ಮೈಸೂರಿನಲ್ಲಿ ನಡೆದಿರುವ ಭೂಒತ್ತುವರಿ ವಿವಾದ ಇದೀಗ ರಾಜಕೀಯ ತಿರುವು ಪಡೆಯುತ್ತಿದೆ. ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಬೆನ್ನಿಗಂಟಿರುವ ಭೂ ಒತ್ತುವರಿ ವಿವಾದದ ಕುರಿತು ದನಿ ಎತ್ತಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಆ ಮೂಲಕ ಉಭಯ ನಾಯಕರ ನಡುವಿನ ರಾಜಕೀಯ ದ್ವೇಷ ಹೊಸ ಸ್ವರೂಪ ಪಡೆದುಕೊಂಡಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ. ಮಹೇಶ್ ನಡುವೆ ಉಂಟಾಗಿರುವ ಭೂವಿವಾದ ಆರೋಪ-ಪ್ರತ್ಯಾರೋಪ ಈಗಾಗಲೇ ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ವಿರುದ್ಧ ರೋಹಿಣಿ ಸಿಂಧೂರಿ ಮಾಡಿರುವ ಭೂಒತ್ತುವರಿ ಆರೋಪವನ್ನು ತಳ್ಳಿಹಾಕಿದ ಶಾಸಕ ಸಾ.ರಾ. ಮಹೇಶ್, ನಿರ್ಗಮಿತ ಮೈಸೂರಿನ ಜಿಲ್ಲಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ತಮ್ಮ ಮೇಲಿನ ಆರೋಪ ಸಾಬೀತಾದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುವ ಸವಾಲು ಹಾಕಿ ಪ್ರತಿಭಟನೆ ಸಹ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚಕಾರವೆತ್ತಿದ ಎಂಎಲ್ಸಿ ವಿಶ್ವನಾಥ್, ಶಾಸಕ ಸಾ.ರಾ. ಮಹೇಶ್ ವಿರುದ್ಧ ರೋಹಿಣಿ ಸಿಂಧೂರಿ ಮಾಡಿರುವ ಭೂಒತ್ತುವರಿ ಆರೋಪದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಅಲ್ಲದೇ ಈ ಪ್ರಕರಣದ ತನಿಖೆಗೆ ರೋಹಿಣಿ ಸಿಂಧೂರಿ ಅವರನ್ನೇ ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸುವಂತೆ ಆಗ್ರಹಿಸಿದ್ದ ಅವರು, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡುವುದಾಗಿ ತಿಳಿಸಿದ ವಿಶ್ವನಾಥ್, ನೇರವಾಗಿ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿದ್ದರು. ಅಲ್ಲದೇ ತಮ್ಮ ಮೇಲಿನ ಆರೋಪ ಸಾಬೀತಾದಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುವ ಸಾ.ರಾ.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ್ದ ವಿಶ್ವನಾಥ್, ಶಾಸಕರ ಈ ಹೇಳಿಕೆ ಜನರ ದಿಕ್ಕುತಪ್ಪಿಸುವ ಪ್ರಯತ್ನ ಎಂದು ಟೀಕಿಸಿದ್ದಾರೆ.

