ಮುಂಬೈ: 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಐತಿಹಾಸಿಕ ಆಂದೋಲನ ನಡೆಸಿದ್ದ ಅಣ್ಣಾ ಹಜಾರೆ ಮತ್ತೊಂದು ಹೋರಾಟಕ್ಕೆ ಕರೆ ನೀಡಿದ್ದಾರೆ. ಅಣ್ಣಾ ಹಜಾರೆ ಜನವರಿ 30, 2026 ರಿಂದ ತಮ್ಮ ಗ್ರಾಮ ಮಹಾರಾಷ್ಟ್ರದ ರಾಲೇಗನ್ ಸಿದ್ಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಪ್ರಬಲ ಲೋಕಾಯುಕ್ತ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಜನವರಿ 30 ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯ ದಿನವಾಗಿದ್ದು, ಅಂದಿನಿಂದ ಮಹಾರಾಷ್ಟ್ರದಲ್ಲಿರುವ ತಮ್ಮ ಸ್ವಗ್ರಾಮ ರಾಲೇಗನ್ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವ ಹಜಾರೆ, ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಪಾಲ್ ಕಾಯ್ದೆಯನ್ನು ರೂಪಿಸಲಾಗಿದೆ. ಆದರೆ, ಸರ್ಕಾರ ಆ ಕಾಯ್ದೆಯ ಜಾರಿಯಲ್ಲಿ ವಿಳಂಬ ಮಾಡುತ್ತಿದೆ. ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
![]()
ಮಹಾರಾಷ್ಟ್ರ ಸರ್ಕಾರವು 2022ರ ಡಿಸೆಂಬರ್ 28ರಂದು ವಿಧಾನಸಭೆ ಮತ್ತು 2023ರ ಡಿಸೆಂಬರ್ 15ರಂದು ವಿಧಾನ ಪರಿಷತ್ತಿನಲ್ಲಿ ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಿವೆ. ರಾಜ್ಯಪಾಲರು ಮಸೂದೆಗೆ ಸಹಿ ಹಾಕಿದ್ದಾರೆ. ಆದರೂ, ಕಾಯ್ದೆಯನ್ನು ಈವರೆಗೆ ಜಾರಿಗೆ ತಂದಿಲ್ಲ ಎಂದು ಹಜಾರೆ ಆರೋಪಿಸಿದ್ದಾರೆ










