ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಪತ್ರಕರ್ತರ ನಡುವಿನ ಗೊಂದಲ ಮತ್ತೆ ಮುಂದುವರೆದಿದ್ದು, ಪತ್ರಕರ್ತೆಯ ಪ್ರಶ್ನೆಗೆ ಗರಂ ಆದ ಅಣ್ಣಾಮಲೈ ವೇದಿಕೆಯಲ್ಲೇ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.
ಭಾನುವಾರ ಕೊಯಮತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡು ಕಿರಿಕ್ ಮಾಡಿಕೊಂಡಿದ್ದು, ಇದು ತಮಿಳುನಾಡಿನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರೆ ಪಕ್ಷದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಯನ್ನು ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿ ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಮಹಿಳಾ ಪತ್ರಕರ್ತೆಗೆ ಕ್ಯಾಮೆರಾ ಮುಂದೆ ಬರಲು ಹೇಳಿದ್ದಾರೆ.
ಯಾರು ಇಂತಹ ‘ಬುದ್ಧಿವಂತ’ ಪ್ರಶ್ನೆ ಕೇಳುತ್ತಿದ್ದಾರೆಂದು ತಮಿಳುನಾಡಿನ ಜನರು ನೋಡಲಿ. ಇಲ್ಲಿ ಬಾ ಅಕ್ಕ, ಇಲ್ಲಿಗೆ ಬಂದು ಮಾತಾಡು. ಇಂತಹ ಅದ್ಭುತ ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆಂದು ತಮಿಳುನಾಡಿನ ಜನತೆ ನೋಡಲಿ’ ಎಂದು ಹೇಳಿದ್ದಾರೆ. ಅಲ್ಲದೆ ಪ್ರಶ್ನೆ ಕೇಳುವುದಕ್ಕೆ ಒಂದು ರೂಢಿ ಇದೆ. ಒಬ್ಬ ವ್ಯಕ್ತಿಯು ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಹೊಂದಿರುವಾಗ, ಅವರು ಲಕ್ಷ್ಮಣ ರೇಖೆಯನ್ನು ದಾಟಬಾರದು. ಇದಕ್ಕೆ ಮಿತಿ ಇದೆ. ಯಾರೇ ಆಗಲಿ ಆ ರೂಢಿಯನ್ನು ದಾಟಬಾರದು. ಅಂತಹ ಜನರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ.