ಒಬ್ಬ ವ್ಯಕ್ತಿಯು ಯಾವ ಕಾರಣಕ್ಕಾಗಿ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳಬಹುದು ಎಂಬುದನ್ನು ಪ್ರಭುತ್ವ ನಿರ್ಧರಿಸಬೇಕೇ? ಇಂತಹದೊಂದು ಪ್ರಶ್ನೆ ಸದ್ಯ ಕರ್ನಾಟಕದ ಜನರನ್ನು ಕಾಡುತ್ತಿದೆ. ಸಂಘ ಪರಿವಾರದ ಸೇವಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕಾಗಿ ಅವರ ತಂದೆ ಮಾಜಿ ಸಿಎಂ ಹಾಗೂ ಸಮಾಜವಾದಿ ನಾಯಕ ಎಸ್.ಆರ್ ಬೊಮ್ಮಾಯಿ ನಿಲುವುಗಳಿಗೆ ಮಗನೇ ಎಳ್ಳು ನೀರು ಬಿಡುತ್ತಿದ್ದಾರೆ.
ಮತಾಂತರ ನಿಷೇಧ ಮಸೂದೆ ಎಂಬ ಮನುಷ್ಯ ವಿರೋಧಿ ನಿಲುವಿನ ಎದುರು ಬೊಮ್ಮಾಯಿ ಬಕ್ಕಬಾರಲು ಮಲಗಿ ಬಿಟ್ಟಂತೆ ಕಾಣುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದ್ದು, ಅಂಬೇಡ್ಕರ್ ಚಿಂತನೆಗಳನ್ನು ಧ್ವಂಸ ಮಾಡುವ ಹುನ್ನಾರವೂ ಆಗಿದೆ.
ಅಂಬೇಡ್ಕರ್ ಅವರು 1956 ರಲ್ಲಿ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಅವರು ತಮ್ಮ ಪರಿವರ್ತನೆಯ ಬಗ್ಗೆ ಹಲವು ದಶಕಗಳ ಕಾಲ ಯೋಚಿಸಿ ತಮ್ಮ ನಿರ್ಧಾರ ತಗೆದುಕೊಂಡಿದ್ದರು. 1930 ರ ದಶಕದಯೇ ಹಿಂದೂ ಧರ್ಮ ತೊರೆಯುವ ಸಂಕಲ್ಪವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು. 1935 ರಲ್ಲಿ ಮುಂಬೈನಲ್ಲಿ ನಡೆದ ಮಹರ್ ಸಮ್ಮೇಳನದಲ್ಲಿ ಅವರು ‘ಮೋಕ್ಷಕ್ಕೆ ಯಾವ ಮಾರ್ಗ’ ಎಂಬ ತಮ್ಮ ಪ್ರಸಿದ್ಧ ಭಾಷಣ ಮಾಡಿದರು. ಆ ಸಮಾವೇಶದಲ್ಲಿ ತಾವು ಮತ್ತು ಅವರ ಜಾತಿಯವರು ಬೇರೆ ಧರ್ಮಕ್ಕೆ ಏಕೆ ಮತಾಂತರಗೊಳ್ಳಬೇಕು ಎಂದು ಸುದೀರ್ಘವಾಗಿ ಮಾತನಾಡಿದ್ದನ್ನು ಗಮನಿಸಬಹುದು.
ಅಂಬೇಡ್ಕರ್ ಅವರು ತಮ್ಮ ನಿಜವಾದ ಮತಾಂತರಕ್ಕೆ ಎರಡು ದಶಕಗಳ ಹಿಂದೆಯೇ ಈ ಭಾಷಣವನ್ನು ಮಾಡಿದ್ದರೂ, ಈ ಭಾಷಣದ ವಿಷಯಗಳು ಭಾರತೀಯ ಜನತಾ ಪಕ್ಷ ಆಡಳಿತವಿರುವ ಕೆಲವು ರಾಜ್ಯಗಳು ತಂದಿರುವ ‘ಮತಾಂತರ ವಿರೋಧಿ ಕಾನೂನು’ಗಳನ್ನು ವಿಶ್ಲೇಷಿಸಲು ಉಪಯುಕ್ತವಾಗಿವೆ.
ಏಕೆ ಮತಾಂತರ? ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಒಬ್ಬ ವ್ಯಕ್ತಿಯು ತಾನು ಹುಟ್ಟಿದ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಲು ಎರಡು ಕಾರಣಗಳನ್ನು ಪ್ರಸ್ತಾಪಿಸುತ್ತಾರೆ. ಅದು ಭೌತಿಕ ಲಾಭಕ್ಕಾಗಿ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ. ಅಂಬೇಡ್ಕರರಿಗೆ ಈ ಎರಡೂ ಕಾರಣಗಳು ಸಮಾನವಾಗಿದ್ದವು. ಕೆಲವು ವ್ಯಕ್ತಿಗಳು ಭೌತಿಕ ಲಾಭಕ್ಕಾಗಿ ಮತಾಂತರದ ಕಲ್ಪನೆಯನ್ನು ಅಪಹಾಸ್ಯ ಮಾಡುತ್ತಾರೆ ಮತ್ತು ನಗುತ್ತಾರೆ. ಅಂತಹ ವ್ಯಕ್ತಿಗಳನ್ನು ಮೂರ್ಖರೆಂದು ಕರೆಯಲು ನಾನು ಹಿಂಜರಿಯುವುದಿಲ್ಲ ಎಂದು ಅಂಬೇಡ್ಕರ್ ನೇರವಾಗಿಯೇ ಹೇಳಿದ್ದರು.
ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆಯಲು ನಿರ್ಧರಿಸಿದಾಗ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದು ಮುಂಚಿತ ತೀರ್ಮಾನವಾಗಿರಲಿಲ್ಲ. ಅವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಮೊದಲು ಪರಿಗಣನೆಗೆ ತೆಗೆದುಕೊಂಡರು. ನಂತರದಲ್ಲಿ ಸಿಖ್ ಧರ್ಮಕ್ಕೆ ಮತಾಂತರಗೊಳ್ಳುವ ಯೋಚನೆ ಕೂಡ ಮಾಡಿದರು. ಅಂತಿಮವಾಗಿ ಬೌದ್ಧಧರ್ಮವು ತನ್ನ ತತ್ವಗಳು ಮತ್ತು ತತ್ತ್ವಶಾಸ್ತ್ರದೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಮತ್ತು ಬುದ್ಧನಿಂದ ಸ್ಥಾಪಿಸಲ್ಪಟ್ಟ ಈ ಪ್ರಾಚೀನ ಧರ್ಮವು ತನ್ನ ಜನರನ್ನು (ದಲಿತರನ್ನು) ವಿಮೋಚನೆಗೊಳಿಸಲು ಅತ್ಯುತ್ತಮವಾದ ವೇದಿಕೆಯಾಗಿದೆ ಎಂದು ಅವರು ಅರಿತುಕೊಂಡರು.
“ನೀವು ನಿಮ್ಮ ಭಾವನೆಯಿಂದ ದೂರ ಹೋಗಬಾರದು. ನಾನು ಹೇಳುವುದರಿಂದ ಮಾತ್ರ ನನ್ನನ್ನು ಅನುಸರಿಸಕೂಡದು. ಅದು ನಿಮ್ಮ ಆತ್ಮಸಾಕ್ಷಿಗೆ ಒಪ್ಪಿದರೆ ಮಾತ್ರ ನೀವು ಒಪ್ಪಿಗೆ ನೀಡಬೇಕು” ಎಂದು ಕೂಡ ಅಂಬೇಡ್ಕರ್ ಹೇಳಿದ್ದರು. ಅಂತಿಮವಾಗಿ ಅವರು 1956 ರ ಅಕ್ಟೋಬರ್ 14 ರಂದು ನಾಗಪುರದಲ್ಲಿ ಬೌದ್ಧ ಧರ್ಮದ ದೀಕ್ಷೆ ತೆಗೆದುಕೊಂಡಾಗ ಅವರೊಂದಿಗೆ ಲಕ್ಷಾಂತರ ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
ಈ ವಿಷಯದಲ್ಲಿ ಪ್ರಭುತ್ವ ಮಧ್ಯಪ್ರವೇಶಿಸದೆ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳುವ ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿ ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಸಂವಿಧಾನದಲ್ಲಿ ಅವರು ಅಳವಡಿಸಿದ 25 ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ.
ಮತಾಂತರ ನಿಷೇಧ ಕಾಯ್ದೆ ಕುರಿತು ಬಂಡಾಯ ಸಾಹಿತಿ ಮತ್ತು ಕವಿ ಬಸವರಾಜ ಸೂಳಿಭಾವಿ ಅವರು ʼಪ್ರತಿಧ್ವನಿʼ ಯೊಂದಿಗೆ ಮಾತನಾಡಿ, ʼಅಂಬೇಡ್ಕರ್ ಯಾವುದೇ ಬಲವಂತ ಅಥವಾ ಆಮಿಷಕ್ಕಾಗಿ ಬೌದ್ಧ ಧರ್ಮ ಸೇರಲಿಲ್ಲ. ತಮ್ಮ ಆತ್ಮ ಗೌರವ ಮಾತ್ತು ಸ್ವಾಭಿಮಾನ ಉಳಿಸಿಕೊಳ್ಳಲು, ತಮಗೆ ಅವಮಾನ ಮಾಡಿದ ಹಿಂದೂ ಧರ್ಮ ತೊರೆದು ಸಮಾನತೆ ಸಾರುವ ಬೌದ್ಧ ಧರ್ಮ ಸ್ವೀಕರಿಸಿದರು. ಈಗ ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ ಬೊಮ್ಮಾಯಿ ಸರ್ಕಾರ ಮತಾಂತರ ನಿಷೇಧ ಕಾಯಿದೆ ತರಲು ಹೊರಟಿರುವುದು ದಲಿತರು ಮಾತ್ತು ಅಲ್ಪಸಂಖ್ಯಾತರನ್ನು ದೌರ್ಜನ್ಯಕ್ಕೆ ಈಡು ಮಾಡುವ ಉದ್ದೇಶ ಹೊಂದಿದೆ. ರಾಜಕೀಯ ಲಾಭಕ್ಕಾಗಿ ಮೇಲ್ವರ್ಗದ, ಮೇಲ್ಜಾತಿಯ ಹಿಂದೂಗಳನ್ನು ಓಲೈಸಲು ಈ ಕುತಂತ್ರ ನಡೆದಿದೆʼ ಎಂದು ವಿಶ್ಲೇಷಿದರು.
