ಈಗಾಗಲೇ ಬಿಜೆಪಿ ಆಡಳಿತ ಇರುವ ಕೆಲವು ರಾಜ್ಯಗಳಲ್ಲಿ ಮತಾಂತರ ಮಸೂದೆಯನ್ನು ಜಾರಿಗೆ ತರಲಾಗಿದೆ. ಈಗ ಕರ್ನಾಟಕದಲ್ಲೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿ ಉತ್ಸುಕವಾಗಿದ್ದು,
ಕರ್ನಾಟಕದಲ್ಲಿ ಈ ಮಸೂದೆ ಉಳಿದ ಮತಾಂತರ ನಿಷೇಧ ಕಾಯ್ದೆಗಿಂತ ಅಪಾಯಕಾರಿಯಾಗಿದೆ ಎನ್ನುವ ಚರ್ಚೆ ಆರಂಭವಾಗಿದೆ. ಈ ಕುರಿತು ʼದಿ ಕ್ವಿಂಟ್ʼ ವರದಿಯ ಭಾವಾನುವಾದ ಇಲ್ಲಿದೆ.
ಬಸವರಾಜ ಬೊಮ್ಮಾಯಿ ಸಂಪುಟದ ಅನುಮೋದನೆಯ ನಂತರ ʼಕರ್ನಾಟಕ ಧರ್ಮ ಸ್ವಾತಂತ್ರ್ಯ ಮಸೂದೆ -2021’ ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಲಾಗಿದೆ. ಈ ಮಸೂದೆಯು, ತಪ್ಪು ನಿರೂಪಣೆ, ಅನಗತ್ಯ ಪ್ರಭಾವ, ಬಲವಂತ ಆಮಿಷ ಅಥವಾ ಯಾವುದೇ ಮೋಸದ ವಿಧಾನಗಳು ಅಥವಾ ಮದುವೆಯ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಕಾನೂನು ಬಾಹಿರವಾಗಿ ಮತಾಂತರಗೊಳ್ಳುವುದನ್ನು ನಿಷೇಧಿಸುತ್ತದೆ ಎನ್ನುವ ಅಂಶ ಬಹಿರಂಗವಾಗಿದೆ.
ಅದರಲ್ಲಿರುವ ವಿವಾಹ-ಸಂಬಂಧಿತ ನಿಬಂಧನೆಗಳು ಯುಪಿ, ಎಂಪಿ ಮತ್ತು ಗುಜರಾತ್‌ನಲ್ಲಿ ಪರಿಚಯಿಸಿದಂತೆಯೇ ಇವೆ. ಗುಜರಾತ್‌ನಲ್ಲಿ ವಿವಾಹ ಸಂಬಂಧಿತ ನಿಬಂಧನೆಗಳಿಗೆ ತಡೆ ನೀಡುವಾಗ ಗುಜರಾತ್ ಹೈಕೋರ್ಟ್ ಕೇಳಿದ ಪ್ರಶ್ನೆಗಳನ್ನು ಪರಿಹರಿಸಲು ಕರ್ನಾಟಕದ ಮಸೂದೆಯಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ.
ಉಳಿದ ರಾಜ್ಯಗಳಲ್ಲಿ ಮತಾಂತರ ವಿರೋಧಿ ಕಾನೂನನ್ನು ಪರಿಚಯಿಸುವುದರ ಹಿಂದೆ ‘ಲವ್ ಜಿಹಾದ್’ ಎಂಬ ಆಧಾರರಹಿತ ಗುಮ್ಮ ಇತ್ತು. ನಮ್ಮ ರಾಜ್ಯದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರದ ಆರೋಪಗಳ ಮೇಲೆ ಮಸೂದೆ ಕೇಂದ್ರೀಕೃತವಾಗಿದೆ. ಈ ತಥಾಕಥಿತ ‘ಧರ್ಮದ ಸ್ವಾತಂತ್ರ್ಯ’ ಕಾನೂನುಗಳ ವಿವಾಹ-ಸಂಬಂಧಿತ ನಿಬಂಧನೆಗಳ ಕಾನೂನುಬದ್ಧ ಸಿಂಧುತ್ವವು ಅತ್ಯಂತ ಪ್ರಶ್ನಾರ್ಹವಾಗಿದೆ. ಕರ್ನಾಟಕದ ಪ್ರಸ್ತಾವಿತ ಹೊಸ ಕಾನೂನು ವಿವಾಹ ನಿಬಂಧನೆಗಳ ವಿಷಯದಲ್ಲಿ ಅವಾಸ್ತವಿಕ ಅಂಶಗಳನ್ನು ಒಳಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಲಾದ ಇತರ ಮತಾಂತರ-ವಿರೋಧಿ ಕಾನೂನುಗಳಂತೆ ಕರ್ನಾಟಕದ ಪ್ರಸ್ತಾವಿತ ಕಾನೂನಿನ ಪ್ರಕಾರ, ಮತಾಂತರಗೊಳ್ಳಲು ಬಯಸುವವರು ಜಿಲ್ಲಾಧಿಕಾರಿಗಳಿಗೆ 60 ದಿನಗಳ ಪೂರ್ವ ಸೂಚನೆಯನ್ನು ನೀಡಬೇಕಿದೆ.
ಇದು ಇತರ ಕಾನೂನುಗಳಂತೆಯೇ ಇದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಹಿಮಾಚಲ ಪ್ರದೇಶ ಹೈಕೋರ್ಟ್ 2012 ರಲ್ಲಿ ಈ ನಿಬಂಧನೆಯನ್ನು ತಡೆಹಿಡಿದಿದೆ. 2017 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಖಾಸಗಿತನದ ತೀರ್ಪು ಕೂಡ ಇಂತಹ ನಿಬಂಧನೆಯನ್ನು ವಿರೋಧಿಸುತ್ತದೆ. 1967 ರಲ್ಲಿ ಒರಿಸ್ಸಾದಲ್ಲಿ ಮತ್ತು 1968 ರಲ್ಲಿ ಮಧ್ಯಪ್ರದೇಶದಲ್ಲಿ ಜಾರಿಗೆ ಬಂದ ಮೊದಲ ಎರಡು ಮತಾಂತರ ವಿರೋಧಿ ಕಾನೂನುಗಳಲ್ಲೂ ʼಆಮಿಷ’ದಿಂದ ಮತಾಂತರದ ಪರಿಕಲ್ಪನೆಯು ಅಸ್ತಿತ್ವದಲ್ಲಿದೆ.

ಆ ರಾಜ್ಯಗಳಲ್ಲಿಯೂ ಕ್ರಿಶ್ಚಿಯನ್ ಮಿಷನರಿಗಳ ಮತಾಂತರದ ಸುತ್ತಲಿನ ಉನ್ಮಾದವು ಕಾನೂನುಗಳ ಹಿಂದಿನ ಪ್ರೇರಕ ಶಕ್ತಿಯಾಗಿತ್ತು.
‘ಆಮಿಷ/ಪ್ರಚೋದನೆ’ಯನ್ನು ಆಧರಿಸಿದ ಮತಾಂತರವನ್ನು ಕಾನೂನು ಬಾಹಿರಎಂದು ನಿರ್ಧರಿಸುವುದು ಮೂಲಭೂತವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ಬಾಧಿಸುತ್ತದೆ. ಉತ್ತಮ ಬದುಕು ಸಿಗುತ್ತದೆ ಎಂಬ ನಂಬಿಕೆಯಿಂದ ಕ್ರಿಶ್ಚಿಯನ್ ಧರ್ಮ ಅಥವಾ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದನ್ನು ನಿಭಾಯಿಸಲು ಉದ್ದೇಶಿಸಲಾಗಿದೆ.
