ಯಾದಗಿರಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಚುನಾವಣೆಯ ಹೊಸ್ತಿಲಲ್ಲಿಯೇ ಮತ್ತೊಂದು ಶಾಕ್ ಎದುರಾಗಿದೆ. ಬಿಜೆಪಿಗೆ ಗುಡ್ ಬೈ ಹೇಳಿ ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಬಿಜೆಪಿಗೆ ಮಾಲಕರೆಡ್ಡಿ ರಾಜೀನಾಮೆ ನೀಡಲಿದ್ದಾರೆ. ತಮ್ಮ ಪುತ್ರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸೋಕೆ ಮುಂದಾಗಿರುವ ಮಾಲಕರೆಡ್ಡಿ ಈ ವಿಚಾರವಾಗಿ ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ನಿನ್ನೆ ಮಲ್ಲಿಕಾರ್ಜುನ ಖರ್ಗೆ ಜೊತೆಯಲ್ಲಿ ಮಾತುಕತೆಯ ಸಂದರ್ಭದಲ್ಲಿ ಪುತ್ರಿಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗೋದು ಕನ್ಫರ್ಮ್ ಆದ ಹಿನ್ನೆಲೆಯಲ್ಲಿ ಇಂದು ರಾಜೀನಾಮೆ ನೀಡಲು ಮಾಲಕರೆಡ್ಡಿ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ರನ್ನು ಭೇಟಿ ಮಾಡಿದ ಬಳಿಕ ಬಿಜೆಪಿಗೆ ಮಾಲಕರೆಡ್ಡಿ ರಾಜೀನಾಮೆ ನೀಡಲಿದ್ದಾರೆ.
ಕಾಂಗ್ರೆಸ್ನಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಲಕರೆಡ್ಡಿ ಲೋಕಾಸಭಾ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿದ ರೂವಾರಿಗಳಲ್ಲಿ ಮಾಲಕರೆಡ್ಡಿ ಕೂಡ ಒಬ್ಬರು. ಆದರೆ ಈಗ ಹಳೆಯ ದ್ವೇಷವನ್ನು ಮರೆತು ಘರ್ ವಾಪ್ಸಿ ಮಾಡೋದಕ್ಕೆ ಮಾಲಕರೆಡ್ಡಿ ಮುಂದಾಗಿದ್ದಾರೆ.