ಕರ್ನಾಟಕ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಮಸೂದೆ ಉತ್ತರಪ್ರದೇಶದ ಜೀವವಿರೋಧಿ ಯೋಗಿ ಆದಿತ್ಯನಾಥ್ ಜಾರಿಗೆ ತಂದಿರುವ ಕಾಯಿದೆಯ ಕಾಪಿಯಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕವನ್ನು ಕಾಪಿ ಮಾಡಬೇಕಾದ ಉತ್ತರಪ್ರದೇಶದಿಂದ ನಮ್ಮ ಸರ್ಕಾರ ಪಾಠ ಕಲಿಯುವ ದರ್ದು ಏನಿತ್ತು?
“ನಾನು ಹಿಂದೂವಾಗಿ ಹುಟ್ಟಿದ್ದೇನೆ… ನಾನು ಹಿಂದೂವಾಗಿ ಸಾಯುವುದಿಲ್ಲ” ಎಂದು ಅಂಬೇಡ್ಕರ್ ಘೋಷಿಸಿದಾಗ, ಹಿಂದೂ ಧರ್ಮವನ್ನು ತೊರೆಯುವ ಅವರ ನಿರ್ಧಾರಕ್ಕಾಗಿ ಅವರನ್ನು ಟೀಕಿಸಲು ಅನೇಕ ವಿರೋಧಿಗಳು ಥಟ್ಟನೆ ಮುಂದೆ ಬಂದರು. ಅವರಲ್ಲಿ ಪ್ರಮುಖರು ಗಾಂಧಿ. ಗಾಂಧಿಯವರು 1936ರಲ್ಲಿ ಅವರ ಅಬಿಪ್ರಾಯ ಹೀಗಿತ್ತು; “ಈ ಹರಿಜನರಿಗೆ ಮನಸ್ಸು ಇಲ್ಲ, ಬುದ್ಧಿ ಇಲ್ಲ, ಒಬ್ಬನೇ ಒಬ್ಬ ವ್ಯಕ್ತಿ ಎಲ್ಲ ಹರಿಜನರನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಮಾತನಾಡುವುದು ಅಸಂಬದ್ಧ. ಅವೆಲ್ಲವೂ ಒಂದು ರಚನೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸಬಹುದಾದ ಇಟ್ಟಿಗೆಗಳೇ?” ಎಂದು ಪ್ರಶ್ನಿಸಿದ್ದಾರೆ.
ಗಾಂಧಿ ಮುಂದೆ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡರು. ಆದರೆ 1936ರ ಗಾಂಧಿ ನಿಲುವನ್ನು ಹೈಲೈಟ್ ಮಾಡಿ, ಗಾಂಧಿ ಕೂಡ ಮತಾಂತರ ವಿರೋಧಿಸಿದ್ದರು ಎಂದು ಸಚಿವ ಸುನಿಲ್‌ಕುಮಾರ್ ಹೇಳುತ್ತಾರೆ! ಕರಾವಳಿ, ಮಲೆನಾಡಿನಲ್ಲಿ ದತ್ತಪೀಠ ಎಂಬ ಕಪೋಕಲ್ಪಿತ ವಿವಾದ ಹುಟ್ಟು ಹಾಕಿ ಅಲ್ಪಸಂಖ್ಯಾತರ ದೌರ್ಜನ್ಯ ನಡೆಸುವಾಗ ಇಂತವರಿಗೆ ಗಾಂಧಿಯ ಅಹಿಂಸಾ ಸಿದ್ಧಾಂತ ನೆನಪಾಗಲಿಲ್ಲ ಎಂಬುದು ವಿಪರ್ಯಾಸ.
ಮತಾಂತರದ ವಿಷಯದಲ್ಲಿ ಎಲ್ಲರೂ, ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಶೂದ್ರರು ಅಂಬೇಡ್ಕರ್ ಪ್ರತಿಪಾದಿಸಿದ ನಿಲುವುಗಳನ್ನು ಮುನ್ನೆಲೆಗೆ ತರಬೇಕು. ಅದು ಸಂವಿಧಾನದ ಆಶವನ್ನು ಎತ್ತಿ ಹಿಡಿಯುವ ಕ್ರಮವೂ ಆಗಿದೆ.