ಡಾ ಬಿಆರ್ ಅಂಬೇಡ್ಕರ್ ಅವರು ಅಂತಿಮವಾಗಿ 1956 ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು ಸುಮಾರು 3 ಲಕ್ಷ ಇತರ ದಲಿತರೊಂದಿಗೆ ಈ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದನ್ನು ಗಮನಿಸಬಹುದು.
ಕೆಲವು ವ್ಯಕ್ತಿಗಳು ಭೌತಿಕ ಲಾಭಕ್ಕಾಗಿ ಮತಾಂತರದ ಕಲ್ಪನೆಯನ್ನು ಅಪಹಾಸ್ಯ ಮಾಡುತ್ತಾರೆ ಮತ್ತು ನಗುತ್ತಾರೆ. ಅಂತಹ ವ್ಯಕ್ತಿಗಳನ್ನು ಮೂರ್ಖರೆಂದು ಕರೆಯಲು ನಾನು ಹಿಂಜರಿಯುವುದಿಲ್ಲ, ” ಎಂದು ಅವರು ಅಂಬೇಡ್ಕರ್ ಬರೆದಿದ್ದಾರೆ. ಹಿಂದಿನ ಮತಾಂತರ-ವಿರೋಧಿ ಕಾನೂನುಗಳಲ್ಲಿನ ಆಕರ್ಷಣೆಯ ಪರಿಕಲ್ಪನೆಯು ಅಸ್ಪಷ್ಟವಾಗಿದೆ.
ಕರ್ನಾಟಕ ಮಸೂದೆ ಸೂಚಿಸುವ ಆಮೀಷಗಳೆಂದರೆ, ನಗದು ಅಥವಾ ಉಡುಗೊರೆಗಳು, ಯಾವುದೇ ಧಾರ್ಮಿಕ ಸಂಸ್ಥೆ ನಡೆಸುವ ಪ್ರತಿಷ್ಠಿತ ಶಾಲೆಯಲ್ಲಿ ಉದ್ಯೋಗ, ಉಚಿತ ಶಿಕ್ಷಣ ಹಾಗೂ ಉತ್ತಮ ಜೀವನಶೈಲಿ, ದೈವಿಕ ಆನಂದ. ನಿರ್ದಿಷ್ಟವಾಗಿ ಎರಡನೆಯ ಅಂಶವು ಬಹಳ ಹಿಂದಿನಿಂದಲೂ ಅರ್ಥರಹಿತವಾಗಿದೆ. 1972 ರಲ್ಲಿಯೇ, ಒರಿಸ್ಸಾ ಹೈಕೋರ್ಟ್ ಈ ಪರಿಕಲ್ಪನೆಯು ಅಸ್ಪಷ್ಟವಾಗಿದೆ ಮತ್ತು ಅನೇಕ ನಿರುಪದ್ರವ ಮತಾಂತರ ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ಗುರುತಿಸಿದೆ.
ಬಹುಮುಖ್ಯವಾಗಿ ಒಬ್ಬರ ಧರ್ಮವನ್ನು ಆಚರಿಸುವ/ಪ್ರಚಾರ ಮಾಡುವ ಹಕ್ಕನ್ನು ನೀಡಿರುವ ಸಂವಿಧಾನದ 25 (1) ನೇ ವಿಧಿಯ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ 1977 ರಲ್ಲಿ ಒರಿಸ್ಸಾ ಮತ್ತು ಮಧ್ಯಪ್ರದೇಶದ ಮತಾಂತರ ವಿರೋಧಿ ಕಾನೂನುಗಳನ್ನು ಎತ್ತಿಹಿಡಿಯಲು ಹೋದರೂ, ಅದರ ತೀರ್ಪು ‘ಆಮಿಷ/ಪ್ರಚೋದನೆ’ಯ ವ್ಯಾಖ್ಯಾನದ ಅಸ್ಪಷ್ಟತೆಯ ಸಮಸ್ಯೆಯನ್ನು ಪರಿಹರಿಸುವುದಿಲ್ಲ.
