ದೆಹಲಿಯ ಜಂತರ್ ಮಂತರ್‌ನಲ್ಲಿ ಇಂಡಿಯಾ ಫೌಂಡೇಷನ್ ಸಂಸ್ಥೆಯ ಅಧೀನದಲ್ಲಿ ವಸಾಹತುಶಾಹಿ ಕಾನೂನುಗಳನ್ನು (colonial era laws) ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಿಜೆಪಿ ಮುಖಂಡ ಸೇರಿದಂತೆ ಆರು ಮಂದಿಯನ್ನು ದೆಹಲಿ ಪೊಲೀಸರು ಆಗಸ್ಟ್ 10ರಂದು ಬಂಧಿಸಿದ್ದಾರೆ. ಭಾಜಪದ ಸ್ಥಳೀಯ ಮುಖಂಡ ಅಶ್ವಿನಿ ಉಫಾಧ್ಯಾಯ ಹಾಗೂ ಇತರೆ ಐವರು ಕಾರ್ಯತು ಬಂಧನಕ್ಕೊಳಾಗದವರು.
ಅಶ್ವಿನಿ ಉಪಾಧ್ಯಾಯ ವೃತ್ತಿಯಲ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ. ಕೆಲ ತಿಂಗಳ ಹಿಂದೆವರೆಗೂ ದೆಹಲಿ ಬಿಜೆಪಿಯ ವಾಕ್ತರನಾಗಿಯೂ ಇದ್ದರು. ಆಗಸ್ಟ್ 8ರಂದು ಜಂತರ್ ಮಂತರ್‌ನಲ್ಲಿ ನಡೆದ ʻಭಾರತ್ ಜೋಡೋ ಮೂವ್ಮೆಂಟ್ʼ (ಭಾರತವನ್ನು ಒಟ್ಟುಗೂಡಿಸಿ ಚಳವಳಿ) ಕಾರ್ಯಕ್ರದಲ್ಲಿ ಮುಸ್ಲಿಂ ಧರ್ಮ ಅವಹೇಳನೆ ಮತ್ತು ವಿರೋಧಿ ಘೋಷಣೆ ಕೂಗಿರುವ ಹಿನ್ನೆಲೆಯಲ್ಲಿ ಉಪಾಧ್ಯಯನನ್ನು ಬಂಧಿಸಲಾಗಿದೆ. ಇವರ ಜೊತೆಗೆ ಕಾರ್ಯಕ್ರಮದ ಆಯೋಜಕರಾಗಿರುವ ಸೇವ್ ಇಂಡಿಯಾ ಫೌಂಡೇಷನ್ ಸಂಸ್ಥೆಯ ನಿರ್ದೇಶಕನೂ ಆಗಿರುವ ಪ್ರೀತ್ ಸಿಂಗ್‌ರನ್ನು ಪ್ರಕರಣದ ಪ್ರಮುಖ ಆರೋಪಿಯೆಂದು ಪೊಲೀಸರು ಬಂಧಿಸಿದ್ದಾರೆ.

ಇವರ ಹೊರತಾಗಿ ಹಿಂದೂ ಸಂಘಟನೆಯಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ದೀಪಕ್ ಸಿಂಗ್, ಸುದರ್ಶನ್ ವಾಹಿನಿ ಎಂಬ ಸಂಘಟನೆಯ ಸದಸ್ಯ ವಿನೋದ್ ಶರ್ಮಾ, ಹಾಗೂ ದೀಪಕ್, ವಿನೀತ್ ಕ್ರಾಂತಿ ಎಂಬವರನ್ನೂ ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಅಲ್ಲದೆ ಇದೇ ವಿಚಾರವಾಗಿ ಜೆಎನ್‌ಯೂ ಹಿಂಸಾಚಾರದಲ್ಲಿ ಗುರುತಿಸಿಕೊಂಡಿದ್ದ ಹಿಂದುತ್ವ ಸಂಘಟನೆಯ ಕಾರ್ಯಕರ್ತ ಪಿಂಕಿ ಭಯ್ಯಾ ಹಾಗೂ ಉತ್ತಮ್ ಮಲ್ಲಿಕ್ ಎಂಬವರು ತಲೆ ಮರೆಸಿಕೊಂಡಿದ್ದಾರೆ. ಇವರ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ʻʻಕಾರ್ಯಕ್ರಮ ಆಯೋಜಿಸಿದ್ದವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇದರ ಹೊರತಾಗಿಯೂ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಆದರೆ ಇನ್ನೂ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಕೋಮು ಸಾಮರಸ್ಯ ಕದಡುವ ಘೋಷಣೆ ಕೂಗಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದೃಶ್ಯಾವಳಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆʼʼ ಎಂದು ದಿ ಪ್ರಿಂಟ್‌ಗೆ ಹೇಳಿಕೆ ನೀಡಿದ್ದಾರೆ.
