ಭ್ರಷ್ಟಾಚಾರ ಮಾಡಿದ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದ್ದು, ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗಿದೆ.
ಚಂದ್ರಬಾಬು ನಾಯ್ಡು ಅವರು ಅಧಿಕಾರಾವಧಿಯಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಸ್ಥಾಪಿಸಲಾಗಿದ್ದ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ 317 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆಂಬ ಆರೋಪ ಎದುರಿಸುತ್ತಿದ್ದು, ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆಯ ಅಧಿಕಾರಿಗಳು ಶನಿವಾರ ಮುಂಜಾನೆ ನಾಯ್ಡು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅದಕ್ಕೂ ಮುನ್ನ ಹೈಡ್ರಾಮವೇ ನಡೆದಿದ್ದು, ತಡರಾತ್ರಿ ವಾರೆಂಟ್ ಜೊತೆ ಬಂದ ಅಧಿಕಾರಿಗಳೊಂದಿಗೆ ನಾಯ್ಡು ಬೆಂಬಲಿಗರು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಪೊಲೀಸರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನಾಯ್ಡು ಆರೋಪಿಸಿದ್ದಾರೆ. “ನನ್ನ ಹೆಸರು ಎಲ್ಲಿದೆ ಎಂದು ನನಗೆ ತೋರಿಸಿ. ಮೂಲಭೂತ ಸಾಕ್ಷ್ಯಗಳಿಲ್ಲದೆ ಅವರು ನನ್ನನ್ನು ಹೇಗೆ ಬಂಧಿಸುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರವನ್ನು ಮಾಡಿಲ್ಲ. ಯಾವುದೇ ಸರಿಯಾದ ಮಾಹಿತಿಯಿಲ್ಲದೆ ಸಿಐಡಿ ನನ್ನನ್ನು ಬಂಧಿಸಿದೆ ಎಂದು ನಾಯ್ಡು ಹೇಳಿದರು.
“ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಯಾವುದೇ ಸರಿಯಾದ ಮಾಹಿತಿಯಿಲ್ಲದೆ ಸಿಐಡಿ ನನ್ನನ್ನು ಬಂಧಿಸಿದೆ. ಸಾಕ್ಷ್ಯವನ್ನು ತೋರಿಸಲು ನಾನು ಅವರನ್ನು ಕೇಳಿದೆ ಆದರೆ ಅವರು ತೋರಿಸಲು ನಿರಾಕರಿಸಿದರು. ನನ್ನ ಪಾತ್ರವಿಲ್ಲದೆ ಎಫ್‌ಐಆರ್‌ಗೆ ನನ್ನ ಹೆಸರನ್ನು ಲಗತ್ತಿಸಿದ್ದಾರೆ ” ಎಂದು ನಾಯ್ಡು ಹೇಳಿದ್ದಾರೆ.
ಟಿಡಿಪಿ ಮುಖ್ಯಸ್ಥರನ್ನು ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ಜ್ಞಾನಪುರಂನಲ್ಲಿರುವ ಆರ್ ಕೆ ಫಂಕ್ಷನ್ ಹಾಲ್‌ನಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮುಂಜಾನೆ, ಆಪಾದಿತ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಸಿಐಡಿಯಿಂದ ಬಂಧನ ವಾರಂಟ್ ಜಾರಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಹಿರಿಯ ನಾಯಕನ ವಿರುದ್ಧ ತಡರಾತ್ರಿ ಪೊಲೀಸರು ಕ್ರಮ ಕೈಗೊಂಡಿರುವುದನ್ನು ಪಕ್ಷದ ಮುಖಂಡರು ಖಂಡಿಸಿದ್ದಾರೆ.