ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಆಗಿದೆ. ಮುಂದಿನ ಚುನಾವಣೆಗೆ ಹೋಗುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಎಲ್ಲಾ ವರ್ಗವನ್ನು ಮೆಚ್ಚಿಸಲು ಬಜೆಟ್ನಲ್ಲಿ ಸಾಕಷ್ಟು ಸರ್ಕಸ್ ಮಾಡಿದ್ದಾರೆ. 8 ಪ್ರಮುಖ ಹೊಸ ಘೋಷಣೆಗಳನ್ನು ಮಾಡಿರುವ ಬಸವರಾಜ ಬೊಮ್ಮಾಯಿ, ಸರ್ಕಾರಿ ಕಾಲೇಜಿನ ಪಿಯು, ಡಿಗ್ರಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಜಾರಿ ಮಾಡ್ತೇವೆ ಎಂದಿದ್ದಾರೆ. ಆದರೆ ಸರ್ಕಾರಿ ಕಾಲೇಜಿನಲ್ಲಿ ಫೀ ಎಷ್ಟಿದೆ ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕಿದೆ. ಸರ್ಕಾರಿ ಶಾಲಾ-ಕಾಲೇಜುಗಳ ಮಕ್ಕಳಿಗೆ 1000 ಬಸ್ ನೀಡಲು ಹೊಸ ಯೋಜನೆ ಮಾಡಿದ್ದೇವೆ, ಅದಕ್ಕಾಗಿ 100 ಕೋಟಿ ನೀಡಿದ್ದೇನೆ ಎಂದಿದ್ದಾರೆ. ಆದರೆ ಇರುವ ಬಸ್ಗಳಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳದೆ ಹೋಗುವುದನ್ನು ಮೊದಲು ತಡೆದರೆ ಉತ್ತಮ.
ರೈತರಿಗೆ ಭೂಸಿರಿ ಯೋಜನೆ ಜಾರಿ ಮಾಡ್ತೇವೆ ಎಂದಿದ್ದು, ಕಿಸಾನ್ ಕಾರ್ಡ್ ರೈತರಿಗೆ 10 ಸಾವಿರ ಸಹಾಯಧನ ನೀಡ್ತೇವೆ ಎಂದಿದ್ದಾರೆ. ಆದರೆ ರಸಗೊಬ್ಬರ ದರ ಗಗನಕ್ಕೇರಿದ್ದು, ದರ ಇಳಿಕೆ ಬಗ್ಗೆ ಮಾತನಾಡಿಲ್ಲ. ಹಳ್ಳಿ ಮುತ್ತು ಯೋಜನೆ ಮಾಡಲಿದ್ದು, CET ಯಲ್ಲಿ ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಉಚಿತ ವೃತ್ತಿಪರ ಕೋರ್ಸ್ ಜಾರಿಗೆ ನಿರ್ಧಾರ ಮಾಡಿದ್ದಾರೆ. ಆದರೆ ಸರ್ಕಾರದ ಕಾಲೇಜುಗಳಲ್ಲಿ ಶಿಕ್ಷಣ ಮೌಲ್ಯ ಹೇಗಿದೆ..? ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ, ವೇತನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ವಾತ್ಸಲ್ಯ ಯೋಜನೆಯಲ್ಲಿ ಹಳ್ಳಿಗಾಡಿನ 6 ವರ್ಷದ ಮಕ್ಕಳಿಗೆ ವರ್ಷಕ್ಕೆ 2 ಸಲ ಉಚಿತ ಆರೋಗ್ಯ ತಪಾಸಣೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಗೃಹಿಣಿ ಶಕ್ತಿ ಯೋಜನೆಯಲ್ಲಿ ಭೂರಹಿತ ಮಹಿಳಾ ಕಾರ್ಮಿಕರಿಗೆ ವರ್ಷಕ್ಕೆ 6 ಸಾವಿರ ಸಹಾಯಧನ, 1 ಲಕ್ಷ ಗೃಹಿಣಿಯರಿಗೆ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡ್ತೇವೆ ಎಂದಿದ್ದಾರೆ. ಆದರೆ ಗೃಹಿಣಿಯರು ಗ್ಯಾಸ್ ದರ ಭರಿಸಲಾಗದೆ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಕಿಂಚಿತ್ತು ಮಾತನಾಡಿಲ್ಲ.
ನಮ್ಮ ನೆಲೆ ಯೋಜನೆ ಜಾರಿ ಮಾಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ಗೃಹಮಂಡಳಿಯಿಂದ ಆರ್ಥಿಕ ದುರ್ಬಲ ವರ್ಗದವರಿಗೆ 10 ಸಾವಿರ ನಿವೇಶನ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಕಳೆದ ಮೂರು ವರ್ಷದಲ್ಲಿ ರಾಜ್ಯ ಸರ್ಕಾರ ಎಷ್ಟು ಜನರಿಗೆ ವಸತಿ ಯೋಜನೆ ಕೊಟ್ಟಿದ್ದೇವೆ ಎನ್ನುವ ಮಾಹಿತಿ ಹೇಳಿದ್ದರೆ, ಈ ಘೋಷಣೆಯನ್ನು ಒಪ್ಪಿಕೊಳ್ಳಬಹುದು. ಕಲಿಕೆ ಜೊತೆಗೆ ಕೌಶಲ್ಯ ತರಬೇತಿ ಕೊಡ್ತೇವೆ ಎಂದಿರುವ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಆದ್ಯತಾ ಹಾಗೂ ಉದ್ಯಮಶೀಲ ತರಬೇತಿ ನೀಡ್ತೇವೆ ಎಂದಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.
