ಬೆಂಗಳೂರು ಎಂ. ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ವಿವಾದಕ್ಕೆ ಗುರಿಯಾಗಿದೆ. ಕಳೆದ ವರ್ಷ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಹಿನ್ನೆಲೆ, ಕೆಲಕಾಲ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಿಲ್ಲಿಸಲಾಗಿತ್ತು.ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಲವು ಹೋರಾಟಗಳ ಬಳಿಕ ಸರ್ಕಾರದ ಅನುಮತಿ ಪಡೆದು ಐಪಿಎಲ್ 2026 ಪಂದ್ಯಗಳನ್ನು ಮರುಆರಂಭಿಸಿದೆ.

ಈಗಾಗಲೇ ಒಂದು ಪಂದ್ಯ ನಡೆದಿದ್ದು, ಏಪ್ರಿಲ್ 5ರಂದು ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಪಂದ್ಯಕ್ಕೆ ಸಿದ್ಧತೆ ನಡೆಯುತ್ತಿದೆ.ಈ ನಡುವೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚಿನ್ನಸ್ವಾಮಿ ಸ್ಟೇಡಿಯಂಗೆ ನೋಟಿಸ್ ಜಾರಿ ಮಾಡಿದೆ. ಜಾಹೀರಾತು ನಿಯಮ ಉಲ್ಲಂಘನೆ ಆರೋಪದಡಿ, ಸೆಕ್ಷನ್ 158 ಅನ್ವಯ ಎರಡು ಪುಟಗಳ ನೋಟಿಸ್ ನೀಡಿ, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

ಸ್ಟೇಡಿಯಂ ಒಳಗೆ ಹಾಗೂ ಹೊರಭಾಗದಲ್ಲಿ ಅಳವಡಿಸಿರುವ LED ಬೋರ್ಡ್‌ಗಳು ಮತ್ತು ಜಾಹೀರಾತು ಫಲಕಗಳಿಗೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಪಡೆಯದೇ ಇರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಈ ಜಾಹೀರಾತುಗಳಿಗೆ ಅಗತ್ಯ ಶುಲ್ಕ ಪಾವತಿಸಿಲ್ಲ ಎಂಬುದೂ ಪ್ರಾಧಿಕಾರ ಗಮನಕ್ಕೆ ಬಂದಿದೆ.ನೋಟಿಸ್ ಪ್ರಕಾರ, 7 ದಿನಗಳೊಳಗೆ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರವೇ ತೆರವುಗೊಳಿಸಿ, ದಂಡ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ನಿಯಮ ಉಲ್ಲಂಘನೆ ಮುಂದುವರೆದರೆ ₹2 ಲಕ್ಷದವರೆಗೆ ದಂಡ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ.
ಕಾನೂನು ಪ್ರಕಾರ, ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ಜಾಹೀರಾತು ಪ್ರದರ್ಶನ ನಡೆಸುವುದು ಕಾನೂನುಬಾಹಿರವಾಗಿದ್ದು, ದಂಡದ ಜೊತೆಗೆ ಜೈಲು ಶಿಕ್ಷೆಯೂ ವಿಧಿಸಬಹುದು. ಇದೇ ವಿಚಾರದಲ್ಲಿ ಕಳೆದ ವರ್ಷವೂ ಚಿನ್ನಸ್ವಾಮಿ ಸ್ಟೇಡಿಯಂಗೆ ನೋಟಿಸ್ ನೀಡಲಾಗಿತ್ತು. ಆದರೂ ಆ ನೋಟಿಸ್‌ಗೆ ಸಮರ್ಪಕ ಉತ್ತರ ನೀಡಲಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ, ಈ ಬಾರಿ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.






