಬುದನ್ನು ನಾವು ಮರೆಯಬಾರದು. ಗಾಂಧೀಜಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸ್ವಾತಂತ್ರ್ಯಹೋರಾಟವನ್ನು ಮುನ್ನಡೆಸಿದ್ದರೂ ಅಂತರಂಗದಲ್ಲಿ ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆ ಎಂಬ ಪಂಚ ಸೂತ್ರಗಳ ಮೇಲೆ ತಮ್ಮ ಜೀವನ ಪಯಣ ನಡೆಸಿದ ಗಾಂಧೀಜಿ ಮಹಾನ್ ಸಮಾಜ ಪರಿವರ್ತಕ,”
ಗಾಂಧೀಜಿ ಜೀವನ ಮತ್ತು ಸಾಧನೆ ಹೇಗೆ ನಮ್ಮ ಆದರ್ಶಪ್ರಾಯವೋ, ಅದೇ ರೀತಿ ಅವರ ಸಾವು ಕೂಡಾ ನಮಗೆ ಪಾಠವಾಗಿದೆ. ಗಾಂಧೀಜಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ, ಅಸ್ಪೃರ್ಶತೆಯ ನಿವಾರಣೆಗಾಗಿ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಮಾತ್ರ ಹೋರಾಡಲಿಲ್ಲ. ಅವರು ಬಹುಮುಖ್ಯವಾದ ಕೋಮುಸಾಮರಸ್ಯಕ್ಕಾಗಿ ಕೂಡಾ ತನ್ನ ಕೊನೆ ಉಸಿರಿರುವ ತನಕ ಹೋರಾಡಿದರು. ಈ ತನ್ನ ಹೋರಾಟಕ್ಕಾಗಿಯೇ ತನ್ನ ಪ್ರಾಣವನ್ನು ಕಳೆದುಕೊಂಡರು.
ಆದರೆ ಗಾಂಧೀಜಿ ಅವರು ಯಾವ ಉದ್ದೇಶಕ್ಕಾಗಿ ಹೋರಾಡಿದರೋ, ಆ ಕೋಮುಸೌಹಾರ್ದತೆಯ ಸ್ಥಾಪನೆಯ ಕಾರ್ಯ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.
ಗಾಂಧೀಜಿಯವರ ಚಿಂತನೆಗಳು ಒಂದೊಂದಾಗಿ ನಮ್ಮ ಕಣ್ಣಮುಂದೆಯೇ ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. ಧರ್ಮಧರ್ಮಗಳ ನಡುವೆ ವೈಮನಸ್ಸು ಹುಟ್ಟಿಸಿ, ಗಲಭೆ ಸೃಷ್ಟಿಸಿ ಅದರ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ.
ಸ್ವಾತಂತ್ರ್ಯ ಹೋರಾಟದ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆಗೊಳಿಸಿ ನಮಗೆ ರಾಜಕೀಯ ಸ್ವಾತಂತ್ರ್ಯವನ್ನು ನಮಗೆ ಗಳಿಸಿಕೊಟ್ಟರು. ಈಗ ನಾವು ನವವಸಾಹತುಷಾಹಿಗಳ ವಿರುದ್ಧ ಹೋರಾಡಿ ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯಲು ಇನ್ನೊಂದು ಸ್ವಾತಂತ್ರ್ಯಹೋರಾಟ ನಡೆಸಬೇಕಾಗಿದೆ.
ಇಂದಿನ ಭಾರತದಲ್ಲಿ ಅತ್ಯಂತ ಶೋಷಿತ ಸಮುದಾಯಗಳಾದ ರೈತರು,ಕಾರ್ಮಿಕರು, ಮಹಿಳೆಯರು,ದಲಿತರು ಮಾತ್ರವಲ್ಲ ಈ ದೇಶದ ಯಾವ ಸಾಮಾನ್ಯ ಮನುಷ್ಯ ಕೂಡಾ ಸುರಕ್ಷಿತವಾಗಿಲ್ಲ. ಈ ಅನ್ಯಾಯ,ಶೋಷಣೆ,ಅವಮಾನದ ವಿರುದ್ದ ನಾವು ದನಿ ಎತ್ತದೆ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ಇಂದು ಕೃಷಿ ವಿರೋಧಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಇದು ಹಿಂಸೆಯನ್ನು ಕೂಡಾ ಅಹಿಂಸೆಯ ಮೂಲಕ ಹೋರಾಡಿ ಗೆದ್ದ ಮಹಾತ್ಮಗಾಂಧೀಜಿ ಅವರಿಗೆ ತೋರುವ ಅಗೌರವವಾಗಿದೆ, ಎಂದಿದ್ದಾರೆ.