ನವದೆಹಲಿ: ಕಳೆದ ಮೂರು ದಿನಗಳಿಂದ ಭೂಕಂಪನದಿಂದ 150ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ನೇಪಾಳದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನವಾಗಿದೆ. ಇದರಿಂದ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ತಿಳಿಸಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರಕ್ಕೆ 233 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ಅದು ಹೇಳಿದೆ.ದೆಹಲಿ ಮತ್ತು ಎನ್ ಸಿಆರ್ ನ ಹಲವೆಡೆ ಪೀಠೋಪಕರಣಗಳು ಅಲುಗಾಡಿದ ಬಗ್ಗೆ ವರದಿಯಾಗಿದ್ದು, ಭೂಕಂಪನ ಸ್ಥಳೀಯ ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಜನರು ವಸತಿ ಕಟ್ಟಡಗಳಿಂದ ಹೊರಬರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.