ವಿಶ್ವನಾಥ್ ಅವರ ಈ ಹೇಳಿಕೆ ಸಾ.ರಾ. ಮಹೇಶ್ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಬಿಜೆಪಿ ಎಂಎಲ್ಸಿ ಹಾಕಿದ ಸವಾಲು ಸ್ವೀಕರಿಸಿದ ಸಾ.ರಾ. ಮಹೇಶ್, ತಮ್ಮ ಮೇಲಿನ ಭೂ ಒತ್ತುವರಿ ತನಿಖೆಯನ್ನು ರೋಹಿಣಿ ಸಿಂಧೂರಿ ಅವರಿಂದಲೇ ಮಾಡಿಸಿ ಎನ್ನುವ ಮೂಲಕ ಹಳ್ಳಿಹಕ್ಕಿ ಒತ್ತಾಯಕ್ಕೆ ತಿರುಗೇಟು ನೀಡಿದ್ದಾರೆ. ಒಂದೆಡೆ ಸಾ.ರಾ.ಮಹೇಶ್ ವಿರುದ್ಧ ಕೇಳಿಬಂದಿರುವ ಭೂ ಒತ್ತುವರಿ ವಿವಾದದ ಕುರಿತು ತನಿಖೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಎಂಎಲ್ಸಿ ವಿಶ್ವನಾಥ್ ಪುತ್ರನ ವಿರುದ್ಧವೂ ಭೂಒತ್ತುವರಿ ಆರೋಪ ಕೇಳಿಬಂದಿದೆ. ಮೈಸೂರಿನ ದೀಪ ಗೃಹನಿರ್ಮಾಣ ಸಹಕಾರ ಸಂಘದಿಂದ ರಾಜಕಾಲುವೆ ಒತ್ತುವರಿ ಮಾಡಿರುವ ಕುರಿತು ವಿಶ್ವನಾಥ್ ಪುತ್ರನ ವಿರುದ್ಧ ಆರೋಪ ಕೇಳಿಬಂದಿದ್ದು, ಆ ಮೂಲಕ ಮೈಸೂರಿನ ಭೂಒತ್ತುವರಿ ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ.

ಎಂಎಲ್ಸಿ ವಿಶ್ವನಾಥ್ ಪುತ್ರನ ವಿರುದ್ಧ ಭೂ ಅಕ್ರಮದ ಕುರಿತು ಗಂಭೀರ ಆರೋಪ ಮಾಡಿರುವ ನ್ಯಾಯವಾದಿ, ಕರ್ನಾಟಕ ಪ್ರಜಾಪಾರ್ಟಿಯ ರಾಜ್ಯಾಧ್ಯಕ್ಷ, ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ವಿಶ್ವನಾಥ್ ಪುತ್ರ ದೀಪ ಗೃಹನಿರ್ಮಾಣ ಸಹಕಾರ ಸಂಘದಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ಆರೋಪ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ದಾಖಲೆ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.
ಶಾಸಕ ಸಾ.ರಾ.ಮಹೇಶ್, ತಮ್ಮ ವಿರುದ್ಧ ದನಿ ಎತ್ತಿರುವ ವಿಶ್ವನಾಥ್ ಪುತ್ರನ ಭೂ ಅಕ್ರಮದ ದಾಖಲೆ ಬಿಡುಗಡೆ ಮಾಡಿಸುವ ಮೂಲಕ, ಹಳ್ಳಿಹಕ್ಕಿಯ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಕೈಹಾಕಿದ್ರಾ? ಎಂಬ ಅನುಮಾನ ಮೂಡಿದೆ. ಸಾ.ರಾ. ಮಹೇಶ್ ವಿರುದ್ಧ ಕೇಳಿ ಬಂದಿರುವ ಭೂಒತ್ತುವರಿ ವಿವಾದದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದರು, ಎಚ್.ವಿಶ್ವನಾಥ್ ಅವರನ್ನು ಹೊರತುಪಡಿಸಿ ಮೈಸೂರಿನ ಯಾವುದೇ ಜನಪ್ರತಿನಿಧಿಗಳು ಸಹ ಈ ಬಗ್ಗೆ ಚಕಾರವೆತ್ತಿಲ್ಲ. ಜನಪ್ರತಿನಿಧಿಗಳ ಈ ಮೌನ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಈಗಾಗಲೇ ಕೇಳಿಬಂದಿರುವಂತೆ ಬಿಜೆಪಿ ಶಾಸಕ ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಸಹ ಭೂಒತ್ತುವರಿಯಲ್ಲಿ ಶಾಮೀಲಾಗಿರುವ ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಾಗುತ್ತಿದೆ.

