ಪ್ರವಾದಿ ಮಹಮ್ಮದ್ ಜನ್ಮದಿನಾಚರಣೆ ಅಂಗವಾಗಿ ಸೆ.28ರಂದು ಉಳ್ಳಾಲದಲ್ಲಿ ನಡೆದ ಈದ್ ಮಿಲಾದ್ ಸ್ವಲಾತ್ ವಾಹನ ಜಾಥಾದಲ್ಲಿ ಯುವಕರು ನಿಷೇಧಿತ ಕರ್ಕಶ ಸೈಲೆನ್ಸರ್ ಮತ್ತು ಹಾರ್ನ್ ಗಳನ್ನ ಬಳಸಿ ಪ್ರಚೋದನೆ ನೀಡುವ ರೀತಿ ದಿನವಿಡೀ ಮೆರವಣಿಗೆ ನಡೆಸಿದ್ದು ಇವರನ್ನು ಪ್ರಶ್ನಿಸಬೇಕಿದ್ದ ಪೊಲೀಸರೇ ರಸ್ತೆಯುದ್ದಕ್ಕೂ ಸೈಲೆಂಟಾಗಿ ನೋಡುತ್ತ ಭದ್ರತೆ ನೀಡಿದ್ದರು. ಈ ಕುರಿತ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕಳೆದ ಗುರುವಾರ ಮುಸ್ಲಿಮರ ಪವಿತ್ರ ಈದ್ ಮಿಲಾದ್ ಹಬ್ಬವನ್ನ ಉಳ್ಳಾಲ ದರ್ಗಾದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಉಳ್ಳಾಲ ಕೋಟೆಪುರದಿಂದ ದರ್ಗಾದ ವರೆಗೆ ಬೃಹತ್ ಸ್ವಲಾತ್ ವಾಹನ ಜಾಥಾ ಶಿಸ್ತುಬದ್ಧವಾಗಿ ಬೆಳಗ್ಗೆ ಸಾಗಿ ಬಂದಿತ್ತು. ಈ ಜಾಥಾಕ್ಕೆ ಉಳ್ಳಾಲದಲ್ಲಿ ಮುಸ್ಲಿಮರು ಮಾತ್ರವಲ್ಲದೆ ಹಿಂದು, ಕ್ರೈಸ್ತರೂ ಸ್ವಾಗತಿಸಿದ್ದರು.
ಆದರೆ ಮಧ್ಯಾಹ್ನ 12 ಗಂಟೆ ನಂತರ ಉಳ್ಳಾಲ ದರ್ಗಾಕ್ಕೆ ಪ್ರತಿ ವರ್ಷದಂತೆ ಸಂಜೆ ತನಕವೂ ಕುತ್ತಾರು, ದೇರಳಕಟ್ಟೆ, ಮಡ್ಯಾರಿನಿಂದ ತಂಡೋಪ ತಂಡವಾಗಿ ಬೈಕ್, ಕಾರುಗಳಲ್ಲಿ ಬರಲಾರಂಭಿಸಿದ ಯುವಕರು ವಿಚಿತ್ರವಾಗಿ ವರ್ತಿಸಿದ್ದಲ್ಲದೆ ನಿಷೇಧಿತ ಕರ್ಕಶ ಸೈಲೆನ್ಸರ್, ಹಾರ್ನ್ ಗಳನ್ನ ಬಳಸಿ ಸ್ಥಳೀಯರಿಗೆ ಕಿರಿ, ಕಿರಿ ಉಂಟು ಮಾಡಿ ಪ್ರಚೋದನೆ ನೀಡುವಂತೆ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ
ಯುವಕರ ವರ್ತನೆಯಿಂದ ಅಲ್ಲಲ್ಲಿ ರಸ್ತೆ ಸಂಚಾರದಲ್ಲಿ ವ್ಯತ್ಯಯಗಳು ಉಂಟಾಗಿದಲ್ಲದೆ, ಸಾರ್ವಜನಿಕರು, ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದಾರೆ. ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲೂ ಒಟ್ಟುಗೂಡಿದ ಯುವಕರು ಘೋಷಣೆಗಳನ್ನ ಕೂಗಿ, ಪತಾಕೆಗಳನ್ನ ಹಾರಿಸಿ, ಕರ್ಕಶವಾಗಿ ಸೈಲೆನ್ಸರ್, ಹಾರ್ನ್ ಗಳಿಂದ ಅಬ್ಬರಿಸಿದ್ದಾರೆ.
ಪಕ್ಷ, ಸಂಘಟನೆಗಳ ಜಾಥಾಗಳಲ್ಲಿ ಹೆಲ್ಮೆಟ್ ರಹಿತ ತ್ರಿಬಲ್ ರೈಡ್ ಸಾಮಾನ್ಯವಾಗಿದ್ದು ಸಂಚಾರಿ ಪೊಲೀಸರು ಇದಕ್ಕೆ ರಿಯಾಯಿತಿ ನೀಡುತ್ತಾರೆ. ಆದರೆ ಪ್ರವಾದಿ ಜನ್ಮದಿನದ ಹೆಸರಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಪ್ರಚೋದನಕಾರಿ ವರ್ತಿಸಿ ಅಶಾಂತಿ ಸೃಷ್ಟಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಈ ರೀತಿಯ ವಾಹನ ಜಾಥಾಗಳಿಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.