ಈ ಎಲ್ಲಾ ಅಸ್ತಿತ್ವದಲ್ಲಿರುವ ಕಾಳಜಿಗಳ ಮೇಲೆ ಕರ್ನಾಟಕದ ಮಸೂದೆ ಪ್ರಚೋದನೆಗೇ ಒತ್ತು ನೀಡಿದೆ. ಅದು ಮದುವೆಯಾಗುವ ಭರವಸೆ, ಆಚರಣೆ, ಮತ್ತು ಸಮಾರಂಭಗಳು ಅಥವಾ ಧರ್ಮದ ಯಾವುದೇ ಅವಿಭಾಜ್ಯ ಅಂಗಗಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು. ಇಲ್ಲಿ ಕೊನೆಯ ಎರಡರ ಅರ್ಥವೇನು? ಧರ್ಮವನ್ನು ಆಯ್ಕೆಮಾಡುವ ವ್ಯಕ್ತಿಯ ವೈಯಕ್ತಿಕ ಆಯ್ಕೆಯು ಇತರರ ಧಾರ್ಮಿಕ ಭಾವನೆಗಳಿಂದ ಹೇಗೆ ಪ್ರಭಾವಿತವಾಗಿರುತ್ತದೆ? ಇದನ್ನು ಸ್ಪಷ್ಟವಾಗಿ ವಿವರಿಸಲಾಗಿಲ್ಲ. ಯಾರ ಭಾವನೆಗಳನ್ನು ಇಲ್ಲಿ ಪರಿಗಣಿಸಬೇಕು?
ಕಾನೂನಿನಲ್ಲಿ ಇಂತಹ ಅಸ್ಪಷ್ಟ ಪರಿಕಲ್ಪನೆಯನ್ನು ಸೇರಿಸುವುದು ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಸಮಾಜವು ಒಪ್ಪದ ವೈಯಕ್ತಿಕ ಆಯ್ಕೆಯನ್ನು ಮಾಡಲು ಬಯಸುವವರಿಗೆ ಕಿರುಕುಳ ನೀಡಲು ಇನ್ನೂ ಹೆಚ್ಚಿನ ಆಹ್ವಾನವಾಗಿದೆ.
ಇದು ವ್ಯಕ್ತಿಯ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪವಲ್ಲದೇ ಮತ್ತೇನೂ ಅಲ್ಲ. ಈ ಆಯ್ಕೆಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಗೌಪ್ಯತೆಯ ಹಕ್ಕಿನೊಳಗೆ ಹೇಗೆ ಗುರುತಿಸಲಾಗಿದೆ ಎಂಬುದನ್ನು ರಾಜ್ಯದ ಮಸೂದೆ ನಿರ್ಲಕ್ಷಿಸುತ್ತದೆ.
ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಜೀವನ ಅಥವಾ ನಂಬಿಕೆಯನ್ನು ಅನುಸರಿಸುವ ಹಕ್ಕನ್ನು ರಕ್ಷಿಸುತ್ತದೆ. ಉಡುಗೆ ಮತ್ತು ಆಹಾರದ ವಿಷಯಗಳು, ಕಲ್ಪನೆಗಳು ಮತ್ತು ಸಿದ್ಧಾಂತಗಳು, ಪ್ರೀತಿ ಮತ್ತು ಪಾಲುದಾರಿಕೆಯು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವಾಗಿದೆ. ಕರ್ನಾಟಕ ಮತಾಂತರ ವಿರೋಧಿ ಮಸೂದೆ ಅಸಂವಿಧಾನಿಕ – ಮತ್ತು ಇತರ ರಾಜ್ಯಗಳ ಕಾನೂನುಗಳಿಗಿಂತ ಕೆಟ್ಟದಾಗಿದೆ. ಮದುವೆ ಮತ್ತು ಪೂರ್ವ ಸೂಚನೆಯ ಮೇಲಿನ ನಿಬಂಧನೆಗಳು ಖಾಸಗಿತನದ ಹಕ್ಕಿನ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಈ ಮಸೂದೆ ಉಲ್ಲಂಘಿಸುತ್ತದೆ.