ಇಂದು ಮೈಸೂರಿನಲ್ಲಿ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತಿದ್ದ ಬಿಲ್ಡರ್ ಗಳೆಲ್ಲ ಕೇವಲ 10-15 ವರ್ಷಗಳ ಹಿಂದೆ ಸಿಟಿ ಬಸ್ಸಿನಲ್ಲಿ ಓಡಾಡುತಿದ್ದರು ಎಂದು ರಿಯಲ್ ಎಸ್ಟೇಟ್ ಏಜೆಂಟ್ ಪರಶುರಾಮ ಅಭಿಪ್ರಾಯ ಪಟ್ಟಿದ್ದಾರೆ. ಈ ಭೂ ಮಾಫಿಯಾಗೆ ಸರ್ಕಾರಿ ಜಮೀನುಗಳ ಮೇಲೆಯೇ ಕಣ್ಣು. ಭ್ರಷ್ಟ ಅಧಿಕಾರಿಗಳಿಗೆ ಕೈ ತುಂಬಾ ಲಂಚ ನೀಡಿದರೆ ಅವರು ರಾತ್ರೋ ರಾತ್ರಿ ಖಾತೆಯನ್ನೇ ಮಾಡಿಕೊಡುತ್ತಾರೆ. ಅದರಲ್ಲೂ ಸರ್ಕಾರೀ ಜಮೀನುಗಳನ್ನೇ ಒತ್ತುವರಿ ಮಾಡಿಕೊಂಡು ಅದನ್ನು ಪುನಃ ಮೂಡ ಗೆ ಮಾರಿ ಕೋಟಿಗಟ್ಟಲೆ ಲಾಭ ಗಳಿಸಿಕೊಂಡಿರುವ ಬಿಲ್ಡರ್ ಗಳೂ ಇಲ್ಲಿದ್ದಾರೆ. ಒಟ್ಟಿನಲ್ಲಿ ಈ ಭೂ ಹಗರಣದಲ್ಲಿ ಇಲ್ಲಿ ಕಾಂಗ್ರೆಸ್ , ಜೆಡಿಎಸ್, ಬಿಜೆಪಿ ಮೂರು ಪಕ್ಷಗಳಿಗೆ ಸೇರಿದವರಿದ್ದಾರೆ. ಹೀಗಾಗಿ ಹೆಚ್ಚಿನ ಭೂ ಹಗರಣಗಳು ಬೆಳಕಿಗೆ ಬರುತ್ತಿಲ್ಲ. ನೀನು ಸುಮ್ಮನಿದ್ದರೆ ನಾನೂ ಸುಮ್ಮನಿರುತ್ತೇನೆ ಎಂಬುದು ಇವರ ಒಳ ಒಪ್ಪಂದವಾಗಿದೆ. ಇಂದು ಡಿಸಿ ರೋಹಿಣಿ ಸಿಂಧೂರಿ ಅವರು ಬಯಲಿಗೆಳೆದಿರುವ ಕೇಲವ ನಾಲ್ಕು ಪ್ರಕರಣಗಳೇ ಅಲ್ಲದೆ ಹಲವು ಪ್ರಕರಣಗಳಲ್ಲಿ ಸರ್ಕರಿ ಭೂಮಿ ಒತ್ತುವರಿ ಅಗಿದೆ. ಒಟ್ಟಾರೆ ಮೈಸೂರಿನಲ್ಲಿ ನಡೆದಿರುವ ಭೂಒತ್ತುವರಿ ವಿವಾದ ದಿನಕ್ಕೊಂದು ದಿಕ್ಕು ಪಡೆಯುತ್ತಿದ್ದು, ಅಂತಿಮವಾಗಿ ಯಾರ ಆರೋಪ ನಿಜವಾಗುತ್ತೇ? ಯಾರ ತಲೆದಂಡವಾಗುತ್ತೇ? ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.