ರೈತರಿಗೆ ಬಡ್ಡಿ ರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದರೆ ಯಾವುದೇ ಸಹಕಾರ ಸಂಘದಿಂದ 50 ಸಾವಿರಕ್ಕಿಂತ ಹೆಚ್ಚಿನ ಸಾಲ ಕೊಡ್ತಿಲ್ಲ ಎನ್ನುವುದು ರೈತರನ್ನು ಕೇಳಿ ನೋಡಿದ್ರೆ ಗೊತ್ತಾಗುತ್ತದೆ. ಅಷ್ಟು ಮಾತ್ರವಲ್ಲದೆ 50 ಸಾವಿರ ಸಾಲ ಕೊಡಲು ಅಧಿಕಾರಿಗಳ ಕಿರುಕುಳ ಎಷ್ಟಿದೆ ಎನ್ನುವುದನ್ನು ಅನ್ನದಾತರನ್ನು ಕೇಳಿದ್ರೆ ಸತ್ಯ ಗೊತ್ತಾಗುತ್ತದೆ. BPL ಪಡಿತರ ಚೀಟಿ ಹೊಂದಿದವರಿಗೆ ನೀಡುತ್ತಿರುವ ಅಕ್ಕಿಯನ್ನು 5 ಕೆಜಿಯಿಂದ 6 ಕೆಜಿಗೆ ಹೆಚ್ಚಳ ಮಾಡ್ತೇವೆ ಎಂದಿದ್ದಾರೆ. ಆದರೆ ಕಳೆದ ನಾಲ್ಕೈದು ತಿಂಗಳಿಂದ 5 ಕೆಜಿ ಅಕ್ಕಿ ಹೊರತುಪಡಿಸಿ ಗೋದಿ, ಸಕ್ಕರೆ, ಬೇಳೆ ಯಾವುದನ್ನೂ ನೀಡದಿರುವುದು ಯಾಕೆ ಎನ್ನುವುದನ್ನು ಸಿಎಂ ಬಹಿರಂಗ ಮಾಡಬೇಕಿದೆ.
8 ಜಿಲ್ಲೆಗಳಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ವಿಭಾಗ ಮಾಡ್ತೇವೆ ಎಂದು ಬಜೆಟ್’ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ತಡೆಯಾಗಿರುವ ಖಾಸಗಿ ಆಸ್ಪತ್ರೆ ಯಾವುದು ಎನ್ನುವುದನ್ನು ಬಹಿರಂಗ ಮಾಡಬೇಕಿದೆ. ಇನ್ನು ರಾಜ್ಯದಲ್ಲಿ 19 ಹೊಸ ESI ಆಸ್ಪತ್ರೆಗಳ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ನಿರ್ಮಾಣ ಆಗಿರುವ ಹೈಟೆಕ್ ಇಎಸ್’ಐ ಆಸ್ಪತ್ರೆಯನ್ನು ಉಪಯೋಗ ಮಾಡಿಕೊಳ್ಳದೆ ಬಿಟ್ಟಿರುವುದು ಯಾಕೆ..? ಎನ್ನುವುದನ್ನು ಬಹಿರಂಗ ಮಾಡಬೇಕಿದೆ. ಕ್ಯಾನ್ಸರ್ ಪತ್ತೆಗೆ ಫಸ್ಟ್ ಟೈಂ ಜೀವಸುಧೆ ಲ್ಯಾಬ್ ಹಾಗು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರಗಿಯಲ್ಲಿ IVF ಸೆಂಟರ್’ಗಳನ್ನು ತೆರೆಯುವ ಘೋಷಣೆ ಮಾಡಿರುವುದು ಉತ್ತಮ ಬೆಳವಣಿಗೆ ಎನ್ನಬಹುದು. ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಹಾಯಕರು, ಗ್ರಾಮ ಪಂಚಾಯ್ತಿ ಸದಸ್ಯರು, ಅತಿಥಿ ಶಿಕ್ಷಕರು, ಲೈಬ್ರರಿ ಸಿಬ್ಬಂದಿಯ ಗೌರವಧನ 1 ಸಾವಿರ ಹೆಚ್ಚಳ ಮಾಡಿದ್ದಾರೆ ಎನ್ನುವುದು ಮೂಗಿಗೆ ತುಪ್ಪ ಸವರುವ ಕೆಲಸ ಎನ್ನಬಹುದು.