ಆದರೆ ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಅಶ್ವಿನಿ ಉಪಾಧ್ಯಾಯ ಆ ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ವ್ಯಕ್ತಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ. ಆ ದೃಶ್ಯದಲ್ಲಿರುವ ಒಬ್ಬರೂ ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಈ ಹಿಂದೆ ಎಂದೂ ಅವರನ್ನು ನಾನು ನೋಡಿಲ್ಲ. ಈ ಕಾರ್ಯಕ್ರಮಕ್ಕೆ ಅವರ್ಯಾರನ್ನೂ ನಾವು ಆಹ್ವಾನಿಸಿಲ್ಲ. ನಾನು ಕಾರ್ಯಕ್ರಮದಲ್ಲಿ ಇದ್ದಷ್ಟು ಹೊತ್ತು ಈ ರೀತಿಯಾದ ಘೋಷಣೆ ಕೂಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ತುರ್ತು ಕೆಲಸವಿದ್ದ ಕಾರಣ ನಾನು ಕಾರ್ಯಕ್ರಮದಿಂದ ಸ್ವಲ್ಪ ಬೇಗ ಹೊರಟು ಬಂದಿದ್ದೇನೆ. ಆ ಬಳಿಕ ಈ ಘಟನೆ ನಡೆದಿದೆ. ಇದು ತನ್ನ ವಿರುದ್ಧ ಮಾಡಲಾದ ಷಡ್ಯಂತ್ರ ಎಂದು ಉಪಾಧ್ಯಾಯ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಏನಿದು ಪ್ರಕರಣ.!?
ಆಗಸ್ಟ್ 8ರಂದು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ವಿಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ʻʻಹಿಂದೂಸ್ತಾನ್ ಮೆ ರೆಹೆನಾ ಹೋಗಾ ಥೋ ಜೈ ಶ್ರೀರಾಮ್ ಕೆಹೆನಾ ಹೋಗಾʼʼ (ಭಾರತದಲ್ಲಿ ಬದುಕ ಬೇಕಾದರೆ ಜೈ ಶ್ರೀರಾಮ್ ಎಂದು ಹೇಳಬೇಕು) ಹಾಗೂ ಜೈ ಶ್ರೀ ರಾಮ್ ಎಂದು ಹೇಳದ ಮುಸ್ಲಿಮರನ್ನು ಹೊಡೆದು ಸಾಯಿಸುತ್ತೇವೆʼʼ ಎಂಬ ಘೋಷಣೆಗಳ ಉಲ್ಲೇಖವಿತ್ತು ಎಂದು ದಿ ಪ್ರಿಂಟ್ ವರದಿ ಬಿತ್ತರಿಸಿದೆ. ಇನ್ನು ಈ ಕಾರ್ಯಕ್ರಮಕ್ಕೆ ಕೊರೋನಾ ಹಿನ್ನೆಲೆಯಲ್ಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಿದ್ದರೂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದೇ ಕಾರಣಕ್ಕೆ ಆರೋಪಿಗಳ ಮೇಲೆ IPC ಸೆಕ್ಷನ್ 153A (ದ್ವೇಷ ಹರಡುವಿಕೆ) IPC 188 (ಪೊಲೀಸರ ಅನುಮತಿ ಪಡಯದೆ ಇರುವುದು/ಅನುಮತಿ ಇಲ್ಲದಿದ್ದರೂ ಕಾರ್ಯಕ್ರಮ ನಡೆಸಿದ್ದು) ಜೊತೆಗೆ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿರುವ ಹಿನ್ನೆಲೆ ವಿಪ್ಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 51ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.